ಕನ್ನಡಪ್ರಭ ವಾರ್ತೆ ಅಂಕೋಲಾ

ಹಿಂದೂ ಧರ್ಮಕ್ಕೆ ಅನ್ಯ ಮತೀಯರಿಗಿಂತ ಹೆಚ್ಚಾಗಿ ಹಿಂದೂಗಳಾಗಿ ಹುಟ್ಟಿ ಮಾತೃ ಧರ್ಮವನ್ನು ವಿರೋಧಿಸುವವರಿಂದಲೇ ಅತಿ ಹೆಚ್ಚು ಆತಂಕ, ಅಪಾಯ ಎದುರಾಗಿದೆ ಎಂದು ಯುವ ವಾಗ್ಮಿ ಹಾರಿಕಾ ಮಂಜುನಾಥ ಎಚ್ಚರಿಸಿದರು.

ಹಿಂದೂ ಸಮ್ಮೇಳನ ಸಮಿತಿ ಅಂಕೋಲಾ ನಗರ ಮಂಡಲ ವತಿಯಿಂದ ಜೈಹಿಂದ್ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಹಿಂದೂ ಸಮಾಜೋತ್ಸವದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ನಮ್ಮ ದೇಶದ ಮೇಲೆ 1375 ವರ್ಷಗಳಿಂದ ನಿರಂತರ ದಾಳಿ, ಲೂಟಿ ನಡೆದರೂ ಸಂಸ್ಕೃತಿ, ಪರಂಪರೆ ನಾಶ ಮಾಡಲು ಸಾಧ್ಯವಾಗಲಿಲ್ಲ. ಮೊಘಲರಿಂದ ಬ್ರಿಟಿಷರ ತನಕ ನಮ್ಮ ಮೇಲೆ ನಿರಂತರ ದಾಳಿ ಆಯಿತು. ನಾವು ಅದನ್ನು ಸಮರ್ಥವಾಗಿ ಮೆಟ್ಟಿ ನಿಂತೆವು. ಇದಕ್ಕೆ ಕಾರಣ ನಮ್ಮ ಹಿರಿಯರು ತಾವು ಪ್ರಾಣವನ್ನಾದರೂ ಬಿಟ್ಟೇವು, ನಮ್ಮ ಧರ್ಮ, ಸಂಸ್ಕೃತಿಯನ್ನು ಬಿಡಲಾರೆವು ಎಂದು ಗಟ್ಟಿಯಾಗಿ ನಿಂತಿದ್ದು ಕಾರಣ. ಇಂತಹ ಅಸೀಮ ಸಂಘಟಿತ ಬಲ ಈಗ ಹಿಂದೂ ಧರ್ಮಕ್ಕೆ ಅಗತ್ಯವಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕರ್ಕಿ ಸಂಸ್ಥಾನ ಮಠದ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮೀಜಿ ಮಾತನಾಡಿದರು.


ಪೌರ ಕಾರ್ಮಿಕರಾದ ಪ್ರೇಮಾ ರಾಘವೇಂದ್ರ ಶಿರಾಲಿಕರ್ ಮುಖ್ಯ ಅತಿಥಿಯಾಗಿದ್ದರು. ಭರತನಾಟ್ಯದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಪುನೀತ ನಾಯ್ಕ, ಅರ್ಪಿತಾ ಭಟ್ಟ ಯಕ್ಷಗಾನ ಪ್ರದರ್ಶಿಸಿದರು. ಆಭಯ ಮರಬಳ್ಳಿ ಹಾರ್ಮೊನಿಯಂ, ಶಶಿಧರ ಶೇಣ್ವಿ ತಬಲಾದೊಂದಿಗೆ ಧನ್ಯಾ ಶೇಣ್ವಿ ವಯಕ್ತಿಕ ಗೀತೆ ಹಾಡಿದರು. ಹಿಂದೂ ಸಮ್ಮೇಳನ ಸಮಿತಿಯ ಅಧ್ಯಕ್ಷ ನಾಗೇಶ ನಾಯ್ಕ ಸ್ವಾಗತಿಸಿದರು. ಹಿಂದೂ ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷ ಸುಭಾಷ ನಾರ್ವೇಕರ್ ಪ್ರಾಸ್ತಾವಿಕ ಮಾತನಾಡಿದರು. ನಾಗರಾಜ ಶೆಟ್ಟಿ ವಂದಿಸಿದರು. ಮಹೇಶ ಮಹಾಲೆ ವಂದೇ ಮಾತರಂ ಹಾಡಿದರು. ಶಿಕ್ಷಕ ಪ್ರಶಾಂತ ನಾಯಕ ಕಾರ್ಯಕ್ರಮ ನಿರ್ವಹಿಸಿದರು. ಇದಕ್ಕೂ ಮೊದಲು ಶ್ರೀ ಶಾಂತಾದುರ್ಗಾ ದೇವಸ್ಥಾನದಿಂದ ಭವ್ಯ ಶೋಭಾಯಾತ್ರೆ ನಡೆಯಿತು. ಮೆರವಣಿಗೆಯಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು, ಭಜನಾ ತಂಡಗಳು, ವಾರಕರಿ, ಜನಪದೀಯ ವಾದ್ಯಮೇಳಗಳು ಇದ್ದವು.