ಸಾರಾಂಶ
- ನಿವೃತ್ತ ಪೊಲೀಸ್ ಅಧಿಕಾರಿಗಳ ಭವನದಲ್ಲಿ ಬಿ.ಶ್ರೀನಿವಾಸ್ ರಚಿತ ಪುಸ್ತಕಗಳ ಬಿಡುಗಡೆ ಸಮಾರಂಭ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಕೊರಗ ಭಾಷೆ ಮಾತನಾಡುವ ಕೊರಗ ಸಮುದಾಯ, ಕೊಡವರು, ಸೆರಾ ಮುಂತಾದ ಸಮುದಾಯ ಕೆಲವೇ ವರ್ಷದಲ್ಲಿ ಕಾಣೆಯಾಗುವ ಸ್ಥಿತಿಗೆ ಬಂದಿವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.
ಭಾನುವಾರ ನಿವೃತ್ತ ಪೊಲೀಸ್ ಅಧಿಕಾರಿಗಳ ಭವನದಲ್ಲಿ ಮೇ ಸಾಹಿತ್ಯ ಮೇಳ ಬಳಗ, ದಿನಮಾನ ಪ್ರಕಾಶನ, ಗದಗ ಲಡಾಯಿ ಪ್ರಕಾಶನ, ಕೊಪ್ಪಳದ ತಳಮಳ ಪ್ರಕಾಶನ, ಹಾವೇರಿ ಶ್ರಮಿಕ ಪ್ರಕಾಶನ, ದಾವಣಗೆರೆಯ ಜನ ಸೇವಾ ಫೌಂಡೇಷನ್, ರಾಜ್ಯ ಅಲ್ಪ ಸಂಖ್ಯಾತರ ಜಾಗೃತಿ ವೇದಿಕೆ, ಗದಗ ದಲಿತ ಕಲಾ ಮಂಡಳಿ ಸಹಯೋಗದಲ್ಲಿ ನಡೆದ ಬಿ. ಶ್ರೀನಿವಾಸ್ ಅವರ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.ಸಮುದಾಯಗಳ ಸಾವು 21ನೇ ಶತಮಾನದ ಅತಿ ದೊಡ್ಡ ಅನಾಹುತ. ಬಲಾಢ್ಯ ಸಮುದಾಯದ ಅಧಿಕಾರ, ಆರ್ಥಿಕ, ರಾಜಕೀಯ ಶಕ್ತಿಯ ಪರಿಣಾಮವಾಗಿ ಸಣ್ಣಪುಟ್ಟ ಸಮುದಾಯಗಳು ಸಾಯುತ್ತಿವೆ. ಕೆಲವು ಸಮುದಾಯಗಳು ಇನ್ನೊಂದು ಸಂಸ್ಕೃತಿಗಳ ಪ್ರಭಾವಕ್ಕೆ ಒಳಗಾಗುವುದು ಸಾವಿಗೆ ಸಮವಾಗುತ್ತದೆ. ದೊಡ್ಡ ಸಮುದಾಯ, ಬಂಡವಾಳಶಾಹಿಗಳು ಸಣ್ಣಪುಟ್ಟ ಸಮುದಾಯಗಳನ್ನು ಜಗತ್ತಿನಲ್ಲೇ ಇಲ್ಲ ಎನ್ನುವಂತೆ ಮಾಡುತ್ತಿವೆ. ಸಮುದಾಯ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಒಂದರೆಡು ಅಭಿಪ್ರಾಯ ವ್ಯಕ್ತವಾಗುತ್ತವೆ. ಆನಂತರ ಏನು ಎಂಬುದರತ್ತ ಗಮನ ನೀಡದಂತಹ ವಾತಾವರಣ ಇದೆ ಎಂದರು.
ಈಗ ಸರ್ಕಾರಗಳು ಅಂಕಿ ಅಂಶಗಳ ಮೇಲೆಯೂ ನಿಯಂತ್ರಣ ಸಾಧಿಸುತ್ತಿವೆ. ಅರಣ್ಯ ವ್ಯಾಪ್ತಿ, ಕೊರೊನಾ ಸಂದರ್ಭದಲ್ಲಿನ ಸಾವು, ಇತ್ತೀಚಿಗೆ ನಡೆದ ಕುಂಭಮೇಳದಲ್ಲಿನ ಸಾವು ಯಾವುದನ್ನೂ ನಿಖರವಾಗಿ ಹೇಳುತ್ತಿಲ್ಲ. ಪ್ರಭುತ್ವಗಳು ಮಾಹಿತಿಯನ್ನು ನಿಯಂತ್ರಣ ಮಾಡುತ್ತಿವೆ. ಅಂಕಿ-ಅಂಶಗಳು ಇಲ್ಲದೆ ಏನು ಮಾಡುವಂತಿಲ್ಲ. ಸಮುದಾಯ ಸಾವು, ಪರಿಸರದ ಉಳಿವು, ನೈಜ ಮಾಹಿತಿ ಇತರೆ ವಿಷಯಗಳಿಗಾಗಿ ರಾಷ್ಟ್ರ, ರಾಜ್ಯಮಟ್ಟದ ಹೋರಾಟ ರೂಪಿಸಬೇಕು. ಇಲ್ಲವಾದಲ್ಲಿ ಮುಂದೆ ಸಂಕಷ್ಟ ಎದುರಿಸಬೇಕಾದೀತು ಎಂದರು.ಹಿರಿಯ ನ್ಯಾಯವಾದಿ ಬಿ.ಎಂ. ಹನುಮಂತಪ್ಪ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಆರ್.ಜಿ. ಹಳ್ಳಿ ನಾಗರಾಜ್, ಲಕ್ಷ್ಷಣ್ ಹೂಗಾರ್, ಶಿವಸುಂದರ್, ಸತೀಶ್ ಕುಲಕರ್ಣಿ, ಬಸವರಾಜ್ ಸೂಳಿಬಾವಿ, ಲೇಖಕ ಬಿ.ಶ್ರೀನಿವಾಸ್, ಹಸೀನಾ, ಅಬ್ದುಲ್ ಘನಿ ತಾಹೀರ್, ಎಂ.ಗುರುಸಿದ್ದಸ್ವಾಮಿ ಇತರರು ಇದ್ದರು. ಕನ್ನಡ ಉಪನ್ಯಾಸಕ ವಿರೂಪಾಕ್ಷಪ್ಪ ಪಡುಗೋದಿ ಪ್ರಾಸ್ತಾವಿಕ ಮಾತುಗಳಾಡಿದರು.
- - - -9ಕೆಡಿವಿಜಿ41:ದಾವಣಗೆರೆಯಲ್ಲಿ ಬಿ. ಶ್ರೀನಿವಾಸ್ ಅವರ ಪುಸ್ತಕಗಳನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಬಿಡುಗಡೆ ಮಾಡಿದರು.