ರೈತರ ಏಳಿಗೆಯಾದಾಗ ಮಾತ್ರ ದೇಶದ ಪ್ರಗತಿ ಸಾಧ್ಯ: ಯುಗೇಂದರ ನಾಯ್ಡು

| Published : Jul 02 2025, 12:19 AM IST

ರೈತರ ಏಳಿಗೆಯಾದಾಗ ಮಾತ್ರ ದೇಶದ ಪ್ರಗತಿ ಸಾಧ್ಯ: ಯುಗೇಂದರ ನಾಯ್ಡು
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಕೃಷಿಯನ್ನೇ ಜೀವನಾಧಾರವಾಗಿಸಿಕೊಂಡು ಬದುಕುತ್ತಿರುವ ರೈತರ ಏಳಿಗೆಯಾದಾಗ ಮಾತ್ರ ದೇಶದ ಪ್ರಗತಿ ಸಾಧ್ಯ.

ಸೆಲ್ಯೂಟ್ ಟು ಸೈಲೆಂಟ್ ಸ್ಟಾರ್ಸ್ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕಂಪ್ಲಿ

ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಕೃಷಿಯನ್ನೇ ಜೀವನಾಧಾರವಾಗಿಸಿಕೊಂಡು ಬದುಕುತ್ತಿರುವ ರೈತರ ಏಳಿಗೆಯಾದಾಗ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಕಿಸಾನ್ ಜಾಗೃತಿ ವಿಕಾಸ್ ಸಂಘದ ರಾಷ್ಟ್ರೀಯ ಅಧ್ಯಕ್ಷ ಯುಗೇಂದರ ನಾಯ್ಡು ತಿಳಿಸಿದರು.

ಪಟ್ಟಣದ ಸರ್ಕಾರಿ ಪರಿಶಿಷ್ಟ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದಲ್ಲಿ ಜೆಸಿಐ ಕಂಪ್ಲಿ ಸೋನಾದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸೆಲ್ಯೂಟ್ ಟು ಸೈಲೆಂಟ್ ಸ್ಟಾರ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಕಲ ಜೀವರಾಶಿಗಳಿಗೆ ಅನ್ನ ನೀಡುವ ರೈತರ ಬದುಕು ಹಸನಾಗಲು ಕೃಷಿ ಸಂಬಂಧಿತ ಸೌಲತ್ತು, ಯೋಜನೆಗಳು ಅರ್ಹ ರೈತರಿಗೆ ತಲುಪುವಂತಾಗಬೇಕು. ರೈತರು ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ರಾಸಾಯನಿಕ ಕೃಷಿಯಿಂದ ವಿಮುಖರಾಗಿ ಸಾವಯವ ಕೃಷಿಗೆ ಮಹತ್ವ ನೀಡಬೇಕು. ಭೂಮಿಯ ಫಲವತ್ತತೆ, ಅಂತರ್ಜಲ ಮಟ್ಟ ಸುಧಾರಣೆ, ಮಣ್ಣು ಸವಕಳಿ ಕ್ರಮಗಳನ್ನು ಕೈಗೊಳ್ಳಬೇಕು. ಸಮಾಜದಲ್ಲಿ ರೈತರಿಗೆ ಗೌರವ ಸ್ಥಾನಮಾನ ಸಿಗುವಂತಾಗಿ ಯುವಕರು ಕೃಷಿಯತ್ತ ಚಿತ್ತ ಹರಿಸುವಂತಾಗಬೇಕು ಎಂದರು.

ಜೆಸಿಐ ಕಂಪ್ಲಿ ಸೋನಾದ ಅಧ್ಯಕ್ಷ ಬಿ.ರಸೂಲ್ ಮಾತನಾಡಿ, ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ ಎನ್ನುವ ನಾಣ್ಣುಡಿಯಂತೆ ರೈತರಿಲ್ಲದೆ ಪ್ರಪಂಚದ ಜೀವನ ಮತ್ತು ಅಸ್ತಿತ್ವ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕೃಷಿಗೆ ಅಗತ್ಯವಾದ ಹೂಡಿಕೆಗಳು, ಸಲಕರಣೆಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಲಭ್ಯವಾಗುವಂತೆ ರೈತರಿಗೆ ಶಿಕ್ಷಣ ನೀಡುವುದು ಸಹ ಅಗತ್ಯವಾಗಿದೆ. ಬೆಂಬಲ ಬೆಲೆ, ಪರಿಹಾರಧನ, ವಿಮೆ, ಕೃಷಿ ನೀತಿಗಳು ಕೇವಲ ಘೋಷಣೆಗೆ ಸೀಮಿತಗೊಳ್ಳದೆ ಕಾರ್ಯರೂಪಕ್ಕೆ ತರುವ ಮೂಲಕ ರೈತರ ನೋವುಗಳಿಗೆ ಸ್ಪಂದಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದರು.

ಇದೆ ವೇಳೆ ಸೆಲ್ಯೂಟ್ ಟು ಸೈಲೆಂಟ್ ಸ್ಟಾರ್ಸ್ (ಸದ್ದಿಲ್ಲದ ಸಾಧಕನಿಗೊಂದು ನಮನ) ಕಾರ್ಯಕ್ರಮದ ನಿಮಿತ್ತ ಪ್ರಗತಿ ಪರ ರೈತರಾದ ಅಂಡಿ ಹುಲಿಗೆಮ್ಮ, ಯುಗೇಂದರ ನಾಯ್ಡು, ಕೊಟ್ಟೂರು ರಮೇಶ್‌ಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಜೆಸಿಐ ವಲಯ 24ರ ಪೂರ್ವ ಉಪಾಧ್ಯಕ್ಷ ಸಂತೋಷ ಕೊಟ್ರಪ್ಪ ಸೋಗಿ, ಜೆಸಿಐ ಕಂಪ್ಲಿ ಸೋನಾದ ಪದಾಧಿಕಾರಿಗಳಾದ ಬಿ.ಎಚ್.ಎಂ. ಅಮರನಾಥ ಶಾಸ್ತ್ರಿ, ಮನೋಜ್ ಕುಮಾರ್ ಸೇರಿ ವಿದ್ಯಾರ್ಥಿನಿಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿದ್ದರು.