ಸಾರಾಂಶ
ರಿಯಾಜಅಹ್ಮದ ಎಂ. ದೊಡ್ಡಮನಿ
ಕನ್ನಡಪ್ರಭ ವಾರ್ತೆ ಡಂಬಳಡಂಬಳ ಹೋಬಳಿಯ ಐತಿಹಾಸಿಕ ದೇವಾಲಯಗಳು ಗತಕಾಲದ ಇತಿಹಾಸವನ್ನು ಹೊಂದಿದ್ದು, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕೇಂದ್ರವಾಗಿರುವ ಡಂಬಳ ಉತ್ಸವ ಆಚರಣೆ ಬಗ್ಗೆ ಗ್ರಾಮಸ್ಥರು ಹಾಗೂ ಇತಿಹಾಸಕಾರರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಪ್ರಾಚೀನ ಕಾಲದಿಂದಲೂ ಗದಗ ಜಿಲ್ಲೆಯ ಡಂಬಳ 10-11ನೇ ಶತಮಾನದಲ್ಲಿ ಮಾಸವಾಡಿ ನಾಡಿನ ಹೆಸರಲ್ಲಿ ರಾಜಧಾನಿಯಾಗಿ ಧರ್ಮಮೋಳಲ್-ಧರ್ಮಪುರ ಈಗ ಡಂಬಳವಾಗಿದೆ. ಗ್ರಾಮದಲ್ಲಿ ಐತಿಹಾಸಿಕ ದೇವಾಲಯಗಳು, ಗತಕಾಲದ ಕೋಟೆಗಳು, ಶಾಸನಗಳು, ಪುಷ್ಕರಣಿಗಳು, ಪ್ರವಾಸಿ ಮಂದಿರ, ಸುಪ್ರಸಿದ್ಧ ಕೆರೆ ಹೀಗೆ ಇತಿಹಾಸದ ಗತವೈಭವ ಮೆರೆದು ಅಗ್ರಹಾರ ಮಹಾಪಟ್ಟಣವಾಗಿ ಬ್ರಿಟಿಷರ ಕಾಲದಲ್ಲಿ 1850-60ರಲ್ಲಿ ಸರ್ ಜಾರ್ಜ ರೀಸೆಲ್ ಕ್ಲರ್ಕ್ ಎಂಬುವರ ಆಡಳಿತಾವಧಿಯಲ್ಲಿ ತಾಲೂಕು ಕೇಂದ್ರವಾಗಿತ್ತು.1857ರಲ್ಲಿ ಪ್ರಥಮ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರೊಡನೆ ಹೋರಾಟ ಮಾಡಿ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದ ಡಂಬಳದ ಶ್ರೀನಿವಾಸ ವೆಂಕಟಾದ್ರಿ ದೇಸಾಯಿ ನರಗುಂದ ಬಾಬಾಸಾಹೇಬ ಒಡಗೂಡಿ ಬ್ರಿಟಿಷರ ಕರ್ನಲ್ ಮ್ಯಾನ್ಸನ್ ರುಂಡ ಕತ್ತರಿಸಿ ನರಗುಂದ ಅಗಸಿ ಬಾಗಿಲಿಗೆ ಕಟ್ಟಿ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಕೀರ್ತಿ ಡಂಬಳ ದೇಸಾಯಿ ಮನೆತನಕ್ಕಿದೆ. ಜೈನ, ಬೌದ್ಧ ಧರ್ಮಗಳ ತವರೂರಾಗಿ ಈ ಹಿಂದೆ ತಾರಾ ಭಗವತಿ ಮಂದಿರ ಜಗತ್ಪ್ರಸಿದ್ಧಿ ಗಳಿಸಿರುವುದು ಇತಿಹಾಸದಿಂದ ತಿಳಿದು ಬರುತ್ತಿದೆ.
ವಾಸ್ತುಶಿಲ್ಪ ಪ್ರಸಿದ್ಧಿಯ ಅಜ್ಜಮೇಶ್ವರ (ದೊಡ್ಡಬಸಪ್ಪ) ಧರ್ಮೇಶ್ವರ ಸೋಮನಾಥ ದೇವಾಲಯ, ಕಲ್ಮೇಶ್ವರ ದೇವಾಲಯ, ಮೈಬಳೇಶ್ವರ ದೇವಾಲಯ (ಸಿದ್ದೇಶ್ವರ), ಮರುಳಸಿದ್ದೇಶ್ವರ ದೇವಾಲಯ, ನೀಲಕಂಠ ದೇವಸ್ಥಾನ ಹಾಗೂ ತೋಂಟದಾರ್ಯ ಮಠದ ಮದರ್ಧನಾರೀಶ್ವರ ದೇವಾಲಯ ಹಾಗೂ ಐತಿಹಾಸಿಕ ಕೋಟೆ ಬೌದ್ಧರ ತಪ್ಪಸ್ಸಾಚರಿಸಿದ ಜಪದ ಬಾವಿ ಹಾಗೂ ಸುರಂಗ ಮಾರ್ಗಗಳು ಹಾಗೂ ಐತಿಹಾಸಿಕ ಗಣೇಶ ದೇವಾಲಯ ಸುಪ್ರಸಿದ್ಧಿ ಹೊಂದಿತ್ತು ಎಂಬದನ್ನು ಕೆತ್ತನೆ ಕಪ್ಪು ಕಲ್ಲಿನಲ್ಲಿ ಕಾಣಬಹುದು. ನಾನಾ ಇತಿಹಾಸ ಪ್ರಿಯರ ಅಚ್ಚು ಮೆಚ್ಚಿನ ತಾಣ ಅಲ್ಲದೇ 15ಕ್ಕೂ ಹೆಚ್ಚು ಶಾಸನಗಳು ದೊರೆತಿದ್ದು ನಾಡಿನ ನೆಲ, ಜಲ, ನಾಡು, ನುಡಿ, ಧರ್ಮ ದತ್ತಿಗಳ ಬಗ್ಗೆ ಶಾಸನಗಳಲ್ಲಿ ಉಲ್ಲೇಖವಾಗಿವೆ. ಅಲ್ಲದೆ ಶಾಸನ ಕವಿ ಬೊಮ್ಮರಸನ ಮಗ ನಾಗದೇವ ಭಟ್ಟ ಶಾಸನ ಕವಿಗಳಲ್ಲಿ ಪಾಂಡಿತ್ಯ ಹೊಂದಿ ಹಲವಾರು ಶಾಸನ ರಚಿಸಿದ್ದ ಎನ್ನುವುದು ಇತಿಹಾಸದಿಂದ ತಿಳಿದು ಬರುತ್ತದೆ.ಕಲ್ಯಾಣ ಚಾಲುಕ್ಯರ 6ನೇ ವಿಕ್ರಮಾದಿತ್ಯನ ಕಾಲದಲ್ಲಿ ಸುವರ್ಣ ಕಾಲವೆಂದು ಕರೆದು ಬೌದ್ಧ, ಜೈನ್, ಶೈವ, ವೈಷ್ಣವ ಧರ್ಮಗಳ ತವರೂರಾಗಿ ಕಲ್ಯಾಣ ಚಾಲುಕ್ಯರು, ಯಾದವ ಚಕ್ರವರ್ತಿಗಳು, ಮಹಾಮಂಡಳೇಶ್ವರರು, ದಂಡನಾಯಕರು, ಗಾವುಂಡರು, ಕೆಳದಿಯ ಅರಸರು, ಪೇಶ್ವೆಗಳು, ಡಂಬಳದ ಸಂಸ್ಥಾಪಕರಾದ ದೇಸಾಯಿ ಮನೆತನಗಳು ಈ ನಾಡನ್ನು ಆಳಿದ್ದಾರೆ. ಇಲ್ಲಿ ದೇಶ ವಿದೇಶ ಇತಿಹಾಸ ತಜ್ಞರು ಇಲ್ಲಿಯ ವಾಸ್ತುಶಿಲ್ಪ ಬಗ್ಗೆ ಅಧ್ಯಯನ ಮಾಡಿದ್ದಾರೆ. ಹೇನ್ರಿ ಕಜಿನ್ಸ್, ಫರ್ಸಿ ಬ್ರೌನ್, ಕೆ.ವಿ. ಸುಂದರರಾಜನ್, ಎಂ.ಎ. ಢಾಕಿ, ಅಡಮ್ ಹಾರ್ಡಿ, ವಿಶಾಲಾಕ್ಷಿ ಗೋಗಿ ಹಲವಾರು ಇತಿಹಾಸಕಾರರು ಕವಿಗಳು ಡಂಬಳದ ಕುರಿತು ಅಧ್ಯಯನ ಮಾಡಿದ್ದಾರೆ.
ಲಿಂ.ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಅವರ ಶ್ರಮದ ಫಲವಾಗಿ ಪುರಾತತ್ವ ಸರ್ವೇಕ್ಷಣ ಇಲಾಖೆ ದೇವಾಲಯಗಳ ಪುನರುಜ್ಜಿವನ ಕಾರ್ಯ ಕೈಗೊಂಡು ಬೃಂದಾವನ ನಿರ್ಮಾಣ, ಕಾಂಪೌಂಡ್ ಕಾಮಗಾರಿ ಕೈಗೊಂಡು ಹಸಿರಿನಿಂದ ಕಂಗೊಳಿಸುವ ಬೃಂದಾವನ ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ. ಇಂತಹ ಐತಿಹಾಸಿಕ, ಧಾರ್ಮಿಕ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಕೇಂದ್ರ ಡಂಬಳ ಉತ್ಸವ ಆಚರಿಸಲು ಸರ್ಕಾರ ಮುಂದಾಗಬೇಕಾಗಿದೆ.ನಾನಾ ಶಿಲ್ಪ ವೈಭವ ಹಾಗೂ ಕೋಮು ಸಾಮರಸ್ಯಕ್ಕೆ ಹೆಸರಾಗಿರುವ ಡಂಬಳ ಗ್ರಾಮದಲ್ಲಿ ಲಕ್ಕುಂಡಿ ಉತ್ಸವ ಮಾದರಿಯಲ್ಲಿ ಡಂಬಳ ಉತ್ಸವವನ್ನು ಆಚರಿಸಬೇಕೆಂದು ಹಲವಾರು ಸಂಘಟನೆಗಳು ಆಗ್ರಹಿಸಿವೆ.ಡಂಬಳ ಐತಿಹಾಸಿಕ, ಧಾರ್ಮಿಕ, ಸಾಂಸ್ಕೃತಿಕ, ಕಲೆ, ಸಾಹಿತ್ಯ ಕ್ಷೇತ್ರಗಳಲ್ಲಿ ತನ್ನ ಛಾಪು ಮೂಡಿಸಿ ಪ್ರಸಿದ್ಧಿ ಪಡೆದಿದೆ. ಇಂತಹ ಗ್ರಾಮದಲ್ಲಿ ಡಂಬಳ ಉತ್ಸವ ಆಚರಣೆ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.