ಸಾರಾಂಶ
ನರಗುಂದ: ದೇಶದಲ್ಲಿ ಸಾಮರಸ್ಯ ನಾಶ ಮಾಡಿದ್ದೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾದರ ಸಾಧನೆ ಎಂದು ತೀವ್ರ ವಾಗ್ದಾಳಿ ಮಾಡಿದ ಮಾಜಿ ಸಚಿವ ಬಿ.ಆರ್. ಯಾವಗಲ್ , ಮೋದಿ ಗ್ಯಾರಂಟಿ ಎಂಬ ಕನ್ನಡಿಯೊಳಗಿನ ಗಂಟಿಗೆ ಮತ್ತೆ ಮಾರುಹೋಗಬೇಡಿ ಎಂದು ಮನವಿ ಮಾಡಿದರು.
ತಾಲೂಕಿನ ಹೊಂಬಳದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ ಭಾರತ. ಆದರೆ ಬಿಜೆಪಿ ನಾಯಕರಿಗೆ ಎಲ್ಲ ಸಮಾಜಗಳು ಸಾಮರಸ್ಯದಿಂದ ಬದುಕುವುದು ಬೇಕಿಲ್ಲ. ಧರ್ಮ-ಧರ್ಮಗಳ ನಡುವೆ ಸಂಘರ್ಷವನ್ನುಂಟು ಮಾಡಿ ಸಮಾಜ ವಿಘಟನೆ ಮಾಡುವುದೇ ಅವರ ಗುರಿ ಎಂದು ಟೀಕಿಸಿದರು.ಕಳೆದ ಹತ್ತು ವರ್ಷಗಳಲ್ಲಿ ಮೋದಿ ಹೇಳಿದ್ದು ಎಲ್ಲವೂ ಸುಳ್ಳಿನ ಕಂತೆ. ಎರಡು ಲಕ್ಷ ಉದ್ಯೋಗ ಸೃಷ್ಟಿ ಮಾಡುತ್ತೇವೆ, ಕೃಷಿ ಆದಾಯ ದ್ವಿಗುಣ ಮಾಡುತ್ತೇವೆ ಎಂದರು. ಆದರೆ ಯಾವುದೇ ಭರವಸೆ ಈಡೇರಲಿಲ್ಲ. ಕೃಷಿ ಆದಾಯ ದ್ವಿಗುಣದ ಮಾತು ಇರಲಿ, ಕೃಷಿ ಉಪಕರಣಗಳ ಬೆಲೆ ಹೆಚ್ಚಳವಾಯಿತು. ರಸಗೊಬ್ಬರದ ಬೆಲೆ ಗಣನೀಯವಾಗಿ ಏರಿಕೆಯಾಯಿತು. ಇದು ಕೇಂದ್ರ ಸರ್ಕಾರಕ್ಕೆ ರೈತರ ಬಗ್ಗೆ ಇರುವ ಕಾಳಜಿ ಎಂದು ಕುಟುಕಿದರು.
ಪಿ.ಎಸ್.ಗದ್ದಿಗೌಡರ್ ಅವರಿಗೆ ಬಾಗಲಕೋಟೆ ಕ್ಷೇತ್ರದ ಮತದಾರರು ಸತತ ನಾಲ್ಕು ಬಾರಿ ಅವಕಾಶ ಕೊಟ್ಟರು. ಜನ ಅಧಿಕಾರ ಕೊಟ್ಟಾಗ ಬಳಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕು. ನಾಲ್ಕು ಬಾರಿ ಅವಕಾಶ ಕೊಟ್ಟರೂ ಕೆಲಸ ಮಾಡದಿದ್ದರೆ ಅವರು ಸಂಸದರಾದಲು ಯೋಗ್ಯರಲ್ಲ ಎಂದು ಭಾವಿಸಬೇಕಾಗುತ್ತದೆ ಎಂದರು.ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಕಾನೂನು ಪದವೀಧರೆಯಾಗಿದ್ದು, ಹಲವು ಭಾಷೆಗಳ ಜ್ಞಾನ ಹೊಂದಿದ್ದಾರೆ. ಇಂತವರನ್ನು ಸಂಸತ್ತಿಗೆ ಆಯ್ಕೆ ಮಾಡಿ ಕಳುಹಿಸಿದರೆ ಅಲ್ಲಿ ನಮ್ಮ ಕ್ಷೇತ್ರದ ಧ್ವನಿಯಾಗಲಿದ್ದಾರೆ ಎಂದರು.
ಮಾಜಿ ಶಾಸಕ ಡಿ.ಆರ್.ಪಾಟೀಲ ಮಾತನಾಡಿ, ರಾಜ್ಯದಲ್ಲಿ ಅಷ್ಟೇ ಅಲ್ಲ, ಇಡೀ ದೇಶದಲ್ಲಿ ಕಾಂಗ್ರೆಸ್ ಮೈತ್ರಿಕೂಟದ ಪರವಾದ ವಾತಾವರಣ ಇದೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗಲಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಸಂಯುಕ್ತಾ ಪಾಟೀಲ ಬಾಗಲಕೋಟೆ ಕ್ಷೇತ್ರವನ್ನು ಪ್ರತಿನಿಧಿಸಲು ನಿಮ್ಮ ಆಶೀರ್ವಾದ ಬೇಕು ಎಂದು ಮನವಿ ಮಾಡಿದರು.ವಿವೇಕ್ ಯಾವಗಲ್, ಪುಷ್ಪಾ ಕೊಣ್ಣೂರು, ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರುಡಿ ಮತ್ತಿತರರು ಮಾತನಾಡಿದರು. ಪ್ರವೀಣ್ ಯಾದವ್, ನೀಲಮ್ಮ ಮತ್ತಿತರರು ವೇದಿಕೆಯಲ್ಲಿದ್ದರು.
ವಿತ್ತ ಸಚಿವರಿಗೆ ಮಾನವೀಯತೆ ಇಲ್ಲ: ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮಾನವೀಯತೆಯೇ ಇಲ್ಲ. ಕರ್ನಾಟಕ ರಾಜ್ಯ ಸತತ ಎರಡು ಬರಗಾಲಕ್ಕೆ ತುತ್ತಾಗಿದೆ. ₹ 35 ಸಾವಿರ ಕೋಟಿ ಹಾನಿಯಾಗಿದ್ದು, ಮೊದಲ ಹಂತವಾಗಿ ₹18 ಸಾವಿರ ಕೋಟಿ ನೆರವು ಬಿಡುಗಡೆ ಮಾಡಿ ಎಂದು ಮನವಿ ಮಾಡಿದರೆ ಗ್ಯಾರಂಟಿ ಯೋಜನೆಗಳಿಗೆ ಬೊಕ್ಕಸ ಬರಿದು ಮಾಡಿಕೊಂಡು ನಮ್ಮ ಬಳಿ ಕೈವೊಡುತ್ತಿದ್ದೀರಿ ಎಂದು ಹೇಳಿದರು.ನೆರವು ಅವರು ನಮಗೆ ನೀಡುವ ಭಿಕ್ಷೆಯಲ್ಲ. ನಮ್ಮ ರಾಜ್ಯದಿಂದ ಸಂಗ್ರಹ ಮಾಡುವ ತೆರಿಗೆಯ ಪಾಲಿನ ಹಣ. ನಮ್ಮ ಹಕ್ಕಿನ ನೆರವು ಕೇಳಿದರೆ ಸ್ಪಂದಿಸಲಿಲ್ಲ ಎಂದರು.
ಬಿಜೆಪಿ ಸಂಕಲ್ಪ ಪತ್ರದ ಹೆಸರಿನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಈ ಪ್ರಣಾಳಿಕೆಯಲ್ಲಿನ ಭರವಸೆಗಳಿಗೂ ಅವರ ನಡೆಗೂ ಸಾಮ್ಯತೆ ಇಲ್ಲ. ಮಹಿಳೆಯರು, ರೈತರು, ಯುವಕರು ಮತ್ತು ಬಡತನದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಕುಸ್ತಿಪಟುಗಳು ಸೇರಿದಂತೆ ದೇಶದ ಹಲವೆಡೆ ಲೈಂಗಿಕ ದೌರ್ಜನ್ಯ ನಡೆದರೂ ಕ್ರಮ ಕೈಗೊಳ್ಳಲಿಲ್ಲ. ರೈತರು ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ ಎಂದು ಹೋರಾಟ ಮಾಡಿದರೆ ಚಳವಳಿ ದಮನ ಮಾಡಿದರು. ಯುವಕರಿಗೆ ಉದ್ಯೋಗ ಸೃಷ್ಟಿ ಮಾತು ದೂರವೇ ಉಳಿಯಿತು ಎಂದು ಟೀಕಿಸಿದರು.ಯಾವಗಲ್ ಹೇಳಿದ ಕತೆ: 2014ರಲ್ಲಿ ಜನ ಸರದಿಯಲ್ಲಿ ನಿಂತು ಬ್ಯಾಂಕಿನಲ್ಲಿ ಅಕೌಂಟ್ ತೆರೆದರು.ಯಾಕೆ ಎಂದು ಕೇಳಿದರೆ ಮೋದಿ ನಮ್ಮ ಖಾತೆಗೆ ₹15 ಲಕ್ಷ ಜಮಾ ಮಾಡುತ್ತಾರೆ ಎಂದು ಹೇಳಿಕೊಂಡರು. ಖಾತೆ ತೆರೆದು ದಿನದ ಬ್ಯಾಂಕಿಗೆ ಹೋಗಿ ಚೆಕ್ ಮಾಡಿದ್ದೇ ಮಾಡಿದ್ದು. ₹15 ಲಕ್ಷ ಮಾತಿರಲಿ, 15 ಪೈಸೆ ಕೂಡ ಜಮಾ ಆಗಲಿಲ್ಲ. ಇದು ನರೇಂದ್ರ ಮೋದಿ ಅವರ ಭರವಸೆ ಎಂದು ಬಿ.ಆರ್. ಯಾವಗಲ್ ಹೇಳಿದರು.