ಸಾರಾಂಶ
ಕನ್ನಡಪ್ರಭ ವಾರ್ತೆ ಮೇಲುಕೋಟೆ
ಆಷಾಢ ಜಾತ್ರೆ ಕೃಷ್ಣರಾಜಮುಡಿ ಬ್ರಹ್ಮೋತ್ಸವದ ಅಂಗವಾಗಿ ಬುಧವಾರ ರಾತ್ರಿ ಮೈಸೂರು ಸಂಸ್ಥಾನದ ಕುಲದೈವ ಶ್ರೀ ಚೆಲುವನಾರಾಯಣಸ್ವಾಮಿಗೆ ಶ್ರೀಕೃಷ್ಣರಾಜಮುಡಿ ಕಿರೀಟಧಾರಣ ಮಹೋತ್ಸವ ವೈಭವದಿಂದ ನೆರವೇರಿತು.ರಾತ್ರಿ 7.30ಕ್ಕೆ ಗಂಡುಬೇರುಂಡ ರೂಪಿಯಾದ ಅರ್ಧಚಂದ್ರ ಪ್ರಭಾವಳಿಯಲ್ಲಿ ಶ್ರೀದೇವಿ ಭೂದೇವಿ ಸಮೇತನಾಗಿ ಗರುಡಾರೂಢನಾದ ಚೆಲುವನಾರಾಯಣಸ್ವಾಮಿಗೆ ವಜ್ರಖಚಿತ ಕೃಷ್ಣರಾಜಮುಡಿ ಕಿರೀಟ ಮತ್ತು ರಾಜಲಾಂಛನ ಗಂಡುಬೇರುಂಡ ಪದಕ ತೊಡಿಸಿ ಮಹಾಮಂಗಳಾರತಿ ನೆರವೇರಿಸಿ ವೈಭವದಿಂದ ತಿರುವೀದಿಗಳಲ್ಲಿ ಉತ್ಸವ ನೆರವೇರಿಸಲಾತು.
ಜಿಲ್ಲಾ ಖಜಾನೆಯಿಂದ ಪೊಲೀಸ್ ಭದ್ರತೆಯೊಂದಿಗೆ ತಂದ ಶ್ರೀಕೃಷ್ಣರಾಜಮುಡಿ ತಿರುವಾಭರಣಪೆಟ್ಟಿಗೆಯನ್ನು ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್ ಸಮಕ್ಷಮ ಮುಮ್ಮಡಿ ಶ್ರೀಕೃಷ್ಣರಾಜ ಒಡೆಯರ್ ಮಂಟಪದಲ್ಲಿ ಪಾರ್ಕಾವಣೆ ಮಾಡಿ ಸ್ಥಾನೀಕರು, ಅರ್ಚಕ ಪರಿಚಾರಕರ ವಶಕ್ಕೆ ನೀಡಲಾಯಿತು.ಗರುಡದೇವನ ಉತ್ಸವದ ನಂತರ ಮಹಾಮಂಗಳಾರತಿ ನೆರವೇರಿಸಿ ಉತ್ಸವ ಆರಂಭಿಸಲಾಯಿತು. ದಿವ್ಯಪ್ರಬಂಧ ಪಾರಾಯಣ ಹಾಗೂ ಮಂಗಳವಾದ್ಯದೊಂದಿಗೆ ರಾಜಬೀದಿಯಲ್ಲಿ ಕೃಷ್ಣರಾಜಮುಡಿ ಉತ್ಸವ ವಿಜೃಂಭಣೆಯಿಂದ ನೆರವೇರಿತು. ನಂತರ ದೇವಾಲಯದಲ್ಲಿ ಪಡಿಯೇತ್ತ ಕಾರ್ಯಕ್ರಮಗಳು ವಿಧಿ ವಿಧಾನದಲ್ಲಿ ಜರುಗಿತು.
ಈ ವೇಳೆ ಉಪವಿಭಾಗಾಧಿಕಾರಿ ಶ್ರೀನಿವಾಸ್, ದೇಗುಲದ ಇಒ ಶೀಲಾ, ಪಾರುಪತ್ತೇಗಾರರಾದ ಸ್ಥಾನಾಚಾರ್ಯ ಶ್ರೀನಿವಾಸ ನರಸಿಂಹನ್ ಗುರೂಜಿ ಮತ್ತು ಎಂ.ಎನ್ ಪಾರ್ಥಸಾರಥಿ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು. ರಾತ್ರಿ 10ರವರೆಗೆ ಉತ್ಸವ ಭಕ್ತರ ಮನಸೂರೆಗೊಂಡಿತು.ಮೈಸೂರು ಅರಸ ಮುಮ್ಮಡಿ ಕೃಷ್ಣರಾಜ ಒಡೆಯರ್ ಮನೆದೇವರು ಶ್ರೀಚೆಲುವನಾರಾಯಣಸ್ವಾಮಿಗೆ ಭಕ್ತಿಯಿಂದ ಅರ್ಪಿಸಿರುವ ಕೆಂಪು, ಬಿಳಿ ವಜ್ರದ ಪಚ್ಚೆಮಣಿಯ ಸಿಂಹ ಲಾಂಛನವುಳ್ಳ ಕೃಷ್ಣರಾಜಮುಡ, ಮತ್ತು ಗಂಡುಬೇರುಂಡ ಪದಕದ ದರ್ಶನ ಭಕ್ತರಿಗೆ ಉಲ್ಲಾಸ ತಂದಿತು.
ಜಿಲ್ಲಾ ಖಜಾನೆಯಿಂದ ಶ್ರೀ ಕೃಷ್ಣರಾಜಮುಡಿ ತಿರುವಾಭರಣ ಪೆಟ್ಟಿಗೆಯನ್ನು ಮಂಡ್ಯ - ಶಿವಳ್ಳಿ ಮಾರ್ಗವಾಗಿ ಮೇಲುಕೋಟೆಗೆ ತಂದು ವೀರಾಂಜನೇಯಸ್ವಾಮಿ ಗುಡಿಯಲ್ಲಿ ವಿಶೇಷ ಪೂಜಿಸಿ ಸಲ್ಲಿಸಿ ಪಲ್ಲಕಿಯಲ್ಲಿಟ್ಟು ಶ್ವೇತಛತ್ರಿ ಮತ್ತು ಮಂಗಳವಾದ್ಯದೊಂದಿಗೆ ದೇವಾಲಯಕ್ಕೆ ಮೆರವಣಿಗೆ ಮೂಲಕ ತರಲಾಯಿತು.ಕೃಷ್ಣರಾಜಮುಡಿ ಕಿರೀಟ ಜುಲೈ 21ರವರೆಗೆ ಪ್ರತಿ ದಿನ ಸಂಜೆ ವಿವಿಧ ಉತ್ಸವದಲ್ಲಿ ಚೆಲುವನಾರಾಯಣಸ್ವಾಮಿಯನ್ನು ಅಲಂಕರಿಸಲಿದೆ. 18ನೇ ಶತಮಾನದಲ್ಲಿ ಆರಂಭಿಸಿದ ಈ ಬ್ರಹ್ಮೋತ್ಸವ ಅನುಚಾನವಾಗಿ ನಡೆಯುತ್ತಾ ಬಂದಿದೆ.
ಬ್ರಹ್ಮೋತ್ಸವದ ಅಂಗವಾಗಿ ದೇವಾಲಯದ ರಾಜಗೋಪುರ ಹಾಗೂ ರಾಜಬೀದಿಗೆ ಈ ವರ್ಷ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೂಚನೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ಮುಜರಾಯಿ ತಹಸೀಲ್ದಾರ್ ತಮ್ಮೇಗೌಡರ ಸೂಚನೆಯಂತೆ ದೇವಾಲಯದ ವತಿಯಿಂದ ಇಒ ಶೀಲಾ ಸರಳ ದೀಪಾಲಂಕಾರ ಮಾಡಿದ್ದರು.ಇಂದು ಶ್ರೀ ಪಟ್ಟಲದಮ್ಮ ದೇಗುಲದಲ್ಲಿ ವಿಶೇಷ ಪೂಜೆ
ಮಂಡ್ಯ:ತಾಲೂಕಿನ ತುಂಬಕೆರೆ ಶ್ರೀಪಟ್ಟಲದಮ್ಮ ದೇವಸ್ಥಾನದಲ್ಲಿ ಆಷಾಢ ಮಾಸ ಶುಕ್ರವಾರ ವಿಶೇಷ ಪೂಜಾ ಕಾರ್ಯಕ್ರಮ ನಡೆಯಲಿದೆ. ಜು.೧೮ರಂದು ನಾಲ್ಕನೇ ಆಷಾಢ ಶುಕ್ರವಾರದ ಪ್ರಯುಕ್ತ ದೇವಾಲಯದಲ್ಲಿ ಬೆಳಗ್ಗೆ ೭ ಗಂಟೆಗೆ ತುಂಬಕೆರೆ ಗ್ರಾಮದಿಂದ ದೇವಸ್ಥಾನಕ್ಕೆ ಕುಂಭಕಳಸ ಮತ್ತು ಮೀಸಲು ನೀರು, ೯ ಗಂಟೆಗೆ ಪಂಚಾಮೃತಾದಿ ಅಭಿಷೇಕ ಹಾಗೂ ಬೆಳಗ್ಗೆ ೧೦ ಗಂಟೆಗೆ ತುಂಬಕೆರೆ ಗ್ರಾಮದಿಂದ ದೇವಿಗೆ ತಂಬಿಟ್ಟಿನ ಆರತಿ, ವೀರಗಾಸೆ ಕುಣಿತ, ಪಟ್ಟಲದಮ್ಮ ದೇವಿಯ ಪೂಜಾ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಕೋರಲಾಗಿದೆ.