ಭಟ್ಕಳ: ಪಟ್ಟಣದ ಮುರಿನಕಟ್ಟೆಯ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಲಾದ ಮಾರಿ ಹೊರೆ ಇಡುವ ಕಟ್ಟೆಯನ್ನು ಧ್ವಂಸಗೊಳಿಸಿರುವುದನ್ನು ಖಂಡಿಸಿ ಮತ್ತು ಧ್ವಂಸಗೊಳಿಸಿದವರನ್ನು ಬಂಧಿಸಬೇಕೆಂದು ಆಗ್ರಹಿಸಿ ಶುಕ್ರವಾರ ಸಂಜೆ ಹಿಂದೂ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಬಳಿಕ ಸಹಾಯಕ ಆಯುಕ್ತ ಮಹೇಶ ಅವರಿಗೆ ಮನವಿ ಸಲ್ಲಿಸಲಾಯಿತು.

ಚೆನ್ನಪಟ್ಟಣ ಹನುಮಂತ ದೇವಸ್ಥಾನದ ಆವರಣದಿಂದ ಸಾವಿರಾರು ಹಿಂದೂಗಳು ಮೆರವಣಿಗೆಯಲ್ಲಿ ಆಗಮಿಸಿ ಮುರಿನಕಟ್ಟೆ ಧ್ವಂಸದ ವಿರುದ್ಧ ಧಿಕ್ಕಾರ ಕೂಗಿ, ಕೃತ್ಯವನ್ನು ತೀವ್ರವಾಗಿ ಖಂಡಿಸಿದರು. ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಪ್ರಮುಖ ಶ್ರೀಕಾಂತ ಶೆಟ್ಟಿ ಕಾರ್ಕಳ, ಮತಾಂಧ ಮುಸ್ಲಿಮರು ಧ್ವಂಸಗೊಳಿಸಿದ ಮುರಿನಕಟ್ಟೆಯನ್ನು ಪುನಃ ಸ್ಥಾಪಿಸಬೇಕು ಎಂದು ಆಗ್ರಹಿಸಿದರು. ಹಿಂದೂಗಳ ಪ್ರತಿಭಟನೆಗೆ ಸಾವಿರಗಟ್ಟಲೆ ಪೊಲೀಸರನ್ನು ಕರೆಸುವ ಸರ್ಕಾರ ಕಟ್ಟೆ ಧ್ವಂಸ ಮಾಡಿದ ಮತಾಂಧರ ಮೇಲೆ ಯಾವ ಕ್ರಮ ಕೈಗೊಂಡಿದೆ? ಎನ್ನುವುದನ್ನು ಸ್ಪಷ್ಟಪಡಿಸಬೇಕು. ಹಿಂದೂಗಳ ಶ್ರದ್ಧಾ-ಭಕ್ತಿಯ ಕೇಂದ್ರದ ಜತೆಗೆ ಪೊಲೀಸ್ ಅಧಿಕಾರಿಗಳ ಮೇಲೆ ದಾಳಿ ಆಗಿದೆ, ಗಂಟೆಗಳ ಕಾಲ ಹೆದ್ದಾರಿ ಬಂದ್ ಮಾಡಿದ್ದಾರೆ, ಅಂಥವರ ಮೇಲೆ ಯಾವ ಕಠಿಣ ಕ್ರಮವಾಗಿದೆ ಎಂದು ಪ್ರಶ್ನಿಸಿದ ಅವರು, ಭಟ್ಕಳದ ತಂಝೀಂ ಮುಖಂಡರ ಮೇಲೂ ಕ್ರಮ ಆಗಬೇಕು ಎಂದು ಆಗ್ರಹಿಸಿದರು.

ಸಾವಿರಾರು ಮತಾಂಧರು ಬಂದು ನಮ್ಮ ಮುರಿನಕಟ್ಟೆ ಧ್ವಂಸ ಮಾಡಿರುವುದು ಅಕ್ಷಮ್ಯ ಅಪರಾಧ. ನಮ್ಮ ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳು ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆಯಲಿದೆ. ಆಗಲೂ ಬೇಡಿಕೆ ಈಡೇರದಿದ್ದಲ್ಲಿ ಮುಂದೆ ರಾಜ್ಯದಿಂದ ಭಟ್ಕಳ ಚಲೋ ಮಾಡುವುದು ಅನಿವಾರ್ಯ. ನಮ್ಮ ಸಮಾಜದ ಧಾರ್ಮಿಕ ನಂಬಿಕೆಯ ಸ್ಥಳ ಧ್ವಂಸ ಮಾಡಿದವರ ಮೇಲೆ ಕಠಿಣ ಕ್ರಮವಾಗಬೇಕು, ಅವರಿಗೆ ಕುಮ್ಮಕ್ಕು ನೀಡಿದವರ ಮೇಲೂ ಸೂಕ್ತ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದೂ ಅವರು ಆಗ್ರಹಿಸಿದರು.

ಭಟ್ಕಳ ಗಲಭೆಯ ತನಿಖೆ ನಡೆಸಿದ ನ್ಯಾಯಮೂರ್ತಿ ಜಗನ್ನಾಥ ಶೆಟ್ಟಿ ಆಯೋಗದ ವರದಿಯಲ್ಲಿ ಭಟ್ಕಳದಲ್ಲಿ ಪಾಕಿಸ್ತಾನದ ಐಎಸ್‌ಐ ಸಂಪರ್ಕದಲ್ಲಿರುವವರು ಇದ್ದಾರೆ, ಇಂಡಿಯನ್ ಮುಜಾಹಿದ್ದೀನ್‌ ಇಲ್ಲಿಯೇ ಹುಟ್ಟಿಕೊಳ್ಳುತ್ತದೆ ಎಂದು ಹೇಳಿದ್ದಾರೆ ಎಂದರೆ ಕಾನೂನು ಎಲ್ಲಿದೆ ಎಂದು ಪ್ರಶ್ನಿಸಿದ ಅವರು, ಹಿಂದೂ ಸಮಾಜ ೧೯೯೩ರಲ್ಲಿ ನಡೆದ ಅಕ್ರಮಣದಲ್ಲಿ ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಂಡಂತೆ, ನಮ್ಮ ರಕ್ಷಣೆಗೆ ನಾವು ಬದ್ಧರಿದ್ದೇವೆ ಎಂದರು.

ವಿಶ್ವ ಹಿಂದೂ ಪರಿಷತ್‌ನ ಉತ್ತರ ಪ್ರಾಂತ ಪ್ರಮುಖ ಪುಂಡಲೀಕ ದಳವಾಯಿ ಮಾತನಾಡಿ, ನಮ್ಮ ಶ್ರದ್ಧಾ-ಭಕ್ತಿಯ ಮುರಿನಕಟ್ಟೆಯನ್ನು ಮೂರು ಸಾವಿರದಷ್ಟು ಜನರು ಧ್ವಂಸ ಮಾಡಿರುವುದು ಖಂಡನೀಯ. ನಮ್ಮ ಧಾರ್ಮಿಕ ನಂಬಿಕೆಯ ಕ್ಷೇತ್ರವಾದ ಕಟ್ಟೆಯನ್ನು ಕಟ್ಟುವುದು ನಮಗೆ ಯಾವುದೇ ಕಷ್ಟವಲ್ಲ. ಸರ್ಕಾರದಿಂದ ಆಗದಿದ್ದರೆ ರಾಜ್ಯದಿಂದ ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಬಂದು ಕಟ್ಟುವುದಕ್ಕೆ ಶಕ್ತಿ ಹೊಂದಿದ್ದೇವೆ. ಆದರೆ ಭಟ್ಕಳದ ಹಿಂದೂ ಸಂಘಟನೆಗಳು ತಾವೇ ಕಟ್ಟುತ್ತೇವೆ ಎಂದು ಹೇಳಿದ್ದರಿಂದ ನಾವು ಸುಮ್ಮನಾಗಿದ್ದೇವೆ. ನಾವು ಕಾನೂನು ವಿರೋಧಿಸುವವರಲ್ಲ. ಕಾನೂನು ಪಾಲಕರು ಎಂದ ಅವರು, ನಮ್ಮ ಹಿರಿಯರ ಮಾತಿಗೆ ಬೆಲೆಕೊಟ್ಟು ನಾವು ಬರಲಿಲ್ಲ ಎಂದರು.


ನಮ್ಮ ಹಿಂದೂ ಸಮಾಜ ಸಂಪೂರ್ಣ ಶೋಕದಲ್ಲಿರುವಾಗ ಮುಸಲ್ಮಾನರು ಸಾವಿರ ಸಾವಿರ ಸಂಖ್ಯೆಯಲ್ಲಿ ಬಂದು ಮುರಿನಕಟ್ಟೆ ಧ್ವಂಸ ಮಾಡಿರುವುದು ತೀವ್ರ ಖಂಡನೀಯ. ಮುಸಲ್ಮಾನರೇ, ಮುಂದೆಂದೂ ಹಿಂದೂಗಳನ್ನು ಕೆಣಕದಿರಿ, ಹಿಂದೂಗಳಿಗೆ ತೊಂದರೆ ಕೊಟ್ಟರೆ ಹುಷಾರ್ ಎಂದು ಎಚ್ಚರಿಕೆ ಕೊಟ್ಟರು. ಭಟ್ಕಳದ ಜತೆಗೆ ಇಡೀ ರಾಜ್ಯದ ಹಿಂದೂ ಸಮಾಜ ಇದೆ. ಯಾವುದೇ ರೀತಿಯಲ್ಲಿ ತೊಂದರೆಯಾದರೂ ನಾವು ನಿಮ್ಮ ಜತೆಗೆ ನಿಲ್ಲುತ್ತೇವೆ ಎಂದು ಹಿಂದೂ ಸಂಘಟನೆಗಳಿಗೆ ಭರವಸೆ ನೀಡಿದರು.

ತಾಲೂಕು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ರಾಮಕೃಷ್ಣ ನಾಯ್ಕ ಮಾತನಾಡಿ, ನಮ್ಮ ಬೇಡಿಕೆಯನ್ನು ಈಡೇರಿಸಬೇಕು. ತಪ್ಪಿತಸ್ಥರನ್ನು ಬಂಧಿಸಬೇಕು ಎಂದರು.

ಪ್ರತಿಭಟನೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಪ್ರಮುಖ ಸುಬ್ರಹ್ಮಣ್ಯ ಕುಮಟಾ, ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಸುನೀಲ್ ನಾಯ್ಕ, ನಾಮಧಾರಿ ಸಮಾಜದ ಅಧ್ಯಕ್ಷ ಅರುಣ ನಾಯ್ಕ, ಹಿಂದೂ ಜಾಗರಣ ವೇದಿಕೆಯ ಸಂಚಾಲಕ ಜಯಂತ ನಾಯ್ಕ, ಪಶ್ಚಿಮಘಟ್ಟಗಳ ಕಾರ್ಯಪಡೆಯ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಪ್ರಮುಖರಾದ ಶ್ರೀಕಾಂತ ನಾಯ್ಕ, ರಾಜೇಶ ನಾಯ್ಕ, ಈಶ್ವರ ಎನ್. ನಾಯ್ಕ, ಕೃಷ್ಣ ನಾಯ್ಕ ಆಸರಕೇರಿ, ಶ್ರೀನಿವಾಸ ನಾಯ್ಕ, ದಿನೇಶ ನಾಯ್ಕ, ಮಾಸ್ತಪ್ಪ ನಾಯ್ಕ ಬಲ್ಸೆ, ಶೈಲೇಂದ್ರ ಜೈನ್, ಹುರಳಿಸಾಲ ಘಟಕದ ಸುಬ್ರಾಯ ನಾಯ್ಕ ಇದ್ದರು.

ಪಟ್ಟಣದ ಹಿಂದೂ ವ್ಯಾಪಾರಸ್ಥರು ಮಧ್ಯಾಹ್ನ ಆನಂತರ ಅಂಗಡಿ ಬಾಗಿಲುಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ಸೂಚಿಸಿದರು.