ಸಾರಾಂಶ
ಸಂತೋಷ ದೈವಜ್ಞ
ಮುಂಡಗೋಡ:ಪ್ರಸಕ್ತ ಸಾಲಿನಲ್ಲಿ ಮಳೆ ಕೈಕೊಟ್ಟಿದ್ದರಿಂದ ಕೃಷಿ ಕ್ಷೇತ್ರಕ್ಕೆ ತೀವ್ರ ಹಿನ್ನಡೆಯಾಗಿದೆ. ಈ ನಡುವೆ ಹೆಸರಿಗೆ ಮಾತ್ರ ಬೆಳೆದು ನಿಂತಿರುವ ಬತ್ತದ ಬೆಳೆ ಕಟಾವು ಮಾಡಿಸಿದ ವೆಚ್ಚ ಕೂಡ ಮೈಮೇಲೆ ಬಂದಿದ್ದು, ರೈತರಿಗೆ ಬರ ಬಡಿದಂತಾಗಿದೆ.
ಬತ್ತದ ಕಣಜ ಎಂದೇ ಪ್ರಸಿದ್ಧಿಯಾಗಿರುವ ಈ ಭಾಗದಲ್ಲಿ ಬತ್ತವೇ ಇಲ್ಲಿಯ ಪ್ರಧಾನ ಬೆಳೆ. ಶೇ. ೮೦ರಷ್ಟು ರೈತರು ಬತ್ತ ಬೆಳೆಯುತ್ತಾರೆ. ಕಳೆದ ೨-೩ ವರ್ಷ ಉತ್ತಮ ಮಳೆಯಾಗಿದ್ದರಿಂದ ಈ ಬಾರಿಯೂ ಬತ್ತವನ್ನೇ ಹೆಚ್ಚಿನ ಪ್ರಮಾಣದಲ್ಲಿ ಬೆಳೆದು ಕೈ ಸುಟ್ಟುಕೊಂಡು ರೋದಿಸುತ್ತಿದ್ದಾರೆ. ಎಕರೆಗೆ ೨೦ರಿಂದ ೨೫ ಕ್ವಿಂಟಲ್ ಬತ್ತದ ಪಸಲು ಪಡೆಯುತ್ತಿದ್ದ ರೈತರು ಈ ಬಾರಿ ಎಕರೆಗೆ ೨ರಿಂದ ೩ ಕ್ವಿಂಟಲ್ ಬತ್ತ ನಿರೀಕ್ಷಿಸುವುದು ಕಷ್ಟವಾಗಿದೆ. ಮುಂಗಾರು ಮಾತ್ರವಲ್ಲದೇ ರೈತರ ಕೈ ಹಿಡಿಯಬೇಕಾದ ಜುಲೈ, ಆಗಸ್ಟ್ ತಿಂಗಳಲ್ಲಿ ಮಳೆ ಕೂಡ ಸಂಪೂರ್ಣ ಕೈ ಕೊಟ್ಟ ಪರಿಣಾಮ ಕೂರ್ಗೆ ಬತ್ತ ಸಂಪೂರ್ಣ ಕುಂಠಿತವಾಗಿದ್ದು, ನಾಟಿ ಬತ್ತಕ್ಕೂ ಹಿನ್ನಡೆಯಾಗಿದೆ. ರೈತರು ಕಂಗಾಲಾಗಿ ಗದ್ದೆಯಲ್ಲಿ ಕಳೆ(ಕಸ) ಕೂಡ ತೆಗೆಸದೆ ಕೈ ಚೆಲ್ಲಿ ಕುಳಿತುಕೊಂಡರು. ಸದ್ಯ ಬೆಳೆದು ನಿಂತಿರುವ ಬತ್ತದ ಬೆಳೆ ಇಲ್ಲದಿದ್ದರೂ ಜಾನುವಾರುಗಳಿಗೆ ಮೇವಾದರು ಸಿಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಕಟಾವು ಮಾಡಿಸಿದವರ ರೈತರ ಸಂಖ್ಯೆಯೇ ಹೆಚ್ಚಿದೆ.ಕೂಲಿಕಾರರ ಕೊರತೆಯಿಂದಾಗಿ ಕಟಾವು ಮಾಡುವ ಯಂತ್ರಗಳ ಮೊರೆ ಹೋಗಿದ್ದು, ರಾಯಚೂರ, ಬಳ್ಳಾರಿ, ಬೆಂಗಳೂರು ಹಾಗೂ ತಮಿಳುನಾಡು ಮುಂತಾದ ಕಡೆಯಿಂದ ಹಲವಾರು ಬತ್ತ ಕಟಾವು ಮಾಡುವ ಹಾರ್ವೇಸ್ಟರ್ ಯಂತ್ರಗಳು ತಾಲೂಕಿಗೆ ಲಗ್ಗೆ ಇಟ್ಟಿವೆ. ಕೂರ್ಗೆ ಬತ್ತ ಬಹುತೇಕ ಕಡೆ ಕಟಾವು ಕಾರ್ಯ ಮುಗಿಯುತ್ತ ಬಂದಿದೆ. ಬತ್ತ ಕಟಾವು ಮಾಡಿದರೆ ಕೆಲ ಗದ್ದೆಗಳಲ್ಲಿ ಎಕರೆಗೆ ೨ರಿಂದ ೩ ಕ್ವಿಂಟಲ್ ಬತ್ತ ಕೂಡ ಸಿಗುತ್ತಿಲ್ಲ. ಇದರಿಂದ ಬತ್ತ ಕಟಾವು ಮಾಡುವ ಯಂತ್ರದ ಬಾಡಿಗೆ ಕೂಡ ಕೈಯಿಂದ ನೀಡುವ ಪರಿಸ್ಥಿತಿ ರೈತ ಸಮುದಾಯಕ್ಕೆ ಬಂದೊದಗಿದ್ದು, ಒಟ್ಟಾರೆ ಗದ್ದೆಯಲ್ಲಿ ಬೆಳೆದು ನಿಂತಿರುವ ತೋರಿಕೆಯ ಬತ್ತದ ಬೆಳೆಯನ್ನು ಕಟಾವು ಮಾಡಿಸುವುದು ಮಾಡು ಇಲ್ಲವೇ ಮಡಿ ಎಂಬಂತಾಗಿರುವುದಂತೂ ಸುಳ್ಳಲ್ಲ.ಸರ್ಕಾರವೇನೊ ಈ ತಾಲೂಕನ್ನು ಬರಗಾಲ ಪ್ರದೇಶ ವ್ಯಾಪ್ತಿಗೊಳಪಡಿಸಿದೆ. ಕೃಷಿ ಹಾಗೂ ಕಂದಾಯ ಇಲಾಖೆಗಳು ತಾಲೂಕಿನ ಪಾಳಾ ಹಾಗೂ ಮಂಡಗೋಡ ಹೋಬಳಿ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಿ ಇಲ್ಲಿಯ ಬೆಳೆಗಳ ಸ್ಥಿತಿಗತಿ ಬಗ್ಗೆ ಸಮರ್ಪಕವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಹೆಚ್ಚಿನ ಪರಿಹಾರಕ್ಕಾಗಿ ಇಲ್ಲಿಯ ರೈತರು ಕಾಯುತ್ತಿದ್ದಾರೆ.ಗೋವಿನ ಜೋಳ ಹಾಗೂ ಕಬ್ಬಿನ ಬೆಳೆ ಸಾಧಾರಣ ಮಟ್ಟಿಗಿದ್ದರೂ ಬಹುತೇಕ ರೈತರ ಕಷ್ಟದ ಮುಂದೆ ಇದಾವ ಲೆಕ್ಕವು ಅಲ್ಲ. ಗೋವಿನ ಜೋಳ ಉತ್ತಮ ಬೆಳೆ ಬಂದಿರಬಹುದು. ಆದರೆ ಅದಕ್ಕೆ ತಕ್ಕಂತೆ ಬೆಲೆ ಕೂಡ ಸಿಗಬೇಕಾದರೆ ಸ್ಥಳೀಯವಾಗಿ ಖರೀದಿ ಕೇಂದ್ರ ತೆರೆಯಬೇಕಿರುವುದು ಅತ್ಯವಶ್ಯವಾಗಿದೆ.
ಮೇವಿನ ಕೊರತೆ:ಬತ್ತ ಪ್ರಧಾನ ಪ್ರದೇಶವಾಗಿರುವ ಈ ಭಾಗದಿಂದಲೇ ಶಿರಸಿ, ಸಿದ್ದಾಪುರ, ಕುಮಟಾ, ಸಾಗರ ಮುಂತಾದ ಕಡೆಗಳಿಗೆ ಇಲ್ಲಿಂದಲೇ ಒಣ ಹುಲ್ಲು ಸಾಗಾಣಿಕೆಯಾಗುತ್ತಿತ್ತು. ಆದರೆ ಪ್ರಸಕ್ತ ಸಾಲಿನ ಪರಸ್ಥಿತಿ ನೋಡಿದರೆ ಸ್ಥಳೀಯವಾಗಿಯೇ ಮೇವಿನ ಕೊರತೆಯಾದರೂ ಆಶ್ಚರ್ಯಪಡಬೇಕಿಲ್ಲ.ಈ ಹಿಂದೆಲ್ಲ ಕೂರ್ಗೆ ಬತ್ತ ೧ ಎಕರೆಗೆ ೨೦ರಿಂದ ೨೫ ಕ್ವಿಂಟಲ್ ಬೆಳೆಯಲಾಗುತ್ತಿತ್ತು. ಮಳೆಯ ಕೊರತೆಯಿಂದಾಗಿ ಈ ಬಾರಿ ಎಕರೆಗೆ ೨ರಿಂದ೩ ಕ್ವಿಂಟಲ್ ಬತ್ತ ಕೂಡ ಕೈಗೆ ಸಿಗುತ್ತಿಲ್ಲ. ಇದರಿಂದ ಕಟಾವು ಮಾಡಿಸಿದ ವೆಚ್ಚ ಮೈಮೇಲೆ ಬರುತ್ತಿದ್ದರೂ ಜಾನುವಾರುಗಳಿಗೆ ಮೇವು ಸಿಗುತ್ತದೆ ಎಂಬ ಕಾರಣಕ್ಕೆ ಕಟಾವು ಮಾಡಿಸಲಾಗುತ್ತಿದೆ. ಸರ್ಕಾರ ಈ ಬಗ್ಗೆ ಗಮನಹರಿಸಿ ಸೂಕ್ತ ಪರಿಹಾರ ಒದಗಿಸಿ ರೈತರ ನೆರವಿಗೆ ಬರಬೇಕು ಎಂದು ರೈತ ರಾಜು ಗುಬ್ಬಕ್ಕನವರ ಹೇಳಿದರು.ಮಳೆ ಕೊರತೆಯಿಂದ ತಾಲೂಕಿನಲ್ಲಿ ಶೇ. ೫೦ರಷ್ಟು ಕೂರ್ಗೆ ಬಭತ್ತದ ಬೆಳೆ ಕುಂಟಿತವಾಗಿದ್ದು, ರೈತರು ಭತ್ತದ ಗದ್ದೆಗಳನ್ನು ಸಮರ್ಪಕ ನಿರ್ವಹಣೆ ಮಾಡದೆ ಕೈ ಚೆಲ್ಲಿ ಕುಳಿತಿದ್ದು, ಹೆಚ್ಚಿನ ಪ್ರಮಾಣದ ಬೆಳೆ ಹಾನಿಗೆ ಕಾರಣವಾಗಿದೆ. ನಾಟಿ ಬತ್ತಕ್ಕೆ ಯಾವುದೇ ತೊಂದರೆ ಇಲ್ಲ. ಕೃಷಿ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಮುಂಗಾರು ಕೈಕೊಟ್ಟಿದ್ದರಿಂದ ಹಿಂಗಾರು (ಬೇಸಿಗೆ) ಬೆಳೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್. ಕುಲಕರ್ಣಿ
ಹೇಳಿದರು.