ಸಾರಾಂಶ
ಮಂಜುನಾಥ ಕೆ.ಎಂ.
ಬಳ್ಳಾರಿ: ಆಂಧ್ರಪ್ರದೇಶದ ಈ ಹಿಂದಿನ ಸರ್ಕಾರ ಕೈಗೊಂಡ ಶೈಕ್ಷಣಿಕ ನಿಲುವಿನಿಂದಾಗಿ ಗಡಿಭಾಗದ ಹತ್ತಾರು ಕನ್ನಡ ಶಾಲೆಗಳಿಗೆ ಕುತ್ತು ಬಂದಿದೆ. ಕರ್ನಾಟಕ ಸರ್ಕಾರ ಕೂಡಲೇ ಎಚ್ಚೆತ್ತು ಆಂಧ್ರ ಸರ್ಕಾರದ ಜೊತೆ ಮಾತುಕತೆ ನಡೆಸದೇ ಹೋದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿಯೇ ಭಾಗಶಃ ಕನ್ನಡ ಶಾಲೆಗಳು ಬಂದ್ ಆಗಲಿವೆ.ಸರ್ಕಾರಿ ಪ್ರೌಢಶಾಲೆಯಲ್ಲಿ ಬರೀ ಇಂಗ್ಲೀಷ್ ಮಾಧ್ಯಮಕ್ಕೆ ಮಾತ್ರ ಪ್ರವೇಶವಿದ್ದು, ಇಂಗ್ಲೀಷ್ ಆಸಕ್ತಿಯಿದ್ದರೆ ಮಾತ್ರ ಪ್ರವೇಶ ಪಡೆಯಿರಿ ಎಂಬ ಆಂಧ್ರ ಸರ್ಕಾರದ ಶೈಕ್ಷಣಿಕ ನೀತಿ, ಕನ್ನಡ ಭಾಷೆ, ಸಂಸ್ಕೃತಿಯನ್ನು ಬದುಕನ್ನಾಗಿಸಿಕೊಂಡ ಗಡಿಭಾಗ ಕನ್ನಡಿಗರಿಗೆ ನುಂಗದ ತುತ್ತಾಗಿದೆ. ಶಾಲೆಯಲ್ಲಿ ಒಂದು ಭಾಷೆಯನ್ನಾಗಿ ಕನ್ನಡ ಕಲಿಯಲು ಅವಕಾಶ ಮಾಡಿಕೊಡಿ ಎಂದು ಗಡಿನಾಡ ಕನ್ನಡಿಗರು ಅಂಗಲಾಚುವ ಪರಿಸ್ಥಿತಿ ಬಂದೊದಗಿದೆ.
ಆಂಧ್ರದಲ್ಲಿ ಆಗಿರೋದೇನು?: ಕಳೆದ ವರ್ಷ ಆಂಧ್ರಪ್ರದೇಶ ಸರ್ಕಾರ 1000 ಸರ್ಕಾರಿ ಶಾಲೆಗಳಲ್ಲಿ ಸಿಬಿಎಸ್‌ಸಿ ಪಠ್ಯಕ್ರಮ ಆರಂಭಿಸಿ ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನಾಗಿ ಬದಲಾಯಿಸಿತು. ಈ ಶಾಲೆಗಳಲ್ಲಿ ಆಂಧ್ರದ ಗಡಿಭಾಗದ ಕರ್ನೂಲ್ ಜಿಲ್ಲೆಗೆ ಸೇರಿದ ಹೊಳಲಗುಂದಿ ಜಿಲ್ಲಾ ಪರಿಷತ್ ಕನ್ನಡ ಮಾಧ್ಯಮ ಪ್ರೌಢಶಾಲೆ, ದೊಡ್ಡ ಹರಿವಾಣ ಜಿಲ್ಲಾ ಪರಿಷತ್ ಕನ್ನಡ ಮಾಧ್ಯಮ ಪ್ರೌಢಶಾಲೆ, ಬದನೆಹಾಳು ಜಿಲ್ಲಾ ಪರಿಷತ್ ಕನ್ನಡ ಪ್ರೌಢಶಾಲೆ, ಕೌತಾಳಂ ಜಿಲ್ಲಾ ಪರಿಷತ್ ಪ್ರೌಢಶಾಲೆಗಳು ಸೇರ್ಪಡೆಗೊಂಡವು. ಇಲ್ಲಿ ಇಂಗ್ಲೀಷ್ ಹೊರತುಪಡಿಸಿದರೆ ಕನ್ನಡ ಸೇರಿದಂತೆ ಯಾವುದೇ ಪ್ರಾದೇಶಿಕ ಭಾಷೆಗೆ ಅವಕಾಶವಿಲ್ಲದಂತಾಯಿತು. ಈ ವ್ಯಾಪ್ತಿಯ ಕನ್ನಡ ಮಾಧ್ಯಮ ಶಾಲೆಗಳಲ್ಲಿ ನೂರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರತಿವರ್ಷ ಈ ಶಾಲೆಗಳಿಂದ 500ಕ್ಕೂ ಹೆಚ್ಚು ಮಕ್ಕಳು ಪ್ರೌಢಶಾಲೆ ಶಿಕ್ಷಣಕ್ಕೆ ತೆರಳುತ್ತಾರೆ. ಆದರೆ, ಸ್ಥಳೀಯ ಕನ್ನಡ ಪ್ರೌಢಶಾಲೆಗಳನ್ನು ಪೂರ್ಣ ಸಿಬಿಎಸ್‌ಸಿ ಮಾದರಿ ಶಾಲೆಗಳನ್ನಾಗಿ ಬದಲಾಯಿಸಿರುವುದರಿಂದ ಕನ್ನಡ ಭಾಷಾ ಶಿಕ್ಷಣದಿಂದ ಗಡಿನಾಡ ಕನ್ನಡ ವಿದ್ಯಾರ್ಥಿಗಳು ದೂರ ಉಳಿಯುವಂತಾಗಿದೆ. ಕನ್ನಡವನ್ನು ಒಂದು ಭಾಷೆಯನ್ನಾಗಿಯಾದರೂ ಕಲಿಯಲು ಅವಕಾಶ ಮಾಡಿಕೊಡಿ ಎಂಬ ಕನ್ನಡಿಗರ ಒತ್ತಾಸೆಗೆ ಆಂಧ್ರ ಸರ್ಕಾರ ಮಣಿಯುತ್ತಿಲ್ಲ.ಕರ್ನಾಟಕ ಸರ್ಕಾರದ ವಿರುದ್ಧ ಆಕ್ರೋಶ:
ಕರ್ನಾಟಕ ಸರ್ಕಾರ ಈ ಹಿಂದಿನಿಂದಲೂ ಗಡಿನಾಡ ಕನ್ನಡಿಗರನ್ನು ನಿರ್ಲಕ್ಷಿತ್ತಲೇ ಬಂದಿದೆ. ಗಡಿನಾಡ ಶಾಲೆಗಳ ಅಭಿವೃದ್ಧಿ ಕಡೆ ಗಮನ ಹರಿಸುತ್ತಿಲ್ಲ. ಕನ್ನಡ ಶಾಲೆಗಳಿಗೆ ಕುತ್ತು ಬಂದಾಗ ಎಂದೂ ಸ್ಪಂದಿಸಲಿಲ್ಲ. ಕನ್ನಡ ಪಠ್ಯಪುಸ್ತಕ ಪೂರೈಕೆ ಮಾಡುವಂತೆ ಪ್ರತಿ ಬಾರಿ ಕೈಯೊಡ್ಡುವ ಪರಿಸ್ಥಿತಿ ಬಂದಿದೆ. ಗಡಿನಾಡ ಕನ್ನಡಿಗರ ಹಿತ ಕಾಯುವ ಯಾವ ಕಾಳಜಿಯೂ ಕರ್ನಾಟಕ ಸರ್ಕಾರಗಳು ಈವರೆಗೂ ತೋರಿಸಲಿಲ್ಲ.ಗಡಿನಾಡ ಅಭಿವೃದ್ಧಿ ಪ್ರಾಧಿಕಾರಗಳ ಕಾರ್ಯ ಬೆಂಗಳೂರಿಗೆ ಸೀಮಿತಗೊಂಡಿತೇ ವಿನಃ ಗಡಿನಾಡ ಕನ್ನಡಿಗರ ಬಳಿ ಸುಳಿಯಲಿಲ್ಲ. ಕನ್ನಡದ ವಿದ್ಯಾರ್ಥಿಗಳು ಮಾತೃಭಾಷೆ ಕಲಿಕೆಯ ಆಸಕ್ತಿಯಿದ್ದರೂ ತೆಲುಗು, ಇಂಗ್ಲೀಷ್ ಮಾಧ್ಯಮಕ್ಕೆ ವಾಲುವಂತಾಯಿತು.
35ರಿಂದ 40 ಸಾವಿರ ಸಂಖ್ಯೆಯಲ್ಲಿದ್ದ ಗಡಿನಾಡ ಕನ್ನಡ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಇದೀಗ 9ರಿಂದ 10 ಸಾವಿರಕ್ಕೆ ಬಂದು ನಿಂತಿದೆ. ಇನ್ನೆರಡು ವರ್ಷಗಳಲ್ಲಿ ಆಂಧ್ರದ ಎಲ್ಲ ಶಾಲೆಗಳು ಮುಚ್ಚುವ ಸಾಧ್ಯತೆಯಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಆಂಧ್ರಪ್ರದೇಶದ ಗಡಿನಾಡು ಬದನೆಹಾಳು ಗ್ರಾಮದ ವೀರೇಶಗೌಡ ಹಾಗೂ ಬಸವರಾಜಪ್ಪ.ಆಂಧ್ರದ ಕರ್ನೂಲ್ ಜಿಲ್ಲೆಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಓದಿದ ಮಕ್ಕಳಿಗೆ ಪ್ರೌಢಶಾಲೆಗೆ ಪ್ರವೇಶ ಪಡೆಯಲು ಕನ್ನಡ ಮಾಧ್ಯಮವಿಲ್ಲ. ಸಿಬಿಎಸ್‌ಸಿ ಸಿಲೆಬಸ್ ಜಾರಿಗೊಳಿಸಿದ್ದು, ಕನ್ನಡ ಒಂದು ಭಾಷೆಯಾಗಿ ಕಲಿಯಲೂ ಅವಕಾಶವಿಲ್ಲದಂತಾಗಿದೆ. ಕರ್ನಾಟಕ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ, ಗಡಿನಾಡ ಕನ್ನಡ ಉಳಿಸಬೇಕು ಎನ್ನುತ್ತಾರೆ ಕನ್ನಡ ಯುವಕ ಸಂಘದ ಅಧ್ಯಕ್ಷ ಎಚ್.ಶಿವನಗೌಡ
ಕನ್ನಡ ಮಾಧ್ಯಮದಲ್ಲಿ ಮಕ್ಕಳಿಗೆ ಇದ್ದಕ್ಕಿದ್ದಂತೆಯೇ ಇಂಗ್ಲೀಷ್ ಕಲಿಯಿರಿ ಎಂದರೆ ಹೇಗೆ? ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳುತ್ತಿಲ್ಲ. ನೀವು ಎಲ್ಲಿಗಾದರೂ ಹೋಗಿ ಎನ್ನುತ್ತಿದ್ದಾರೆ. ಇದು ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಕಂಟಕ ತಂದಿದೆ ಎನ್ನುತ್ತಾರೆ ಕನ್ನಡ ಯುವಕ ಸಂಘದ ಪದಾಧಿಕಾರಿ ಜಿ.ದೊಡ್ಡಬಸಪ್ಪ.