ಶತ್ರು ರಾಷ್ಟ್ರ ಪಾಕಿಸ್ತಾನದ ಪರ ಘೋಷಣೆ ಕೂಗುವ ಹೀನ ಕೃತ್ಯ ರಾಜ್ಯದಲ್ಲಿ ಮತ್ತೆ ಮುಂದುವರಿದಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಸೋಮವಾರ ಪಾಕ್‌ ಪರ ಘೋಷಣೆ ಮೊಳಗಿಸಿದ ಬೆನ್ನಲ್ಲೇ ಈಗ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಕಿಡಿಗೇಡಿಗಳು ಪಾಕ್‌ಗೆ ಜೈ ಎಂದಿದ್ದಾರೆ.

ಕನ್ನಡಪ್ರಭ ವಾರ್ತೆ ತರೀಕೆರೆ

ಶತ್ರು ರಾಷ್ಟ್ರ ಪಾಕಿಸ್ತಾನದ ಪರ ಘೋಷಣೆ ಕೂಗುವ ಹೀನ ಕೃತ್ಯ ರಾಜ್ಯದಲ್ಲಿ ಮತ್ತೆ ಮುಂದುವರಿದಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಸೋಮವಾರ ಪಾಕ್‌ ಪರ ಘೋಷಣೆ ಮೊಳಗಿಸಿದ ಬೆನ್ನಲ್ಲೇ ಈಗ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಕಿಡಿಗೇಡಿಗಳು ಪಾಕ್‌ಗೆ ಜೈ ಎಂದಿದ್ದಾರೆ.

ಇದರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕಾಗಮಿಸಿ ಕಿಡಿಗೇಡಿ ಕೃತ್ಯವನ್ನು ಖಂಡಿಸಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದಿದೆ. ಪೊಲೀಸರು ಹಿಂದೂ ಸಂಘಟನೆಗಳ ಮುಖಂಡರ ದೂರು ಆಧರಿಸಿ ಪ್ರಕರಣ ದಾಖಲಿಸಿದ್ದಾರೆ.

ಆಗಿದ್ದೇನು?:

ಈದ್ ಮಿಲಾದ್ ಹಬ್ಬದ ಆಚರಣೆ ಪ್ರಯುಕ್ತ ಬುಧವಾರ ರಾತ್ರಿ ತರೀಕೆರೆ ಪಟ್ಟಣದ ಕೋಡಿಕ್ಯಾಂಪ್‌ನಲ್ಲಿ ಬಂಟಿಂಗ್ಸ್ ಮತ್ತು ಲೈಟಿಂಗ್ಸ್ ಕಟ್ಟಲಾಗುತ್ತಿತ್ತು. ಈ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಪಾಕಿಸ್ತಾನಕ್ಕೆ ಜಿಂದಾಬಾದ್ ಘೋಷಣೆ ಕೂಗಿರುವ ಆರೋಪ ಕೇಳಿ ಬಂದಿದೆ. ಇದರ ವಿಡಿಯೋಗಳು ಗುರುವಾರ ಬೆಳಗ್ಗೆ ವೈರಲ್ ಆಗಿವೆ. ಇದರಿಂದ ಆಕ್ರೋಶಗೊಂಡ ಹಿಂದೂ ಪರ ಸಂಘಟನೆಯ ಮುಖಂಡರು ಕೋಡಿಕ್ಯಾಂಪ್‌ಗೆ ಧಾವಿಸಿದ್ದಾರೆ. ಈ ವೇಳೆ ಎರಡೂ ಗುಂಪುಗಳ ನಡುವೆ ಪರಸ್ಪರ ಘೋಷಣೆ, ಮಾತಿನ ಚಕಮಕಿ ನಡೆದಿದೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಕುರಿತು ಹಿಂದೂ ಪರ ಸಂಘಟನೆಯಿಂದ ನೀಡಿದ ದೂರಿನ ಮೇರೆಗೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ಕುರಿತು ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.