ಭಾವೈಕತೆಯ ನಾಡಿನಲ್ಲಿ ಸಮಾಜಗಳನ್ನು ಒಡೆಯುವ ಹುನ್ನಾರ ನಡೆಯುತ್ತಿದೆ ಎಂದು ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್ ಹೇಳಿದರು.

ಶಿಗ್ಗಾಂವಿ: ಭಾವೈಕತೆಯ ನಾಡಿನಲ್ಲಿ ಸಮಾಜಗಳನ್ನು ಒಡೆಯುವ ಹುನ್ನಾರ ನಡೆಯುತ್ತಿದೆ ಎಂದು ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್ ಹೇಳಿದರು.

ಅವರು ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದಲ್ಲಿ ನಡೆದ ಬಸವಣ್ಣ ದೇವರ ಜಾತ್ರಾ ಮಹೋತ್ಸವ ಧರ್ಮಸಭೆಯಲ್ಲಿ ಮಾತನಾಡಿದರು. ಈ ಸಮಾಜದಲ್ಲಿ ನಾವೆಲ್ಲರೂ ಒಂದೇ, ನಾವು ಶಾಶ್ವತವಲ್ಲ, ನಮ್ಮ ಮಕ್ಕಳ ಭವಿಷ್ಯ ಉಜ್ವಲವಾಗುವ ನಿಟ್ಟಿನಲ್ಲಿ ಹಿರೇಬೆಂಡಿಗೇರಿ ಗ್ರಾಮದ ಬಗ್ಗೆ ನನಗೆ ಅಪಾರ ಕಾಳಜಿ ಇದೆ, ಇಲ್ಲಿ ಕೆಪಿಎಸ್‌ಸಿ ಶಾಲೆ ತೆರೆಯಲಾಗುತ್ತಿದೆ. ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಹೇಳಿದರು.

ಶಿರಹಟ್ಟಿ ಫಕೀರೇಶ್ವರ ಮಠದ ಫಕೀರ ಸಿದ್ದರಾಮ ಸ್ವಾಮೀಜಿ ಮಾತನಾಡಿ, ಧರ್ಮ ಪುರುಷರಿಗೆ ಗೌರವ ಸಲ್ಲಿಸಬೇಕು, ಹೃದಯದ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಮೆರೆಸಬೇಕು, ಪುಣ್ಯದ ಗಂಟನ್ನು ಕಟ್ಟಿಕೊಳ್ಳಿ, ಪುಣ್ಯ ಪ್ರಾಪ್ತಿಯಾಗುತ್ತದೆ. ಹಿರೇಬೆಂಡಿಗೇರಿ ಜನತೆ ಈ ಜಾತ್ರೆ ಬಿಡಬೇಡಿ, ನಿರಂತರವಾಗಿ ಮಾಡುತ್ತ ಸಾಗಿ ಎಂದರು.

ಶಿಗ್ಗಾಂವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಮಾತನಾಡಿ, ಜಾತ್ರೆಗಳ ಉದ್ದೇಶ ಆನಂದಮಯ ವಾತಾವರಣ ಸೃಷ್ಟಿಸಿ ಸಂಗಮವಾಗುವ ಪದ್ಧತಿ, ಇಂದಿನ ಜಾತ್ರೆಗಳು ಸಾಂಸ್ಕೃತಿಯನ್ನು ದಿನದಿಂದ ದಿನಕ್ಕೆ ಕಳೆದುಕೊಳ್ಳುತ್ತಿವೆ. ಅದು ಒಳ್ಳೆಯ ಬೆಳವಣಿಗೆಯಲ್ಲ, ಧರ್ಮದ ತಳಹದಿಯ ಮೇಲೆ ಜಾತ್ರೆಗಳಾಗಬೇಕು, ನಮ್ಮ ಸಂಸ್ಕತಿಯನ್ನ ವಿಕೃತಿ ಮಾಡಲು ಹೊರಟಿದ್ದೇವೆ, ಆದ್ದರಿಂದ ಮಕ್ಕಳಿಗೆ ಒಳ್ಳೆಯ ಸಂಸ್ಕೃತಿಯನ್ನು ಕೊಡುವುದು ಅವಶ್ಯವಾಗಿದೆ ಎಂದರು.

ಹಿರೇಬೆಂಡಿಗೇರಿ ವಿಶ್ವಾರಾಧ್ಯ ಸ್ವಾಮೀಜಿಗಳು, ತಿಪ್ಪಯ್ಯಸ್ವಾಮಿ ಬಾಳಿಗಟ್ಟಿಮಠ, ಮೃತ್ಯುಂಜಯ ಒಡೆಯರಮಠ, ಐಟಿಐ ಕಾಲೇಜಿನ ಶಶಿಕಾಂತ ರಾಠೋಡ, ಶಿವಾನಂದ ಮ್ಯಾಗೇರಿ, ಬಾಬರ್ ಬೋವಾಜಿ ಮಾತನಾಡಿದರು.

ಕೆಎಂಎಫ್ ನಿರ್ದೇಶಕ ತಿಪ್ಪಣ್ಣ ಸಾತಣ್ಣವರ ಅಧ್ಯಕ್ಷತೆ ವಹಿಸಿದ್ದರು. ಕೆಸಿಸಿ ಬ್ಯಾಂಕ್ ನಿರ್ದೇಶಕ ಸಂಗಮೇಶ ಕಂಬಾಳಿಮಠ, ಗ್ರಾಪಂ ಅಧ್ಯಕ್ಷೆ ಈರಮ್ಮ ಹಡಪದ, ಕೆಎಂಎಫ್ ನಿರ್ದೇಶಕ ಶಂಕರಗೌಡ ಪಾಟೀಲ, ಅರ್ಜುನ ಹಂಚಿನಮನಿ, ಮಂಜುನಾಥ ಕಾರಡಗಿ, ಎಸ್.ಎಫ್. ಮಣಕಟ್ಟಿ, ಗುಡ್ಡಪ್ಪ ಜಲದಿ, ವೀರೇಶ ಪಾಟೀಲ, ಎಂ.ಎಸ್. ಪಾಟೀಲ, ಚಂದ್ರು ಹೆಬ್ಬಾಳ, ಅಬ್ದುಲ್ ಸಾಬ್ ಕಳಸಗಿರಿ, ಬಸವರಾಜ ನಾಶೀಪುಡಿ, ಹಜರೇಸಾಬ್ ಹರಕುಣಿ ಇದ್ದರು.