ಸಾರಾಂಶ
ಆತ್ಮಭೂಷಣ್
ಕನ್ನಡಪ್ರಭ ವಾರ್ತೆ ಮಂಗಳೂರುಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಫ್ಲ್ಯಾಟ್‌ಫಾರಂ ಕೊರತೆ ಕೊನೆಗೂ ನೀಗುವ ಹಂತಕ್ಕೆ ಬಂದಿದೆ. ಸುಮಾರು ಮೂರು ದಶಕಗಳ ಬೇಡಿಕೆಯಾದ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ನಾಲ್ಕು ಮತ್ತು ಐದನೇ ಫ್ಲ್ಯಾಟ್‌ಫಾರಂ ಕಾಮಗಾರಿ ಪೂರ್ಣಗೊಂಡು ನವೆಂಬರ್ ಅಂತ್ಯದೊಳಗೆ ಲೋಕಾರ್ಪಣೆಗೆ ಸಿದ್ಧವಾಗುತ್ತಿದೆ. ಇದರೊಂದಿಗೆ ಮಂಗಳೂರು ಸೆಂಟ್ರಲ್ ನಿಲ್ದಾಣ ಇನ್ನಷ್ಟು ರೈಲುಗಳ ವಿಸ್ತರಣೆಗೆ ತೆರೆದುಕೊಳ್ಳಲಿದೆ.
ದಕ್ಷಿಣ, ಕೊಂಕಣ ಹಾಗೂ ನೈಋತ್ಯ ಈ ಮೂರು ರೈಲ್ವೆ ವಿಭಾಗಗಳು ಸೇರುವ ಪ್ರಮುಖ ಸ್ಥಳ ಮಂಗಳೂರು ಸೆಂಟ್ರಲ್ ನಿಲ್ದಾಣ. ಈ ರೈಲು ನಿಲ್ದಾಣ ಸ್ಥಾಪನೆಯಾಗಿ ಶತಮಾನದ ಇತಿಹಾಸ ಕಂಡಿದ್ದು, ಮೂರು ಫ್ಲ್ಯಾಟ್‌ಫಾರಂ ಬಿಟ್ಟರೆ ಹೆಚ್ಚುವರಿ ಫ್ಲ್ಯಾಟ್‌ಫಾರಂ ಇಲ್ಲದೆ ಕೊರತೆಯಾಗಿತ್ತು. ಫ್ಲ್ಯಾಟ್‌ಫಾರಂ ಕೊರತೆಯಿಂದಾಗಿ ಮಂಗಳೂರು ಸೆಂಟ್ರಲ್‌ಗೆ ಹೊಸ ರೈಲುಗಳ ಓಡಾಟ, ಹೆಚ್ಚುವರಿ ರೈಲುಗಳ ವಿಸ್ತರಣೆಗೆ ತೊಡಕು ಉಂಟಾಗಿತ್ತು. ಇದೀಗ ಎರಡು ಹೊಸ ಫ್ಲ್ಯಾಟ್‌ಫಾರಂ ಸಿದ್ಧಗೊಳ್ಳುವುದರಿಂದ ಹೊಸ ರೈಲುಗಳ ವಿಸ್ತರಣೆಗೆ ಅನುಕೂಲವಾಗಲಿದೆ.ದಶಕಗಳ ಬೇಡಿಕೆ:
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಹೆಚ್ಚುವರಿ ಫ್ಲ್ಯಾಟ್‌ಫಾರಂ ಬೇಕು ಎನ್ನುವುದು 30 ವರ್ಷಗಳ ಬೇಡಿಕೆ. ರೈಲುಗಳ ಓಡಾಟ ಜಾಸ್ತಿಯಾದರೂ ಫ್ಲ್ಯಾಟ್‌ಫಾರಂ ಹೆಚ್ಚುವರಿ ಮಾಡಿರಲಿಲ್ಲ. ಇದೇ ಕಾರಣಕ್ಕೆ ಹಲವು ರೈಲುಗಳ ಸಂಚಾರವನ್ನು ಮಂಗಳೂರು ಜಂಕ್ಷನ್‌ಗೆ ಸೀಮಿತಗೊಳಿಸಲಾಗಿದೆ. ಇದು ಪ್ರಯಾಣಿಕರಿಗೆ ಸ್ವಲ್ಪ ಮಟ್ಟಿನ ಅನಾನುಕೂಲಕ್ಕೆ ಕಾರಣವಾಗಿತ್ತು. ಕೊನೆಗೂ ಜನಪ್ರತಿನಿಧಿಗಳು ಹಾಗೂ ರೈಲ್ವೆ ಹೋರಾಟ ಸಂಘಟನೆಗಳ ನಿರಂತರ ಪ್ರಯತ್ನದಿಂದ ಹೆಚ್ಚುವರಿ ಫ್ಲ್ಯಾಟ್‌ಫಾರಂ ರಚನೆಯಾಗಿ ಕಾರ್ಯಾರಂಭದ ಕ್ಷಣ ಗಣನೆಯಲ್ಲಿದೆ.ಮುಖ್ಯ ಹಳಿಗೆ ಸಂಪರ್ಕ ಬಾಕಿ:
ನಾಲ್ಕು ಮತ್ತು ಐದನೇ ಫ್ಲ್ಯಾಟ್‌ಫಾರಂ ಸುಮಾರು 17 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಿದೆ. 2022 ಮಾರ್ಚ್‌ನಲ್ಲಿ ಪೂರ್ಣಗೊಳ್ಳಬೇಕಾದ ಈ ಯೋಜನೆ ಒಂದೂವರೆ ವರ್ಷ ವಿಳಂಬವಾಗಿ ಇದೇ ನವೆಂಬರ್‌ಗೆ ಪೂರ್ಣಗೊಳ್ಳುತ್ತಿದೆ.ಪ್ರಸಕ್ತ ಹಳಿ ಅಳವಡಿಸಿ ಫ್ಲ್ಯಾಟ್‌ಫಾರಂ ಸಿದ್ಧವಾಗಿದೆ, ಆದರೆ ಫ್ಲ್ಯಾಟ್‌ಫಾರಂನ ಶೆಲ್ಟರ್ ಇನ್ನೂ ಬಾಕಿ ಇದೆ. ಫ್ಲ್ಯಾಟ್‌ಫಾರಂನ ಹಳಿಗಳಿಗೆ ನೀರು ಹಾಗೂ ವಿದ್ಯುತ್ ಸಂಪರ್ಕ ಪೂರ್ಣಗೊಂಡಿದೆ. ಫ್ಲ್ಯಾಟ್‌ಫಾರಂ ಹಳಿಯನ್ನು ಮುಖ್ಯ ಹಳಿಗೆ ಸಂಪರ್ಕಿಸುವ ಕೆಲಸ ಬಾಕಿ ಇದೆ. ಇದಕ್ಕೆ ರೈಲ್ವೆ ಸುರಕ್ಷತಾ ಸಮಿತಿ(ಸಿಆರ್‌ಎಫ್) ಅನುಮತಿ ನೀಡಿದ್ದು, ಇನ್ನಷ್ಟೆ ಅಳವಡಿಕೆಯಾಗಬೇಕು. ನವೆಂಬರ್ ಮಧ್ಯಭಾಗದಲ್ಲಿ ಈ ಕಾಮಗಾರಿ ಪೂರ್ತಿಗೊಳ್ಳುವ ನಿರೀಕ್ಷೆ ಇದೆ.
ಹೊಸ ಫ್ಲ್ಯಾಟ್‌ಫಾರಂಗೆ ಶೆಲ್ಟರ್ ವ್ಯವಸ್ಥೆ, ಪಾದಚಾರಿ ಮೇಲ್ಸೇತುವೆ(ಎಫ್‌ಒಬಿ) ಸೌಲಭ್ಯ ಬಾಕಿ ಇದೆ. ಹೊಸ ಫ್ಲ್ಯಾಟ್‌ಫಾರಂ 600 ಮೀಟರ್ ಉದ್ದವಿದ್ದು, 23 ಕೋಚ್‌ನ ರೈಲು ನಿಲ್ಲಲು ಅವಕಾಶವಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.ಸೆಂಟ್ರಲ್‌ಗೆ ರೈಲುಗಳ ವಿಸ್ತರಣೆಗೆ ಅವಕಾಶ
ನಾಲ್ಕು ಹಾಗೂ ಐದು ಫ್ಲ್ಯಾಟ್‌ಫಾರಂ ರಚನೆಯಿಂದಾಗಿ ಮಂಗಳೂರು ಜಂಕ್ಷನ್‌ನಲ್ಲಿ ನಿಲುಗಡೆಯಾಗುವ ರೈಲುಗಳನ್ನು ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಇರುವ ತೊಡಕು ನಿವಾರಣೆಯಾದಂತಾಗಿದೆ.ಮಂಗಳೂರು ಸೆಂಟ್ರಲ್‌ಗೆ ಮಂಜೂರಾಗಿದ್ದ ಮುಂಬೈ ಸಿಎಸ್‌ಟಿ ರೈಲು ಜಂಕ್ಷನ್ ವರೆಗೆ ಮಾತ್ರ ಬಂದು ಹೋಗುತ್ತಿದೆ. ಇದರ ವೇಳೆಯನ್ನು ಬದಲಾಯಿಸಿ ಸೆಂಟ್ರಲ್ ವರೆಗೆ ವಿಸ್ತರಿಸಬೇಕು. ವಿಜಯಪುರ ರೈಲಿನ ವೇಳೆ ಬದಲಾಯಿಸಿ ಅದನ್ನು ಜಂಕ್ಷನ್‌ನಿಂದ ಸೆಂಟ್ರಲ್‌ಗೆ ವಿಸ್ತರಿಸಬೇಕು. ಬೆಂಗಳೂರು-ಮಂಗಳೂರು ನಡುವೆ ಸಂಚರಿಸುವ ಗೊಮಟೇಶ್ವರ ಎಕ್ಸ್‌ಪ್ರೆಸ್ ಹಗಲು ರೈಲನ್ನು ಕೂಡ ಜಂಕ್ಷನ್‌ನಿಂದ ಸೆಂಟ್ರಲ್‌ಗೆ ವಿಸ್ತರಿಸಬೇಕು. ಈ ಎರಡು ಫ್ಲ್ಯಾಟ್‌ಫಾರಂಗಳಲ್ಲಿ ಈ ರೈಲುಗಳಿಗೆ ಅವಕಾಶ ಕಲ್ಪಿಸಬೇಕು ಎಂದು ರೈಲ್ವೆ ಸಂಘಟನೆಗಳು ಇಲಾಖೆಗೆ ಬೇಡಿಕೆ ಸಲ್ಲಿಸಿವೆ.
ಭವಿಷ್ಯದಲ್ಲಿ ಕೊಂಕಣ ಮಾರ್ಗ ಹಾಗೂ ವಯಾ ಹಾಸನ ಮೂಲಕ ಸಂಚರಿಸುವ ರೈಲುಗಳನ್ನು ಕೂಡ ಸೆಂಟ್ರಲ್‌ನ ಈ ಹೆಚ್ಚುವರಿ ಫ್ಲ್ಯಾಟ್‌ಫಾರಂಗೆ ವಿಸ್ತರಿಸಬೇಕು. ಕೇಂದ್ರ ಸರ್ಕಾರ ರೈಲ್ವೆ ಬಜೆಟ್‌ನಲ್ಲಿ ಘೋಷಿಸಿದ ಮಂಗಳೂರು ಸೆಂಟ್ರಲ್-ರಾಮೇಶ್ವರಂ ಹಾಗೂ ಮಂಗಳೂರು ಸೆಂಟ್ರಲ್-ಭಾವನಗರ ನಡುವೆ ಹೊಸ ರೈಲು ಸಂಚಾರ ಆರಂಭಿಸಬೇಕು ಎಂದು ರೈಲ್ವೆ ಸಂಘಟನೆಗಳು ಒತ್ತಾಯಿಸಿವೆ.