ರಾಮನಗರ: ರಾಜ್ಯಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ಭಾಗವಾಗಿ ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರು ಬಿಡದಿಯ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳಿಗೆ ಸಮೀಕ್ಷೆಗೆ ಅಗತ್ಯವಿರುವ ದಾಖಲೆ ಮತ್ತು ಮಾಹಿತಿ ನೀಡಿದರು

ರಾಮನಗರ: ರಾಜ್ಯಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ಭಾಗವಾಗಿ ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರು ಬಿಡದಿಯ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳಿಗೆ ಸಮೀಕ್ಷೆಗೆ ಅಗತ್ಯವಿರುವ ದಾಖಲೆ ಮತ್ತು ಮಾಹಿತಿ ನೀಡಿದರು.

ಸಚಿವರೊಂದಿಗೆ ಅವರ ಧರ್ಮಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ನಿಖಿಲ್ ಅವರ ಧರ್ಮಪತ್ನಿ ರೇವತಿ ನಿಖಿಲ್ ಕೂಡ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ, ಕೇತಗಾನಹಳ್ಳಿಯ ನನ್ನ ತೋಟದ ಮನೆಯಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆಯಲ್ಲಿ (SIR) ಪ್ರಕ್ರಿಯೆಯಲ್ಲಿ ಕುಟುಂಬದೊಂದಿಗೆ ಪಾಲ್ಗೊಂಡು ಬಿಎಲ್‌ಓಗಳಿಗೆ ಅಗತ್ಯ ದಾಖಲೆಗಳನ್ನು ಒದಗಿಸಿ ಮಾಹಿತಿ ನೀಡಲಾಯಿತು. ಈ ಪರಿಷ್ಕರಣೆ ಪಾರದರ್ಶಕವಾಗಿರಬೇಕು ಹಾಗೂ ನೈಜ ಮತದಾರರೆಲ್ಲರೂ ಮತದಾರರ ಪಟ್ಟಿಯಲ್ಲಿ ಉಳಿಯಲೇಬೇಕು ಎಂಬ ಆಶಯದೊಂದಿಗೆ ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದೆ. ನಾಡಿನ ಪ್ರತಿಯೊಬ್ಬರು ಎಸ್‌ಐಆರ್ ಪ್ರಕ್ರಿಯೆಯಲ್ಲಿ ನಿಯಮಾನುಸಾರ ತಪ್ಪದೇ ಪಾಲ್ಗೊಳ್ಳಬೇಕು ಎಂದರು.

ರಾಜ್ಯ ಸರ್ಕಾರದ ವಿರುದ್ಧ ಎಚ್ಡಿಕೆ ವಾಗ್ದಾಳಿ:

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಕ್ರಮ ಮತಗಳನ್ನು ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದೆ. ಕೇಂದ್ರ ಚುನಾವಣಾ ಆಯೋಗದ ನಿಯಮಗಳನ್ನು ಗಾಳಿಗೆ ತೂರಿ ರಾಜ್ಯ ಸರ್ಕಾರ ನೇರವಾಗಿ ಅಕ್ರಮ ಮತಗಳನ್ನು ಉಳಿಸಿಕೊಳ್ಳಲು ಕುಮ್ಮಕ್ಕು ನೀಡುತ್ತಿದೆ. ಅನೇಕ ಜಿಲ್ಲೆಗಳ ಜಿಲ್ಲಾಧಿಕಾರಿಗಳೇ ಎಸ್ಐಆರ್ ದುರ್ಬಳಕೆಯಲ್ಲಿ ಭಾಗಿಯಾಗಿದ್ದಾರೆ. ಈ ಕೂಡಲೇ ಕೇಂದ್ರ ಚುನಾವಣಾ ಆಯೋಗ ಮಧ್ಯಪ್ರವೇಶ ಮಾಡಬೇಕು. ಪಶ್ಚಿಮ ಬಂಗಾಳದಲ್ಲಿ ಮಾಡಿದಂತೆಯೇ ರಾಜ್ಯದಲ್ಲಿಯೂ ಎಸ್ಐಆರ್ ಉಸ್ತುವಾರಿಗೆ ಹೊರ ರಾಜ್ಯದ ಅಧಿಕಾರಿಯನ್ನು ನೇಮಿಸಬೇಕು. ಈವರೆಗೂ ನಡೆಸಿರುವ ಸಮೀಕ್ಷೆಯನ್ನು ರದ್ದುಗೊಳಿಸಿ ಹೊಸದಾಗಿ ಸಮೀಕ್ಷೆ ನಡೆಸಬೇಕು. ಈ ಬಗ್ಗೆ ಕೇಂದ್ರ ಚುನಾವಣಾ ಆಯುಕ್ತರಿಗೆ ಜೆಡಿಎಸ್ ಮತ್ತು ಬಿಜೆಪಿ ನಾಯಕರು ದಾಖಲೆ ಸಮೇತ ದೂರು ನೀಡುತ್ತೇವೆ ಎಂದು ತಿಳಿಸಿದರು.

ಎಸ್ ಐಆರ್ ದುರ್ಬಳಕೆ ಬಗ್ಗೆ ಜಾಣ ಮೌನ ವಹಿಸಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ, ಪ್ರತಿ ವಿಷಯಕ್ಕೂ ಕಾಲು ಕೆರೆದು ಜಗಳಕ್ಕೆ ಬರುವ ಹಾಗೂ ಎಲ್ಲಕ್ಕೂ ಸ್ಟೇಟ್ ಮೆಂಟ್ ಮಾಡುವ ಗೃಹ ಸಚಿವರು ಎಸ್‌ಐಆರ್ ದುರ್ಬಳಕೆ ಬಗ್ಗೆ ಮಾತನಾಡುತ್ತಲೇ ಇಲ್ಲ. ಪ್ರತಿ ವಿಷಯವನ್ನು ಕುಟುಕಿ ಕುಟುಕಿ ನೋಡುವ ಅವರು ಈ ಬಗ್ಗೆ ಬಾಯಿ ಬಿಡುತ್ತಿಲ್ಲ. ನಿರಂತರವಾಗಿ ಅಕ್ರಮಗಳು ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಮೌನವಾಗಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎ.ಮಂಜುನಾಥ್ ಹಾಜರಿದ್ದರು.

ಬಾಕ್ಸ್‌.............

ಬಿಡದಿ ಟೌನ್ ಶಿಪ್ ಹೋರಾಟ ನಿಲ್ಲದು:

ರೈತರ ಮುಂದೆ ಚರ್ಚೆ ಮಾಡೋಣ ಎಂದರೆ ಮುಖ್ಯಮಂತ್ರಿ ಬರಲಿಲ್ಲ. ಆದರೆ ಇನ್ನೊಂದು ಕಡೆ ಟೆಂಟ್ ಹಾಕಿಸಿ ದೊಡ್ಡ ಡ್ರಾಮಾ ನಡೆಸಿದರು ಎಂದು ಕುಮಾರಸ್ವಾಮಿ ದೂರಿದರು. ನೊಂದ ರೈತರ ಪರವಾಗಿ ನಾನು ಕಾನೂನು ಹೋರಾಟ ನಡೆಸುತ್ತೇನೆ. ನನ್ನ ಕೊನೆ ಉಸಿರು ಇರುವ ತನಕ ರೈತರ ಜತೆ ಇರುತ್ತೇನೆ ಎಂದ ಸಚಿವರು, ಉಪನಗರ ಯೋಜನೆ ಭೂಮಿಯನ್ನೇ ಹೊಂದಿರದ ಕೆಲವರು ಅವರ ಟೆಂಟ್ ನಲ್ಲಿ ಕೂತಿದ್ದರು ಎಂದು ಲೇವಡಿ ಮಾಡಿದರು.