ಸಾಮಾಜಿಕ ಜಾಲತಾಣದಿಂದ ಮಕ್ಕಳ ಅಧಃಪತನ: ಹೇಮಂತಕುಮಾರ

| Published : Jul 21 2024, 01:19 AM IST

ಸಾರಾಂಶ

ಕೊಪ್ಪಳ ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆ ಶ್ರೀ ಶಾರದಾ ಇಂಟರ್‌ನ್ಯಾಷನಲ್ ಶಾಲೆ ಹಾಗೂ ಶ್ರೀ ಶಾರದಾ ಚಿಣ್ಣರ ಲೋಕದ ಸಂಯುಕ್ತಾಶ್ರಯದಲ್ಲಿ ಶಾಲಾ ಸಂಸತ್ತಿನ ರಚನೆ, ಸದಸ್ಯರ ಪದಗ್ರಹಣ ಮತ್ತು ಪ್ರಮಾಣವಚನ ಕಾರ್ಯಕ್ರಮ ನಡೆಯಿತು.

ಕೊಪ್ಪಳ: ಸಾಮಾಜಿಕ ಜಾಲತಾಣ ಎಷ್ಟು ಪ್ರಯೋಜನಕಾರಿಯಾಗಿದೆಯೋ ಅಷ್ಟೇ ಅಪಾಯಕಾರಿಯಾಗಿದೆ. ವಿದ್ಯಾರ್ಥಿಗಳನ್ನು ಅದು ಅಧಃಪತನಕ್ಕೆ ತಳ್ಳುತ್ತಿವೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹೇಮಂತಕುಮಾರ ಆತಂಕ ವ್ಯಕ್ತಪಡಿಸಿದ್ದಾರೆ.

ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆ ಶ್ರೀ ಶಾರದಾ ಇಂಟರ್‌ನ್ಯಾಷನಲ್ ಶಾಲೆ ಹಾಗೂ ಶ್ರೀ ಶಾರದಾ ಚಿಣ್ಣರ ಲೋಕದ ಸಂಯುಕ್ತಾಶ್ರಯದಲ್ಲಿ ಶಾಲಾ ಸಂಸತ್ತಿನ ರಚನೆ, ಸದಸ್ಯರ ಪದಗ್ರಹಣ ಮತ್ತು ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇವತ್ತಿನ ಕಾಲಘಟ್ಟದಲ್ಲಿ ಮಕ್ಕಳ ಕೈಗೆ ಮೊಬೈಲ್ ಸಿಕ್ಕ ಮೇಲೆ ಅವರನ್ನು ಕಾಪಾಡಿಕೊಳ್ಳವುದೇ ದೊಡ್ಡ ಸವಾಲು ಆಗಿದೆ. ಆದ್ದರಿಂದ ಮಕ್ಕಳನ್ನು ಸಾಧ್ಯವಾದಷ್ಟು ಇದರಿಂದ ದೂರ ಇರುವುದು ಉತ್ತಮ. ಅವರಿಗೆ ಅರಿವು ಬಂದ ಮೇಲೆ ಮುಕ್ತವಾಗಿ ಮೊಬೈಲ್ ಬಳಕೆ ನೀಡಬಹುದು. ಅದಕ್ಕೂ ಮೊದಲು ನೀಡುವುದು ಅತ್ಯಂತ ಅಪಾಯಕಾರಿ ಎಂದರು.

ಕೊಪ್ಪಳ ಸಂಸ್ಥೆಯ ಪದಾಧಿಕಾರಿಗಳಾದ ನೀಲಾಂಬಿಕಾ, ಶ್ರೀ ಶಾರದಾ ಸಂಸ್ಥೆಯ ನಿರ್ದೇಶಕ ಕಿರಣ್ ಪಾಟೀಲ್, ಕಾರ್ಯನಿರ್ವಾಹಕ ನಿರ್ದೇಶಕ ಎಲ್. ಶಿವಪ್ರಕಾಶ್, ಕಾರ್ಯನಿರ್ವಹಣಾ ನಿರ್ದೇಶಕ ಡಾ. ವಿಶ್ವನಾಥ ರೆಡ್ಡಿ, ಪ್ರಾಂಶುಪಾಲ ರಘುರಾಮ್ ಹಾಗೂ ಆಡಳಿತಾಧಿಕಾರಿಗಳಾದ ರೇಚಲ್ ಸುಗಂಧಿ ಉಪಸ್ಥಿತರಿದ್ದರು.

ಶಾಲಾ ಸಂಯೋಜಕಿ, ಶಿಕ್ಷಕಿ ಸಲ್ಮಾ ಅವರು ಚುನಾವಣಾ ವರದಿ ಮಂಡಿಸಿದರು.

2024-25ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ವಿದ್ಯಾರ್ಥಿ ಮುಖ್ಯಸ್ಥನಾಗಿ ರೋಚನ್ ಅದೋನಿ, ಶಾಲಾ ವಿದ್ಯಾರ್ಥಿ ಮುಖ್ಯಸ್ಥಳಾಗಿ ಮಾನಸ, ಕ್ರೀಡಾ ನಾಯಕನಾಗಿ ಶ್ರೇಯಸ್, ನಾಯಕಿಯಾಗಿ ಪ್ರಣೀತಾ ಅರಳಿ, ಶಾಲಾ ಶಿಸ್ತು ವಿಭಾಗದ ನಾಯಕನಾಗಿ ಯದುಕೃಷ್ಣ ನಾಯಕಿಯಾಗಿ ಧರಣಿ ಹಾಗೂ ಶಾಲಾ ಸಾಂಸ್ಕೃತಿಕ ವಿಭಾಗದ ನಾಯಕನಾಗಿ ಕುಶಾಲ್ ಹಾಗೂ ಮೇಘನಾ ಕೆ. ಹಾಗೂ ಇತರ ಎಲ್ಲ ಸಂಸತ್ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು.

ಎಲ್ಲ ಸಂಸತ್ ಸದಸ್ಯರಿಗೆ ಆಡಳಿತ ಅಧಿಕಾರಿಗಳಾದ ರೇಚಲ್ ಸುಗಂಧಿ ಪ್ರಮಾಣವಚನ ಬೋಧಿಸಿದರು.

ಶ್ರೀ ಶಾರದಾ ಇಂಟರ್‌ನ್ಯಾಷನಲ್ ಶಾಲೆ, ಶ್ರೀ ಶಾರದಾ ಪಿಯು ಕಾಲೇಜ್ ಹಾಗೂ ಶ್ರೀ ಶಾರದಾ ಚಿಣ್ಣರ ಲೋಕದ ಸಿಬ್ಬಂದಿ ಹಾಗೂ ಬೋಧಕೇತರ ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.