ಕನ್ನಡಪ್ರಭ ವಾರ್ತೆ ಬೈಲಹೊಂಗಲ ರಾಷ್ಟ್ರ ಕಟ್ಟುವಲ್ಲಿ ಮಹತ್ವದ ಪಾತ್ರ ವಹಿಸುವ ಸರ್ಕಾರಿ ಶಾಲೆಗಳನ್ನು ಅಭಿವೃದ್ದಿಗೊಳಿಸುವುದೇ ನನ್ನ ಸಂಕಲ್ಪವಾಗಿದ್ದು, ಕ್ಷೇತ್ರದ ಪ್ರತಿಯೊಂದು ಶಾಲೆಗೆ ಮೂಲಭೂತ ಸೌಕರ್ಯ ಒದಗಿಸಲು ಪ್ರಾಮಾಣಿವಾಗಿ ಪ್ರಯತ್ನ ಮಾಡುವೆ ಎಂದು ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ರಾಷ್ಟ್ರ ಕಟ್ಟುವಲ್ಲಿ ಮಹತ್ವದ ಪಾತ್ರ ವಹಿಸುವ ಸರ್ಕಾರಿ ಶಾಲೆಗಳನ್ನು ಅಭಿವೃದ್ದಿಗೊಳಿಸುವುದೇ ನನ್ನ ಸಂಕಲ್ಪವಾಗಿದ್ದು, ಕ್ಷೇತ್ರದ ಪ್ರತಿಯೊಂದು ಶಾಲೆಗೆ ಮೂಲಭೂತ ಸೌಕರ್ಯ ಒದಗಿಸಲು ಪ್ರಾಮಾಣಿವಾಗಿ ಪ್ರಯತ್ನ ಮಾಡುವೆ ಎಂದು ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.ತಾಲೂಕಿನ ಸಂಪಗಾಂವ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ನಂ.4 ರಲ್ಲಿ ವಿಶ್ವ ಮಾನವ ಬಂದುತ್ವ ವೇದಿಕೆ ಹಾಗೂ ಶೈಕ್ಷಣಿಕ ಜಾಗೃತ ವೇದಿಕೆ ಆಶ್ರಯದಲ್ಲಿ ಬುಧವಾರ ನಡೆದ ಶಾಲೆಯ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಳ್ಳಿ ಪ್ರದೇಶದಲ್ಲಿ ಕಲಿಯುತ್ತಿರುವ ಬಡ ವಿದ್ಯಾರ್ಥಿಗಳಿಗೆ ಪ್ರತಿಯೊಬ್ಬರು ಪ್ರೋತ್ಸಾಹ ಕೊಟ್ಟರೆ ವಿಶ್ವ ಮಟ್ಟದಲ್ಲಿ ಅವರು ಬೆಳೆಯಲು ಸಾಧ್ಯ. ಮಕ್ಕಳಿಗೆ ಕೇವಲ ಶಿಕ್ಷಣ ನೀಡಿದರೆ ಸಾಲದು, ಅವರಿಗೆ ಪ್ರಾಥಮಿಕ ಹಂತದಲ್ಲಿಯೇ ಸಾಮಾಜಿಕ ಚಿಂತನೆ, ಸಂಸ್ಕಾರ, ಧಾರ್ಮಿಕ, ಕ್ರೀಡಾ ಮನೋಭಾವನೆ ಬಿತ್ತುವುದು ಇಂದು ಅವಶ್ಯವಾಗಿದೆ ಎಂದರು. ಕಟಾಪೂರಿಮಠದ ಷಟಸ್ಥಲ ಬ್ರಹ್ಮ ಚನ್ನವೀರ ಸ್ವಾಮಿಜಿ, ಮೂರು ಸಾವಿರಮಠದ ಪ್ರಭುನೀಲಕಂಠ ಸ್ವಾಮಿಜಿ ಸಾನಿಧ್ಯ ವಹಿಸಿ ಮಾತನಾಡಿ, ಸರ್ಕಾರಿ ವಿದ್ಯಾ ದೇಗುಲಗಳನ್ನು ಸಮಾಜ ಕಾಪಾಡಿಕೊಂಡು ನಡೆಯಬೇಕು. ಅವುಗಳ ಪ್ರಗತಿಗಾಗಿ ಅಲ್ಲಿ ಕಲಿತ ಹಳೇ ವಿದ್ಯಾರ್ಥಿಗಳ ಸಮೂಹ ಮನಸ್ಸು ಮಾಡಿದರೆ ಪ್ರಸ್ತುತ ವಿದ್ಯಾರ್ಥಿಗಳ ಬಾಳು ಬಂಗಾರವಾಗಲು ಸಾಧ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ನಿರ್ದೇಶಕ ಡಾ.ಮಹಾಂತೇಶ ಶಾಸ್ತ್ರೀ ಆರಾದ್ರಿಮಠ ಸಾನಿಧ್ಯ ವಹಿಸಿದ್ದರು. ವಿಶ್ವ ಮಾನವ ಬಂದುತ್ವ ವೇದಿಕೆಯ ಅಧ್ಯಕ್ಷ ಮಂಜುನಾಥ ಶಿಡ್ಲೆವ್ವಗೋಳ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ತಹಸೀಲ್ದಾರ್‌ ಹನುಮಂತ ಶಿರಹಟ್ಟಿ, ಜಿಪಂ ಮಾಜಿ ಸದಸ್ಯೆ ರೋಹಿಣಿ ಪಾಟೀಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ನಾನಾಸಾಹೇಬ ಪಾಟೀಲ, ಆರ್‌ಇಎಸ್ ಪೌಢಶಾಲೆ ಚೇರಮನ್ ಶಂಕ್ರೆಪ್ಪ ಸಿದ್ನಾಳ, ಗಣ್ಯರಾದ ಡಾ.ಬಿ.ಬಿ.ಪುಟ್ಟಿ, ದುಂಡಪ್ಪ ಒಕ್ಕುಂದ, ಎಸ್.ಜಿ.ಸಿದ್ನಾಳ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಮಹಾದೇವಿ ಕುಡಒಕ್ಕಲಿಗ, ಸಹಾಯಕ ಕಾರ್ಯನಿರ್ವಾಹಕಾಧಿಕಾರಿ ಮಹೇಶ್ ಹೂಲಿ, ಪಿಡಿಒ ವಿಜಯಲಕ್ಷ್ಮಿ ಆನಿಗೋಳ, ಗ್ರಾಪಂ ಮಾಜಿ ಅಧ್ಯಕ್ಷ ಅನಿಲ್ ನೇಸರಗಿ, ಎಸ್‌ಡಿಎಂಸಿ ಅಧ್ಯಕ್ಷ ಹನುಮಂತ ಶಿಡ್ಲೆವ್ವಗೋಳ ಆಗಮಿಸಿದ್ದರು. ಈ ವೇಳೆ ಸಂಪಗಾಂವ ಜಿಪಂ ಕ್ಷೇತ್ರ ವ್ಯಾಪ್ತಿಯ 12 ಗ್ರಾಮಗಳ ತಲಾ ಮೂರು ಜನ ಆದರ್ಶ ರೈತರು, ಸೈನಿಕರು, ಹಾಗೂ ಶಿಕ್ಷಕರನ್ನು ಆಯ್ಕೆ ಮಾಡಿ ಅವರಿಗೆ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಪಗಾಂವ, ಚಿಕ್ಕಬಾಗೇವಾಡಿ, ಹನ್ನಿಕೇರಿ ಕ್ಲಸ್ಟರ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಆದರ್ಶ ಶಿಕ್ಷಕರನ್ನು ಗುರುತಿಸಿ ಅವರಿಗೆ ಅಕ್ಷರ ಮಾತೆ ಸಾವಿತ್ರಿ ಬಾಯಿ ಜೋತಿರಾವ ಪುಲೆ ದಂಪತಿ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮುಖ್ಯೋಪಾಧ್ಯಾಯ ಎಸ್.ಡಿ.ಗಂಗಣ್ಣವರ ಸ್ವಾಗತಿಸಿದರು. ಶಿಕ್ಷಕ ಬಿ.ಎಸ್.ಚಿವಟಗುಂಡಿ, ಶಿಕ್ಷಕ ಶ್ರೀಕಾಂತ ಉಳ್ಳೆಗಡ್ಡಿ ವಂದಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಸವಿನೆನಪಿಗಾಗಿ ನೂತನ ಶಾಲಾ ಕೊಠಡಿ, ದ್ವಾರಬಾಗಿಲು, ಅಡುಗೆ ದಾಸ್ತಾನ ಕೊಠಡಿ ಹಾಗೂ ಮೈದಾನದ ಪೇವರ್ಸ್ ಮತ್ತು ಟೈಲ್ಸ್ ಜೋಡಣೆಯ ಕಾರ್ಯವನ್ನು ಶಾಸಕರು ಇದೇ ಸಂದರ್ಭದಲ್ಲಿ ಉದ್ಗಾಟಿಸಿದರು. ಗ್ರಾಪಂ. ಆಡಳಿತ ಮಂಡಳಿಯ ಮಾಜಿ ಸದಸ್ಯರು, ಗ್ರಾಮದ ಹಿರಿಯರು, ಅಂಗನವಾಡಿ, ಆರೋಗ್ಯ ಇಲಾಖೆಯ ಕಾರ್ಯಕರ್ತರು, ಶಾಲೆಯ ಹಳೇಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.