ಸಾರಾಂಶ
ಸರ್ಕಾರದ ನೆರವನ್ನೂ ಪಡೆಯದೇ ಸ್ವಯಂಪ್ರೇರಿತರಾಗಿ ಸಂಘಟಿತರಾಗಿ ಮುಕ್ತಿಧಾಮ ಅಭಿವೃದ್ಧಿಗೆ ಪಣ ತೊಟ್ಟಿರುವ ಹಿಂದುಳಿದ ಸಮುದಾಯಗಳ ಕಾರ್ಯವನ್ನು ನಾವೆಲ್ಲರೂ ಮೆಚ್ಚಲೇಬೇಕು.
ಕನ್ನಡಪ್ರಭ ವಾರ್ತೆ ಬ್ಯಾಡಗಿ
ಸರ್ಕಾರದ ನೆರವನ್ನೂ ಪಡೆಯದೇ ಸ್ವಯಂಪ್ರೇರಿತರಾಗಿ ಸಂಘಟಿತರಾಗಿ ಮುಕ್ತಿಧಾಮ ಅಭಿವೃದ್ಧಿಗೆ ಪಣ ತೊಟ್ಟಿರುವ ಹಿಂದುಳಿದ ಸಮುದಾಯಗಳ ಕಾರ್ಯವನ್ನು ನಾವೆಲ್ಲರೂ ಮೆಚ್ಚಲೇಬೇಕು. ಸರ್ಕಾರದಿಂದ ಅಗತ್ಯವಿರುವ ಅನುದಾನ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಭರವಸೆ ನೀಡಿದರು.ಪಟ್ಟಣದ ಮಹರ್ಷಿ ವಾಲ್ಮೀಕಿ ಭವನದಲ್ಲಿ ಹಿಂದುಳಿದ ಮತ್ತು ದಲಿತ ವರ್ಗಗಳ ಮುಕ್ತಿಧಾಮ ಅಭಿವೃದ್ಧಿ ಸಮಿತಿ ಉದ್ಘಾಟನೆ ಹಾಗೂ ಸಮಿತಿ ನೂತನ ಪದಾಧಿಕಾರಿಗಳ ಮತ್ತು ಸದಸ್ಯರ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಬಾರಿ ಶಾಸಕನಾಗಿದ್ದಾಗ 40 ಉಪಜಾತಿಗಳಿಗೆ ಇರುವಂತಹ ಏಕೈಕ ಮುಕ್ತಿಧಾಮ ಅಭಿವೃದ್ಧಿಪಡಿಸುವ ವಿಫಲ ಪ್ರಯತ್ನಗಳು ನಡೆದಿದ್ದವು. ಇದೀಗ ಜಾಗೃತಿಗೊಂಡು ಎಲ್ಲರೂ ಸೇರಿ ಸಮಿತಿ ರಚಿಸಿಕೊಂಡಿರುವುದು ಸಂತಸದ ಸಂಗತಿಯಾಗಿದೆ ಎಂದರು.ನೂತನ ಸಮಿತಿಯು ಪಟ್ಟಣದಲ್ಲಿ ಹೊಸ ಮುಕ್ತಿಧಾಮ ನಿರ್ಮಾಣಕ್ಕೆ 10 ಎಕರೆ ಸರ್ಕಾರಿ ಜಮೀನು ಮಂಜೂರು ಹಾಗೂ ಮೊದಲಿದ್ದ ಮುಕ್ತಿಧಾಮದ ಅಭಿವೃದ್ಧಿಗೆ ₹50 ಲಕ್ಷ ಮಂಜೂರು ಮಾಡಲು ವಿನಂತಿಸಿದ್ದು ಅನುದಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ಮುಕ್ತಿಧಾಮದ ಅಭಿವೃದ್ಧಿಗೆ ಕಾಳಜಿ ಶ್ಲಾಘನೀಯ. ಸಮುದಾಯಗಳಲ್ಲಿ ಒಗ್ಗಟ್ಟಿನ ಕೊರತೆಯಿಂದ ಬಹಳಷ್ಟು ವರ್ಷಗಳ ಹಿಂದೆಯೇ ಆಗಬೇಕಾಗಿದ್ದ ಸಮಿತಿ ಇದೀಗ ನಿರ್ಮಾಣವಾಗಿದೆ. ವರ್ತಕರ ಒಪ್ಪಿಗೆ ಮೇರೆಗೆ ಸಮಾರು 4.5 ಎಕರೆ ಜಮೀನು ಪಡೆದು ಜಿಲ್ಲೆಯಲ್ಲಿ ಮಾದರಿ ವೀರಶೈವ ಮುಕ್ತಿಧಾಮ ಮಾಡಿದ್ದೇವೆ. ಅದೇ ರೀತಿ ಹಿಂದುಳಿದ ವರ್ಗಗಳ ಮುಕ್ತಿಧಾಮ ಅಭಿವೃದ್ಧಿಗೆ ಸಹಕರಿಸುವುದಾಗಿ ತಿಳಿಸಿದರು.ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿದರು.
ಚಿಕ್ಕಪ್ಪ ಹಾದಿಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ಕಲಾವತಿ ಬಡಿಗೇರ, ಫಕ್ಕೀರಮ್ಮ ಛಲವಾದಿ, ಸುಭಾಸ ಮಾಳಗಿ, ತಹಶೀಲ್ಧಾರ ರವಿ ಕೊರವರ, ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ, ಮುಖಂಡರಾದ ಎಸ್.ಎನ್. ಯಮನಕ್ಕನವರ, ಹೊನ್ನೂರಪ್ಪ ಕಾಡಸಾಲಿ ಸುರೇಶ ಅಸಾದಿ ಉಪಸ್ಥಿತರಿದ್ದರು. ಶಂಕರ ಕುಸಗೂರ ನಿರೂಪಿಸಿ, ವಿಷ್ಣುಕಾಂತ ಬೆನ್ನೂರ ವಂದಿಸಿದರು.ಮಹಾಮಾತೆಗೆ ಸನ್ಮಾನ:
ಅನಾಥ ಹಾಗೂ ಬಡಕುಟುಂಬದ ಸುಮಾರು 5 ಸಾವಿರ ಶವಗಳಿಗೆ ಅಂತ್ಯಸಂಸ್ಕಾರ ನೆರವೇರಿಸಿದ ಮುಕ್ತಿಧಾಮದ ಮಹಾಮಾತೆ ಎನಿಸಿಕೊಂಡಿರುವ ಆ್ಯಂಬುಲೆನ್ಸ್ ಡ್ರೈವರ್ ರಾಮನಗರದ ಆಶಾ ವೆಂಕಟಸ್ವಾಮಿ ಅವರನ್ನು ಇದೇ ಸಂದರ್ಭದಲ್ಲಿ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.