ಪಾಲಿಕೆಯ ಬಜೆಟ್ ಉಪಯೋಗಕ್ಕೆ ಬಾರದ್ದು

| Published : Feb 23 2024, 01:46 AM IST

ಸಾರಾಂಶ

ವಿಜಯಪುರ ಮಹಾನಗರ ಪಾಲಿಕೆಯ ನೂತನ ಆಡಳಿತ ಮಂಡಳಿಯ ಮೊದಲ ಬಜೆಟ್ ಉಪಯೋಗಕ್ಕೆ ಬಾರದಂತಾಗಿದ್ದು, ವರ್ಷದಿಂದ ವರ್ಷಕ್ಕೆ ಹೆಚ್ಚಾಗಬೇಕಿದ್ದ ಬಜೆಟ್ ಮೊತ್ತ ಕುಸಿದಿರುವುದು ಅಸಹ್ಯವಾಗಿದೆ. ಮಹಾಪೌರರು ಮಂಡಿಸಿದ ಬಜೆಟ್‌ನಲ್ಲಿ ಅಂಕಿ-ಅಂಶಗಳ ವ್ಯತ್ಯಾಸವಿದ್ದು, ಅಧಿಕಾರಿಗಳು ಹೊಂದಿಸಿಕೊಟ್ಟ ಅಂಕಿ ಅಂಶಗಳನ್ನೇ ಬಜೆಟ್ ಮಂಡಿಸಿದ್ದಾರೆ ಎಂದು ಪಾಲಿಕೆ ಮಾಜಿ ಸದಸ್ಯ ರವೀಂದ್ರ ಲೋಣಿ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮಹಾನಗರ ಪಾಲಿಕೆಯ ನೂತನ ಆಡಳಿತ ಮಂಡಳಿಯ ಮೊದಲ ಬಜೆಟ್ ಉಪಯೋಗಕ್ಕೆ ಬಾರದಂತಾಗಿದ್ದು, ವರ್ಷದಿಂದ ವರ್ಷಕ್ಕೆ ಹೆಚ್ಚಾಗಬೇಕಿದ್ದ ಬಜೆಟ್ ಮೊತ್ತ ಕುಸಿದಿರುವುದು ಅಸಹ್ಯವಾಗಿದೆ. ಮಹಾಪೌರರು ಮಂಡಿಸಿದ ಬಜೆಟ್‌ನಲ್ಲಿ ಅಂಕಿ-ಅಂಶಗಳ ವ್ಯತ್ಯಾಸವಿದ್ದು, ಅಧಿಕಾರಿಗಳು ಹೊಂದಿಸಿಕೊಟ್ಟ ಅಂಕಿ ಅಂಶಗಳನ್ನೇ ಬಜೆಟ್ ಮಂಡಿಸಿದ್ದಾರೆ ಎಂದು ಪಾಲಿಕೆ ಮಾಜಿ ಸದಸ್ಯ ರವೀಂದ್ರ ಲೋಣಿ ಆರೋಪಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಪ್ರತಿಯೊಂದು ಆರ್ಥಿಕ ವರ್ಷದಲ್ಲಿ ಬಜೆಟ್ ಮೊತ್ತ ಹೆಚ್ಚಾಗಬೇಕು. ಆದರೆ, ಇಲ್ಲಿ ಕಡಿಮೆ ಆಗಿದೆ. ಕಳೆದ ಬಾರಿ ಮಂಡಿಸಿದ ಬಜೆಟ್ ₹204 ಕೋಟಿ ಆಗಿತ್ತು. ಈ ಬಾರಿ ಕೇವಲ ₹159 ಕೋಟಿ ಬಜೆಟ್ ಮಂಡಿಸಲಾಗಿದೆ. ಅದರಲ್ಲಿ ಆಸ್ತಿ ತೆರಿಗೆಯಿಂದ ₹31 ಕೋಟಿ ಆದಾಯ ಬರಲಿದೆ ಎಂದು ಹೇಳಿದ್ದಾರೆ. ನಗರದಲ್ಲಿ 80 ಸಾವಿರ ಆಸ್ತಿಗಳು ಗುರುತಿಸಲ್ಪಟ್ಟಿದ್ದು, ಇದರಲ್ಲಿ15 ಸಾವಿರ ಆಸ್ತಿಗಳು ಗುಂಟಾ ಇವೆ. ಹೀಗಾಗಿ ಇದುವರೆಗೂ ಕೇವಲ 45 ಸಾವಿರ ಆಸ್ತಿಗಳದ್ದು ಮಾತ್ರ ಆದಾಯ ಬರ್ತಿದೆ. ಪ್ರಸ್ತುತ 90 ಸಾವಿರ ಆಸ್ತಿಗಳಲ್ಲಿ ಅರ್ಧದಷ್ಟು ಮಾತ್ರ ತೆರಿಗೆಗೆ ಒಳಗಾಗಿವೆ. ಕಳೆದ ವರ್ಷ ಬಜೆಟ್ ನಲ್ಲಿ ₹24 ಕೋಟಿ ಆಸ್ತಿ ಆದಾಯ ಬರಲಿದೆ ಎಂದಿದ್ರು, ಇದೀಗ ಕೇವಲ ₹20 ಕೋಟಿ ಬಂದಿದೆ ಎಂದರು.

ಈ ಬಾರಿ ₹31 ಕೋಟಿ ಆಸ್ತಿ ತೆರಿಗೆ ವಸೂಲಿ ಮಾಡ್ತಿವಿ ಎಂದಿರೋದು ಇದು ಆಗದ ಮಾತು. ಅಲ್ಲದೇ ಘನತ್ಯಾಜ್ಯ ಸಂಗ್ರಹಣೆಯಲ್ಲಿ ₹5 ಕೋಟಿ ಆದಾಯ ಮಾಡಲಾಗುವುದು ಎಂದಿದ್ದು, ಅಷ್ಟು ಹಣ ಕಲೆಕ್ಷನ್ ಮಾಡಲು ಸಾಧ್ಯವಿಲ್ಲ. ಇವರು ಬಜೆಟ್‌ನಲ್ಲಿ ತಿಳಿಸಿದಂತೆ ಬೇರೆ ಬೇರೆ ಮೂಲಗಳ ಆದಾಯದಿಂದ ಕಲೆಕ್ಷನ್ ಮಾಡುವ ಮಾಹಿತಿಗಳೆಲ್ಲ ಸುಳ್ಳು ಸಂಗತಿಗಳಾಗಿವೆ. ಎಲ್ಲದಕ್ಕೂ ಮುಖ್ಯವಾಗಿ ಸರ್ಕಾರದಿಂದ ಬರುವ ಅನುದಾನದ ಬಗ್ಗೆ ಬಜೆಟ್‌ನಲ್ಲಿ ಮಾಹಿತಿ ಇಲ್ಲ. ಕಳೆದಬಾರಿ ₹204 ಕೋಟಿ ಬಜೆಟ್ ಮಂಡನೆಯಲ್ಲಿ ಆಗಿದ್ದ ಬಿಜೆಪಿ ಸರ್ಕಾರ ₹100 ಕೋಟಿ ಅನುದಾನ ಕೊಟ್ಟಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಸರ್ಕಾರ ಬಂದು 10 ತಿಂಗಳಾದ್ರೂ ಬಿಡಿಗಾಸು ಸಹ ಮಹಾನಗರ ಪಾಲಿಕೆಗೆ ಬಂದಿಲ್ಲ ಎಂದು ದೂರಿದರು.

ತಾಜಮಹಲ್ ಎಂದು ಕರೆಯುವ ಇಬ್ರಾಹಿಂ ರೋಜಾ ಹತ್ತಿರ ಪೂಜ್ಯ ಮಹಾಪೌರರ ಮನೆ ಇದೆ. ಅಂತಹ ಐತಿಹಾಸಿಕ ಸ್ಥಳದ ಸುತ್ತ ಹಾಗೂ ಆ ರಸ್ತೆಯಲ್ಲಿ ಅತಿಕ್ರಮಣ ಆಗಿದೆ. ಅದನ್ನು ತೆರವುಗೊಳಿಸಿ ರಸ್ತೆ ಅಗಲೀಕರಣ ಮಾಡಿ, ಇಬ್ರಾಹಿಂ ರೋಜಾ ವನ್ನು ಮಿನಿ ತಾಜಮಹಲ್ ಮಾಡಬೇಕು ಎಂದು ರವಿಂದ್ರ ಲೋಣಿ ವಿನಂತಿಸಿದ್ದಾರೆ.ನಗರದಲ್ಲಿ ಹಲವು ಕಡೆಗಳ ಏರಿಯಾಗಳಲ್ಲಿ ಹಾಗೂ ಸ್ವಾಗತ ಕಮಾನ್ ಗಳನ್ನು, ಗಾರ್ಡನ್ ಗಳನ್ನು ನಿರ್ಮಾಣ ಮಾಡಲಾಗುವುದು ಎಂದೆಲ್ಲ ಬಜೆಟ್ ಖರ್ಚು ವೆಚಟ್ದಲ್ಲಿ ಹೇಳಲಾಗಿದೆ. ಆದ್ರೆ ಇದು ಆಯ್ದ ಕೇವಲ ಹತ್ತು ವಾರ್ಡ್‌ಗಳಲ್ಲಿ ಮಾತ್ರ ಆಗುವ ಅಭಿವೃದ್ಧಿ ಕೆಲಸದಂತಿದೆ. ಕೇವಲ ಕಮಾನುಗಳು ಹಾಕುವುದರಿಂದ ನಗರದ ಸೌಂದರ್ಯಕರಣ ಆಗಲ್ಲ, ರಸ್ತೆಗಳು ಇಕ್ಕಟ್ಟು ಆಗುತ್ತವೆ.

-ರವೀಂದ್ರ ಲೋಣಿ, ನಗರ ಪಾಲಿಕೆ ಮಾಜಿ ಸದಸ್ಯರು.