ಹಿಂದೂ- ಮುಸ್ಲಿಂ ಸಾಮರಸ್ಯಕ್ಕೆ ಮುನ್ನುಡಿ ಬರೆದ ದಸರಾ ಪುರಾಣ ಪ್ರವಚನ

| Published : Sep 26 2025, 01:00 AM IST

ಹಿಂದೂ- ಮುಸ್ಲಿಂ ಸಾಮರಸ್ಯಕ್ಕೆ ಮುನ್ನುಡಿ ಬರೆದ ದಸರಾ ಪುರಾಣ ಪ್ರವಚನ
Share this Article
  • FB
  • TW
  • Linkdin
  • Email

ಸಾರಾಂಶ

ಅಲ್ಲಿ- ಇಲ್ಲಿ ಹಿಂದೂ ಮುಸ್ಲಿಮರ ನಡುವೆ ಸಾಮರಸ್ಯದ ಕಂದಕ ಹೆಚ್ಚುತ್ತಿರುವ ವೇಳೆ ಗೊಜನೂರ ಗ್ರಾಮದಲ್ಲಿ ಹಿಂದೂ ಮುಸ್ಲಿಂರಲ್ಲಿ ಸಹೋದರತೆಯ ಭಾವನೆ ಉಂಟು ಮಾಡುವಲ್ಲಿ ದೇವಿಯ ಪುರಾಣ ಪ್ರವಚನ, ಆರಾಧನೆ ಸಹಕಾರಿಯಾಗಿದೆ.

ಲಕ್ಷ್ಮೇಶ್ವರ: ಸಮೀಪದ ಗೊಜನೂರ ಗ್ರಾಮದಲ್ಲಿ ದೇವಿ ಪುರಾಣದ ವೇಳೆ ಗ್ರಾಮದ ಅಂಜುಮನ್ ಎ ಇಸ್ಲಾಂ ಕಮಿಟಿಯು ಅನ್ನಪ್ರಸಾದ ವಿತರಣೆ ಮಾಡಿ ಸಾಮರಸ್ಯಕ್ಕೆ ಮುನ್ನುಡಿ ಬರೆದ ಘಟನೆ ಬುಧವಾರ ರಾತ್ರಿ ಕಂಡು ಬಂದಿತು.

ಗೊಜನೂರ ಗ್ರಾಮದಲ್ಲಿ ಗ್ರಾಮ ದೇವಿಯ ದೇವಸ್ಥಾನದಲ್ಲಿ ಕಳೆದ ಮೂರು ವರ್ಷಗಳಿಂದ ನವರಾತ್ರಿ ಅಂಗವಾಗಿ ದೇವಿಯ ಪುರಾಣ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈ ವರ್ಷವು ದೇವಿಯ ಪುರಾಣ ಪ್ರವಚನ ಕಾರ್ಯಕ್ರಮ ಕಳೆದ 4 ದಿನಗಳಿಂದ ನಡೆಯುತ್ತಿದ್ದು. ಗ್ರಾಮದ ಸಾರ್ವಜನಿಕರು ಹಾಗೂ ಓಣಿಯಲ್ಲಿನ ಭಜನಾ ಮಂಡಳಿಗಳು ಪುರಾಣ ಪ್ರವಚನ ಕೇಳಲು ಬರುವ ನೂರಾರು ಜನರಿಗೆ ಪುರಾಣ ಮುಗಿದ ನಂತರ ಅನ್ನ ಸಂತರ್ಪಣೆ ಜತೆ ಧಾರ್ಮಿಕ ಮತ್ತು ನೈತಿಕ ಮೌಲ್ಯಗಳನ್ನು ಬಿತ್ತುವ ಕಾರ್ಯ ಮಾಡುತ್ತಿದ್ದಾರೆ.

ಪ್ರಸ್ತುತ ವರ್ಷ ಜಗಜ್ಯೋತಿ ಬಸವೇಶ್ವರ ಭಜನಾ ಸಂಘ, ಚನ್ನಬಸವೇಶ್ವರ ಭಜನಾ ಸಂಘ, ಮಲ್ಲಿಕಾರ್ಜುನ ಭಜನಾ ಸಂಘ, ಅಂಜುಮನ್ ಎ ಇಸ್ಲಾಂ ಕಮೀಟಿ ಹೀಗೆ ವಿವಿಧ ಸಂಘ- ಸಂಸ್ಥೆಗಳು ದೇವಿಯ ಪುರಾಣ ಕೇಳಲು ಬರುವ ಭಕ್ತಾದಿಗಳಿಗೆ ಗೋಧಿ ಹುಗ್ಗಿ, ಕಡುಬು, ಹೋಳಿಗೆ, ಶಿರಾ, ಜಿಲೇಬಿ, ಬುಂದಿ ಮೊದಲಾದ ಸಿಹಿ ಪದಾರ್ಥಗಳನ್ನು ಉಣಬಡಿಸಿ ನಂತರ ಅನ್ನ, ಸಾಂಬಾರು ನೀಡಿ ಪ್ರಸಾದದ ಸೇವೆಯನ್ನು ಸ್ವಯಂ ಪ್ರೇರಿತರಾಗಿ ಮಾಡುತ್ತಿರುವುದು ಗ್ರಾಮದಲ್ಲಿ ಭಕ್ತಿಯ ವಾತಾವರಣ ಉಂಟು ಮಾಡಿದೆ.

ಅಲ್ಲದೆ ಅಲ್ಲಿ- ಇಲ್ಲಿ ಹಿಂದೂ ಮುಸ್ಲಿಮರ ನಡುವೆ ಸಾಮರಸ್ಯದ ಕಂದಕ ಹೆಚ್ಚುತ್ತಿರುವ ವೇಳೆ ಗೊಜನೂರ ಗ್ರಾಮದಲ್ಲಿ ಹಿಂದೂ ಮುಸ್ಲಿಂರಲ್ಲಿ ಸಹೋದರತೆಯ ಭಾವನೆ ಉಂಟು ಮಾಡುವಲ್ಲಿ ದೇವಿಯ ಪುರಾಣ ಪ್ರವಚನ, ಆರಾಧನೆ ಸಹಕಾರಿಯಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ದೇವಿಯ ಪುರಾಣವನ್ನು ಬೆಳಗಾವಿ ಜಿಲ್ಲೆಯ ಬಸವರಾಜ ಹಿರೇಮಠ ಅವರು ತಮ್ಮ ವಾಕ್‌ಚಾತುರ್ಯದಿಂದ ಭಕ್ತರು ಮನಃ ಗೆಲ್ಲುವ ಮೂಲಕ ದೈವಿ ಭಾವನೆ ಬಿತ್ತುವ ಕೆಲಸ ಮಾಡುತ್ತಿರುವುದು ಗಮನಾರ್ಹ. ಸಹ ಪ್ರವಚನಕಾರ ನಾಗರಾಜ ಕಲಬುರ್ಗಿ ಹಾಗೂ ದರ್ಶನ ಅವರು ತಬಲಾ ಸಾಥ್ ಪುರಾಣ ಕಾರ್ಯಕ್ಕೆ ಮೆರುಗು ನೀಡಿದೆ ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.