ಕನ್ನಡಪ್ರಭ ವಾರ್ತೆ ಯಲ್ಲಾಪುರಐವತ್ತರ ದಶಕದಲ್ಲೇ ನಮ್ಮ ಹಿರಿಯರ ದೂರದರ್ಶಿತ್ವ ಅಗಾಧವಾದದ್ದು. ಜಿಲ್ಲೆಯಲ್ಲಿ ದಿ.ಕಡವೆಯವರು ಟಿಎಸ್ ಎಸ್ ನಂತಹ ಸಂಸ್ಥೆ ಕಟ್ಟಿ ರೈತರ ಬದುಕಿಗೆ ದಾರಿ ತೋರಿಸಿದ್ದಾರೆ. ಅಂತಹ ಹಿರಿಯ ಅನೇಕ ಸಹಕಾರಿಗಳಿಂದಾಗಿ ನಮ್ಮ ಜಿಲ್ಲೆಯಲ್ಲಿ ಸಹಕಾರಿ ಸಂಸ್ಥೆ ಗಟ್ಟಿಯಾಗಿ ಉಳಿಯಲು ಸಾಧ್ಯವಾಗಿದೆ ಎಂದು ಯು.ಕೆ.ಸೌಹಾರ್ದ ಸಹಕಾರಿಯ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.ಮಂಗಳವಾರ ಯಲ್ಲಾಪುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ವಜ್ರಮಹೋತ್ಸವದಲ್ಲಿ ಹಿಂದಿನ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯನಿರ್ವಾಹಕರು ಮತ್ತು ಸಂಸ್ಥೆಯ ಕಾನೂನು ಸಲಹೆಗಾರರಿಗೆ ಸನ್ಮಾನ ಮಾಡಿ ಮಾತನಾಡಿದರು. ಅಂದಿನ ಹಣವಿಲ್ಲದ ಕಷ್ಟದ ಕಾಲದಲ್ಲಿ ಅಡಕೆ ಬೆಳೆಗಾರರ ನೆರವಿಗೆ ಸಹಕಾರಿ ಸಂಸ್ಥೆ ಬಂದಿರುವುದರಿಂದ ಬೆಳೆಗಾರರು ನಿಟ್ಟುಸಿರು ಬಿಡುತ್ತಿದ್ದಾರೆ. ಸಹಕಾರಿ ವಲಯ ಒಬ್ಬ ವ್ಯಕ್ತಿಯ ಕಲ್ಪನೆಯಲ್ಲ. ಸರ್ವರ ಸದಭಿಪ್ರಾಯ ಪಡೆದು ಸಹಕಾರಿ ತತ್ವ ಬೆಳೆದು ಬಂದಿದೆ. ಆ ಕಾಲದಲ್ಲಿ ಖಾಸಗಿ ಲೇವಾದೇವಿ ವ್ಯವಹಾರ ಹೆಚ್ಚಿತ್ತು. ಸಹಕಾರಿ ಸಂಘ ಬಂದ ಮೇಲೆ ಕಡಿಮೆಯಾಯಿತು. ಇದು ಗಾಂಧಿಯವರ ಕನಸೂ ಆಗಿತ್ತು. ಆ ದೃಷ್ಟಿಯಿಂದ ಈ ಸಂಸ್ಥೆ ಕಳೆದ ೭೫ ವರ್ಷಗಳಲ್ಲಿ ಉತ್ತಮ ಸಾಧನೆ ಮಾಡಿ ತನ್ನ ಸದಸ್ಯರಿಗೆ ಬೆನ್ನೆಲುಬಾಗಿ ನಿಂತಿದೆ ಎಂದರು.ಕೈಗಾರಿಕಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಿ.ಶಂಕರ ಭಟ್ಟ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವನಿಗೆ ಸಾಮಾನ್ಯ ಜ್ಞಾನ, ಕಾನೂನಿನ ಅರಿವು, ಲೆಕ್ಕಪತ್ರದ ಕುರಿತು ಸರಿಯಾದ ಅನುಭವ, ಆರ್ಥಿಕತೆಯ ಸಮತೋಲನ ಮಹತ್ವವನ್ನು ಅರಿತುಕೊಳ್ಳದಿದ್ದರೆ ಸಹಕಾರಿ ಕ್ಷೇತ್ರದಲ್ಲಿ ದಕ್ಷತೆಯ ಕೆಲಸ ಮಾಡಲಾಗದು. ಕೆಲವು ಕಡೆ ಸಂಸ್ಥೆ ಮುಳುಗಿಹೋಗುವುದಕ್ಕೂ ಕಾರಣವಾಗಿದೆ ಎಂದರು. ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಉಮೇಶ ಭಾಗ್ವತ, ವಿಕಾಸ್ ಅರ್ಬನ್ ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ ಸಾಂದರ್ಭಿಕವಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ನಾಗರಾಜ ಕವಡಿಕೇರಿ ಮಾತನಾಡಿ, ಏಳು-ಬೀಳು, ಟೀಕೆ-ಟಿಪ್ಪಣೆಗಳು ಸಹಜ. ಆದರೆ ಸಂಸ್ಥೆ ಮತ್ತು ರೈತರ ಗ್ರಾಹಕರ ಹಿತವನ್ನು ಲಕ್ಷಿಸಿ ಕಾರ್ಯ ನಿರ್ವಹಿಸಿಕೊಂಡು ಬಂದಿದ್ದೇವೆ ಎಂಬ ಹೆಮ್ಮೆ ನಮಗೆಲ್ಲ ಇದೆ ಎಂದರು.ವೇದಿಕೆಯಲ್ಲಿ ಉದ್ಯಮಿ ಬಾಲಕೃಷ್ಣ ನಾಯಕ, ವಿವಿಧ ಸಹಕಾರಿ ಸಂಘದ ಅಧ್ಯಕ್ಷರಾದ ನಾರಾಯಣ ಭಟ್ಟ ಬಟ್ಲಗುಂಡಿ, ಆರ್.ವಿ. ಹೆಗಡೆ, ಸುಬ್ಬಣ್ಣ ಬೋಳ್ಮನೆ, ಶೇಷಗಿರಿ ಭಟ್ಟ, ಎಸ್.ಕೆ. ಭಾಗ್ವತ್, ಆರ್.ಎಸ್. ಭಟ್ಟ, ಟಿ.ವಿ. ಭಾಗ್ವತ್, ಮಹೇಶ ದೇಸಾಯಿ, ಪರಮೇಶ್ವರ ಕೊಂಬೆ, ಸಂಘದ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು. ಸಿಇಒ ಎಂ.ಎಸ್. ಹೆಗಡೆ ಸ್ವಾಗತಿಸಿದರು. ಉಪಾಧ್ಯಕ್ಷ ತಿಮ್ಮಣ್ಣ ಹೆಗಡೆ ತೊಂಡೆಕೆರೆ ಪ್ರಾಸ್ತಾವಿಕ ಮಾತನಾಡಿದರು. ಸುಬ್ರಾಯ ದಾನ್ಯಕೊಪ್ಪ, ಗೋಪಾಲಕೃಷ್ಣ ಭಟ್ಟ, ಸುಬ್ಬಣ್ಣ ಉದ್ದಾಬೈಲ್ ನಿರ್ವಹಿಸಿದರು. ಸಿಬ್ಬಂದಿ ಸುದರ್ಶನ ಭಟ್ಟ ವಂದಿಸಿದರು.