ಸಾರಾಂಶ
ಜೈನ್ ಧರ್ಮದ ವಿಶಿಷ್ಟ ತತ್ವಾಚರಣೆಗಳಿಂದ ಮೋಕ್ಷಕ್ಕೆ ಮಾರ್ಗ ಲಭಿಸುತ್ತದೆ. ಶ್ರಾವಕ- ಶ್ರಾವಕಿಯರು ನಿತ್ಯವೂ ಪಠಿಸುವ ಣಮೋಕಾರ ಮಂತ್ರದಲ್ಲಿ ಅಪಾರ ಶಕ್ತಿ ಸಂಚಯವಿದೆ. ಮನುಷ್ಯನ ರಾಕ್ಷಸೀ ಪ್ರವೃತ್ತಿಗಳನ್ನು ನಾಶಗೊಳಿಸಿ ಸತ್ಯ ಶುದ್ಧ ಜೀವನ ವಿಧಾನದ ಉಪಕ್ರಮಗಳನ್ನು ಹುಟ್ಟುಹಾಕಿ ಮುಕ್ತ ಭಾವಸಂಪನ್ನತೆಯನ್ನು ತುಂಬುತ್ತದೆ.
ಧಾರವಾಡ: ಪ್ರಸ್ತುತ ಧರ್ಮಸ್ಥಳ ಕ್ಷೇತ್ರದ ಸುತ್ತ ಹೆಣೆದುಕೊಂಡಿದ್ದ ಕಾರ್ಮೋಡಗಳು ಕರಗಿದ್ದು, ಎಲ್ಲ ಆರೋಪಗಳು ಹುಸಿಯಾಗಿವೆ. ಶ್ರೀ ಮಂಜುನಾಥಸ್ವಾಮಿಯ ಆಶೀರ್ವಾದದ ನೆರಳಿನಲ್ಲಿ ಭಕ್ತ ಸಂಕುಲಕ್ಕೆ ಸತ್ಯದ ದರ್ಶನವಾಗುತ್ತಿದೆ ಎಂದು ಎಸ್.ಡಿ.ಎಂ. ವೈದ್ಯಕೀಯ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನಕುಮಾರ ನುಡಿದರು.
ತಾಲೂಕಿನ ಅಮ್ಮಿನಬಾವಿ ಶ್ರೀನೇಮಿನಾಥ ಜಿನಾಲಯದಲ್ಲಿ ಜರುಗಿದ ಜೈನ್ ಧರ್ಮ ಸಮಾವೇಶ ಉದ್ಘಾಟಿಸಿದ ಅವರು, ಜೈನ್ ಧರ್ಮದ ವಿಶಿಷ್ಟ ತತ್ವಾಚರಣೆಗಳಿಂದ ಮೋಕ್ಷಕ್ಕೆ ಮಾರ್ಗ ಲಭಿಸುತ್ತದೆ. ಶ್ರಾವಕ- ಶ್ರಾವಕಿಯರು ನಿತ್ಯವೂ ಪಠಿಸುವ ಣಮೋಕಾರ ಮಂತ್ರದಲ್ಲಿ ಅಪಾರ ಶಕ್ತಿ ಸಂಚಯವಿದೆ. ಮನುಷ್ಯನ ರಾಕ್ಷಸೀ ಪ್ರವೃತ್ತಿಗಳನ್ನು ನಾಶಗೊಳಿಸಿ ಸತ್ಯ ಶುದ್ಧ ಜೀವನ ವಿಧಾನದ ಉಪಕ್ರಮಗಳನ್ನು ಹುಟ್ಟುಹಾಕಿ ಮುಕ್ತ ಭಾವಸಂಪನ್ನತೆಯನ್ನು ತುಂಬುತ್ತದೆ ಎಂದರು.ಸಾನ್ನಿಧ್ಯ ವಹಿಸಿದ್ದ ಜಿನತಪಸ್ವಿನಿ ಗಣಿನಿ ಆರ್ಯಿಕಾರತ್ನ ಶ್ರೀಜಿನವಾಣಿ ಮಾತಾಜಿ, ಧ್ಯಾನದ ಎಲ್ಲ ಆಚರಣೆಗಳು ನಿತ್ಯವೂ ಪ್ರಾತಃಕಾಲದ ಬ್ರಾಹ್ಮೀ ಮುಹೂರ್ತದಲ್ಲಿಯೇ ನಡೆಯಬೇಕು. ಆಗ ಮಾತ್ರ ಶ್ರಾವಕ- ಶ್ರಾವಕಿಯರು ಮಂತ್ರಗಳ ಪಠಣದ ತನ್ಮಯತೆಯಲ್ಲಿ ಧ್ಯಾನಸ್ಥ ಮನಸ್ಸನ್ನು ಹೊಂದಲು ಸಾಧ್ಯ ಎಂದರು.
ಕಾಂಗ್ರೆಸ್ ಮುಖಂಡ ಟಿ.ಪಿ. ಅಷ್ಟಗಿ ಮಾತನಾಡಿ, ಚಾತುರ್ಮಾಸದ ಅನುಷ್ಠಾನದಲ್ಲಿರುವ ಗಣಿನಿ ಆರ್ಯಿಕಾರತ್ನ ಶ್ರೀಜಿನವಾಣಿ ಮಾತಾಜಿಯವರು ನಡೆಸುವ ವಿವಿಧ ವೃತಾಚರಣೆಗಳಿಂದಾಗಿ ಅಮ್ಮಿನಬಾವಿ ಜಿನಾಲಯದಲ್ಲಿ ನಿತ್ಯವೂ ಹಬ್ಬದ ವಾತಾವರಣ ಉಂಟಾಗಿದೆ ಎಂದರು.ಪ್ರಧಾನ ಉಪನ್ಯಾಸ ನೀಡಿದ ಲೇಖಕ ಡಾ. ಗುರುಮೂರ್ತಿ ಯರಗಂಬಳಿಮಠ, ದಶಲಕ್ಷಣ ಪರ್ವದ 10 ದಿನಗಳ ಆಚರಣೆಗಳು ಶ್ರಾವಕ- ಶ್ರಾವಕಿಯರನ್ನು ದ್ವೇಷ, ಅಸೂಯೆ, ಸಂಘರ್ಷ, ವೈರುಧ್ಯಗಳಿಂದ ಮುಕ್ತಗೊಳಿಸಿ ಅಂತರಂಗ ಮತ್ತು ಬಹಿರಂಗ ಶುದ್ಧಿಯ ಜೀವನ ವಿಧಾನದೊಂದಿಗೆ ಸಜ್ಜನಿಕೆಯ ಸಿಹಿ ಸಾಮರಸ್ಯವನ್ನು ಮೂಡಿಸುತ್ತವೆ ಎಂದರು.
ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಸಹೋದರಿ ಪದ್ಮಲತಾ ನಿರಂಜನಕುಮಾರ, ಗಣ್ಯರಾದ ಶಶಿಕಲಾ ದೇಸಾಯಿ, ಪಾರ್ಶ್ವನಾಥ ಪತ್ರಾವಳಿ, ಚಂದ್ರಕಾಂತ ನವಲೂರ, ಮಹಾವೀರ ದೇಸಾಯಿ, ಅಜಿತಕುಮಾರ ದೇಸಾಯಿ, ದೀಪಕ ದೇಸಾಯಿ, ಬ್ರಹ್ಮಕುಮಾರ ದೇಸಾಯಿ, ಪದ್ಮರಾಜ ಜಾಯಕ್ಕನವರ ಇದ್ದರು. ಪಿ.ಎಸ್. ಪತ್ರಾವಳಿ ಸ್ವಾಗತಿಸಿದರು. ಅರುಣ ನವಲೂರ ನಿರೂಪಿಸಿದರು. ಟಿ.ಎಂ. ದೇಸಾಯಿ ವಂದಿಸಿದರು.