ಸಾರಾಂಶ
ಭದ್ರಾ ಅಣೆಕಟ್ಟೆಯಿಂದ ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಯ ಹಳ್ಳಿಗಳಿಗೆ ಕುಡಿಯುವ ನೀರು ಕೊಡಲು ರೈತ ಸಂಘದ ವಿರೋಧವಿಲ್ಲ, ಆದರೆ, ಭದ್ರಾ ಬಲದಂಡೆಯಿಂದ ನೀರು ಕೊಡಲು ವಿರೋಧವಿದೆ.
ಶಿವಮೊಗ್ಗ: ಭದ್ರಾ ಅಣೆಕಟ್ಟೆಯಿಂದ ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಯ ಹಳ್ಳಿಗಳಿಗೆ ಕುಡಿಯುವ ನೀರು ಕೊಡಲು ರೈತ ಸಂಘದ ವಿರೋಧವಿಲ್ಲ, ಆದರೆ, ಭದ್ರಾ ಬಲದಂಡೆಯಿಂದ ನೀರು ಕೊಡಲು ವಿರೋಧವಿದೆ. ಈಗ ಹಾಲಿ ಸೀಳಿರುವ ಬಲದಂಡೆಗೆ ಕೂಡಲೇ ಗೋಡೆ ನಿರ್ಮಿಸಿ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಕೊಡಬೇಕು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಆಗ್ರಹಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾಲೆಯಿಂದ ನೀರು ಕೊಡುವ ಬದಲು ನದಿಯಿಂದ ನೀರು ಕೊಡಬೇಕು ಎಂಬುದು ನಮ್ಮ ಒತ್ತಾಯ. ತಕ್ಷಣದಿಂದ ಸೀಳಿರುವ ಬಲದಂಡೆಯನ್ನು ಉನ್ನತಮಟ್ಟದ ತಾಂತ್ರಿಕ ಸಮಿತಿಯಿಂದ ವರದಿ ಪಡೆದು ಅಲ್ಲಿ ಜು.15 ರೊಳಗೆ ಗೋಡೆಯನ್ನು ನಿರ್ಮಿಸಿ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆ ಬೆಳೆಯಲು ನೀರು ಹರಿಸಬೇಕು. ಜೊತೆಗೆ ಭದ್ರಾ ಎಡದಂಡೆಗೆ ಹೊಸ ಗೇಟನ್ನೂ ತಕ್ಷಣವೇ ಅಳವಡಿಸಿ ಎಡದಂಡೆಗೂ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ವಿದ್ಯುತ್ ಖರ್ಚು ಉಳಿಸುವುದಕ್ಕಾಗಿ ನಾಲೆಯಿಂದ ನೀರು ಕೊಡುವ ತೀರ್ಮಾನ ಸರಿಯಲ್ಲ. ಅದರ ಬದಲಾಗಿ ನದಿ ಪಾತ್ರದಿಂದಲೇ ಜಾಕ್‌ವೆಲ್ ಮುಖಾಂತರ ನೀರು ಕೊಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಚಿಕ್ಕಮಂಗಳೂರು ಮತ್ತು ಚಿತ್ರದುರ್ಗ ಜಿಲ್ಲೆಗಳ 1236 ಹಳ್ಳಿಗಳಿಗೆ ಮತ್ತು ಹೊಸದುರ್ಗಾ ಪಟ್ಟಣಕ್ಕೆ ಜಲಜೀವನ್ ಮಿಷನ್ ಅಡಿಯಲ್ಲಿ 1600 ಕೋಟಿ ರು. ವೆಚ್ಚದಲ್ಲಿ ನಾಲೆಯಿಂದ ದಿನ 30 ಕ್ಯೂಸೆಕ್ಸ್ ನಂತೆ ವರ್ಷವಿಡಿ 1 ಟಿಎಂಸಿ ಕುಡಿಯುವ ನೀರು ಮಂಜೂರಾಗಿದೆ. ಭದ್ರಾ ಜಲಾಶಯದ ಮುಂಭಾಗದ ಪವರ್ ಹೌಸ್ ಬಳಿ ಬಲದಂಡೆ ಕಾಲುವೆಯಿಂದ ನೀರು ಪಡೆದು ಅಲ್ಲಿಯೇ ಸ್ವಲ್ಪ ದೂರದಲ್ಲಿ ೮ ಎಕರೆ ಪ್ರದೇಶದಲ್ಲಿ ನಿರ್ಮಿಸುತ್ತಿರುವ ಶುದ್ಧೀಕರಣ ಘಟಕಕ್ಕೆ ಪೂರೈಸಲಾಗುತ್ತಿದೆ.
ಈ ಯೋಜನೆಗೆ 2020ರಲ್ಲಿ ಮಂಜೂರಾತಿ ಸಿಕ್ಕಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಾಮಗಾರಿ ಕೈಗೆತ್ತಿಕೊಂಡಿದೆ. ಬಲದಂಡೆ ನಾಲೆಯಿಂದ ಅಣೆಕಟ್ಟು ಹತ್ತಿರದಲ್ಲಿಯೇ ಬಲದಂಡೆ ಮಣ್ಣು ಬಲಹೀನ ಆಗಿರುವ ಸ್ಥಳದಲ್ಲಿ ಸೀಳಿ ನೀರು ಬಿಟ್ಟರೆ ಮುಂದೆ ಆ ಜಾಗದಲ್ಲಿ ಬಲದಂಡೆ ನಾಲೆಯೇ ಹೊಡೆದು ಹೋಗುವ ಅಪಾಯವಿದೆ. ಆದ್ದರಿಂದ ಅದರ ಬದಲಾಗಿ ನದಿ ಪಾತ್ರದಿಂದ ನೀರು ಕೊಡಲು ನಮ್ಮ ಅಭ್ಯಂತರವಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಹಿಟ್ಟೂರು ರಾಜು, ರಾಘವೇಂದ್ರ, ಹನುಮಂತಪ್ಪ, ರವಿ, ಚಂದ್ರಪ್ಪ, ಮಂಜಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಈ ವರ್ಷ ಭದ್ರಾ ಅಣೆಕಟ್ಟೆಯಲ್ಲಿ ಈವರೆಗೆ 40 ಟಿಎಂಸಿ ನೀರು ಸಂಗ್ರಹವಾಗಿದ್ದು, ಅಣೆಕಟ್ಟಿಗೆ ಒಳಹರಿವು ಹೆಚ್ಚಾಗಿದೆ. ಶೀಘ್ರದಲ್ಲಿ ಅಣೆಕಟ್ಟು ತುಂಬುವ ಆಶಾಭಾವನೆ ಇದೆ. ಪ್ರತಿ ವರ್ಷ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆ ಬೆಳೆಯಲು ಆಣೆಕಟ್ಟು ತುಂಬಿದಾಗ ಜುಲೈ15ರಿಂದಲೇ ನೀರು ಬಿಟ್ಟಿರುವ ಉದಾಹರಣೆ ಇದೆ. ಈ ವರ್ಷವೂ ಅಣೆಕಟ್ಟೆ ತುಂಬುವುದರಿಂದ ಜು.15ರಿಂದಲೇ ನೀರು ಬಿಡಬೇಕು.- ಎಚ್.ಆರ್.ಬಸವರಾಜಪ್ಪ, ರೈತ ಸಂಘದ ರಾಜ್ಯಾಧ್ಯಕ್ಷ.
;Resize=(128,128))
;Resize=(128,128))
;Resize=(128,128))