ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ಯುವಜನರ ಪಾತ್ರ ಮಹತ್ವದ್ದಾಗಿದೆ.
ಕನ್ನಡಪ್ರಭ ವಾರ್ತೆ ಶಿರಹಟ್ಟಿ
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ಯುವಜನರ ಪಾತ್ರ ಮಹತ್ವದ್ದಾಗಿದೆ. ಯುವಕರು ಪ್ರಜಾಪ್ರಭುತ್ವದ ಮೌಲ್ಯಗಳು, ಸಂವಿಧಾನದ ಆಶಯಗಳು ಹಾಗೂ ತಮ್ಮ ಹಕ್ಕು-ಕರ್ತವ್ಯಗಳ ಬಗ್ಗೆ ಅರಿವು ಬೆಳೆಸಿಕೊಂಡು ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಡಾ. ನಂದಾ ಹಣಬರಟ್ಟಿ ಹೇಳಿದರು.ಗುರುವಾರ ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಆಯೋಜನೆ ಮಾಡಲಾಗಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ಅಂಗವಾಗಿ ನಡೆದ ಯುವ ಸಂಸತ್ತು ಅಧಿವೇಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯುವಕರಲ್ಲಿ ಸಂಸದೀಯ ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಆಯೋಜಿಸಲಾಗುವ ಯುವ ಸಂಸತ್ ಕಾರ್ಯಕ್ರಮವು ವಿದ್ಯಾರ್ಥಿಗಳು ಹಾಗೂ ಯುವಜನರಿಗೆ ಪ್ರಜಾಪ್ರಭುತ್ವದ ಕಾರ್ಯವೈಖರಿಯನ್ನು ಪ್ರಾಯೋಗಿಕವಾಗಿ ತಿಳಿದುಕೊಳ್ಳಲು ಉತ್ತಮ ವೇದಿಕೆಯಾಗಿದೆ ಎಂದರು.
ಪ್ರಜಾಪ್ರಭುತ್ವವೆಂದರೆ ಕೇವಲ ಚುನಾವಣೆಗಳಲ್ಲಿ ಮತ ಚಲಾಯಿಸುವುದಷ್ಟೇ ಅಲ್ಲ. ಸಾರ್ವಜನಿಕ ಸಮಸ್ಯೆಗಳ ಕುರಿತು ಚರ್ಚಿಸುವುದು, ಭಿನ್ನಾಭಿಪ್ರಾಯ ಗೌರವಿಸುವುದು, ಸಂವಿಧಾನಬದ್ಧ ಮೌಲ್ಯ ಪಾಲಿಸುವುದು ಹಾಗೂ ಸಮಾಜದ ಜವಾಬ್ದಾರಿಯುತ ನಾಗರಿಕರಾಗಿ ನಡೆದುಕೊಳ್ಳುವುದು ಕೂಡ ಪ್ರಜಾಪ್ರಭುತ್ವದ ಭಾಗವಾಗಿದೆ. ಈ ಹಿನ್ನೆಲೆ ಯುವ ಸಂಸತ್ ಕಾರ್ಯಕ್ರಮವು ಯುವಕರಲ್ಲಿ ನಾಯಕತ್ವ ಗುಣ, ಸಂವಹನ ಕೌಶಲ್ಯ, ತಾರ್ಕಿಕ ಚಿಂತನೆ ಹಾಗೂ ಸಾಮಾಜಿಕ ಜವಾಬ್ದಾರಿಯ ಪ್ರಜ್ಞೆ ಬೆಳೆಸಲು ಸಹಕಾರಿಯಾಗಿದೆ ಎಂದು ಹೇಳಿದರು.ಇಂದಿನ ಯುವಕರು ನಾಳಿನ ಸಮಾಜ ಹಾಗೂ ರಾಷ್ಟ್ರದ ನಿರ್ಧಾರ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಆದ್ದರಿಂದ ವಿದ್ಯಾರ್ಥಿ ದೆಸೆಯಿಂದಲೇ ಸಂವಿಧಾನ, ಸಂಸದೀಯ ಪ್ರಜಾಪ್ರಭುತ್ವ, ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ಅರಿವು ಹೊಂದುವುದು ಅಗತ್ಯ. ಯುವ ಸಂಸತ್‌ನಂತಹ ಕಾರ್ಯಕ್ರಮಗಳ ಮೂಲಕ ಯುವಕರನ್ನು ಸಾರ್ವಜನಿಕ ಜೀವನದತ್ತ ಪ್ರೇರೇಪಿಸುವ ಪ್ರಯತ್ನಗಳು ನಿರಂತರವಾಗಿ ನಡೆಯಬೇಕು ಎಂದರು.
ಈ ವೇಳೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗೋಪಾಲ ನಾಯಕ, ಬಿಇಒ ಶಿವರಾಜ ಸೀಮಿಕೇರಿ, ಎಂ.ಎಸ್. ಸಂಕನೂರ, ಪ್ರಾಚಾರ್ಯ ಬಿ.ಜಿ. ಗಿರಿತಮ್ಮಣ್ಣವರ, ರಾಜೇಶ್ವರಿ ಕಪ್ಪತ್ತನವರ, ರಾಘವೇಂದ್ರ ಜೋಶಿ ಮುಂತಾದವರು ಇದ್ದರು.