ಸಾರಾಂಶ
ಕನ್ನಡ ಪ್ರಭ ವಾರ್ತೆ, ಮೊಳಕಾಲ್ಮುರುನುಂಕಿಮಲೆ ಸಿದ್ದೇಶ್ವರ ಸ್ವಾಮಿಯನ್ನು ಮಡಿಯಲ್ಲಿ ನುಂಕಪ್ಪನ ಬೆಟ್ಟಕ್ಕೆ ಕಳಿಸಿ ಕೊಡುವ ಮೂಲಕ ಪಟ್ಟಣದಲ್ಲಿ ನಾಲ್ಕು ದಿನಗಳ ಕಾಲ ಜರುಗಿದ ನುಂಕಿಮಲೆ ಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಸಂಭ್ರಮದ ತೆರೆ ಬಿದ್ದಿತು.
ಜಾತ್ರಾ ಮಹೋತ್ಸವದ ಕೊನೆ ದಿನವಾದ ಬುಧವಾರ ಬೆಳಗಿನ ಜಾವ ನುಂಕಪ್ಪನ ಕಟ್ಟೆಯ ಸಭಾ ಭವನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ವಿಶೇಷ ಪೂಜೆಗಳನ್ನು ನೆರವೇರಿಸುವ ಮೂಲಕ ಅಪಾರ ಸಂಖ್ಯೆ ಭಕ್ತರ ಸಮ್ಮುಖದಲ್ಲಿ ದೇವರನ್ನು ಹೊರಡಿಸಿ ಗೌಡರ ಮನೆ ಆವರಣದಲ್ಲಿ ಕೂರಿಸಿ ಧಾರ್ಮಿಕ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು.ಅಲ್ಲಿಂದ ಬಸವಣ್ಣನ ಗುಡಿ ಬಳಿಯ ಕಟ್ಟೆಯ ಮೇಲೆ ಕೂರಿಸಿ ಭಕ್ತರ ಪೂಜೆಗೆ ಅವಕಾಶ ಕಲ್ಪಿಸಲಾಯಿತು. ಸಂಜೆ ಮೂರು ಗಂಟೆಗೆ ಹಿರಿಯರ ಸಮ್ಮುಖದಲ್ಲಿ ಕಳಸ ಹೊತ್ತ ಮಾತೆಯರು ಮತ್ತು ಜನಪದ ವಾದ್ಯಗಳೊಂದಿಗೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ಉರುಮೆ, ತಪ್ಪಡಿ, ಡೋಲು, ನಂದಿಕೋಲು, ಸಮಾಳ ಸೇರಿ ವಿವಿಧ ಜನಪದ ಕಲಾ ತಂಡಗಳೊಂದಿಗೆ ಕೋಟೆ ಬಡಾವಣೆ, ಊರು ಬಾಗಿಲು ಸೇರಿ ರಾಜಬೀದಿ ಸೇರಿ ಪಟ್ಟಣದ ಮುಖ್ಯ ರಸ್ತೆ ಮೂಲಕ ಹಸಿ ಮಡಿಯ ಮೂಲಕ ಭವ್ಯ ಮೆರವಣಿಗೆ ನಡೆಸಲಾಯಿತು. ರಸ್ತೆ ಎರಡೂ ಬದಿಯಲ್ಲಿ ನಿಂತಿದ್ದ ಭಕ್ತರು ದೇವರಿಗೆ ಹಣ್ಣು ಕಾಯಿ ನೀಡಿ ಭಕ್ತಿ ಸಮರ್ಪಿಸಿದರು. ಊರ ಗೌಡರ ನೇತೃತ್ವದಲ್ಲಿ ಅಪಾರ ಸಂಖ್ಯೆಯ ಭಕ್ತರೊಂದಿಗೆ ನುಂಕಿಮಲೆ ಬೆಟ್ಟಕ್ಕೆ ತೆರಳಿ ಮಹಾ ಮಂಗಳಾರತಿ ಪೂಜೆಯೊಂದಿಗೆ ದೇವರನ್ನು ಗುಡಿ ತುಂಬಿಸಲಾಯಿತು. ಇದರೊಂದಿಗೆ ಗುಡ್ಡದಲ್ಲಿ ನೆಲೆ ಕಂಡಿರುವ ನುಂಕಪ್ಪನನ್ನು ಊರಿಗೆ ಕರೆತಂದು ನಾಲ್ಕು ದಿನಗಳ ಕಾಲ ನಡೆಸಿದ ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಂತಾಯಿತು.