ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ದೇಶದ ರೈಲ್ವೆ ಸಂಪರ್ಕ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯ ಬಂದು 65 ವರ್ಷಗಳಲ್ಲಿ ಆಗದ ಅಭಿವೃದ್ಧಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೇವಲ 10 ವರ್ಷಗಳಲ್ಲಿ ಮಾಡಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವರ್ಚ್ಯುಯಲ್ ಮೂಲಕ ಉದ್ಘಾಟಿಸಿದ ದೇಶದ 554 ರೈಲ್ವೆ ನಿಲ್ದಾಣಗಳನ್ನು ಮತ್ತು ರಾಜ್ಯದ 15 ಹಾಗೂ ಶಿವಮೊಗ್ಗದ ಸಾಗರ, ತಾಳಗೊಪ್ಪ, ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ, ಶಂಕುಸ್ಥಾಪನೆ ಮತ್ತು ಅರಸಾಳು ರಸ್ತೆ ಮೇಲ್ಸೇತುವೆ ರಾಷ್ಟ್ರ ಸಮರ್ಪಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಿಂದಿನ ವರ್ಷಗಳ ರೈಲ್ವೆ ಕಾಮಗಾರಿಗಳಿಗೆ ಹೋಲಿಸಿದರೆ, ಕಳೆದ 10 ವರ್ಷದಲ್ಲಿ ಶೇ.100ರಷ್ಟು ಹೆಚ್ಚಳವಾಗಿದೆ. 554 ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸುವ ಜೊತೆಗೆ 1500 ಮೇಲ್ಸೇತುವೆ, ಕೆಳಸೇತುವೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡುತ್ತಿರುವ ಐತಿಹಾಸಿಕ ದಿನವಿದು. ಶಿವಮೊಗ್ಗದಲ್ಲಿ 3 ನಿಲ್ದಾಣಗಳು ₹180 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕವಾಗಿ ಅಭಿವೃದ್ಧಿಗೊಳ್ಳುತ್ತಿದೆ. ಪ್ರತಿದಿನ ಶಿವಮೊಗ್ಗದಿಂದ ವಿವಿಧ ಸ್ಥಳಗಳಿಗೆ 15ರಿಂದ 20 ಸಾವಿರ ಜನ ರೈಲ್ವೆ ಸಾರಿಗೆ ಮುಖಾಂತರ ಪ್ರವಾಸ ಮಾಡುತ್ತಿದ್ದಾರೆ ಎಂದರು.ಜಿಲ್ಲೆಯಲ್ಲಿ ಹಿಂದೆ ಕೇವಲ 5 ರೈಲುಗಳಿದ್ದವು. ಈಗ 30 ರೈಲುಗಳಾಗಿವೆ. ಏಪ್ರಿಲ್ ಅಂತ್ಯಕ್ಕೆ ಶಿವಮೊಗ್ಗ, ತಿರುಪತಿ ಹಾಗೂ ಚೆನ್ನೈಗೆ ಮತ್ತೆ ರೈಲ್ವೆ ಸಂಚಾರ ಪ್ರಾರಂಭವಾಗಲಿದೆ. ದೇಶೀಯ ಹೈ ಸ್ಪೀಡ್ ವಂದೇ ಭಾರತ್ ಕೋಚ್‌ಗಳು ತಯಾರಾಗುತ್ತಿವೆ. 65 ವಂದೇ ಭಾರತ ರೈಲುಗಳು ಈಗಾಗಲೇ ದೇಶದಲ್ಲೇ ಓಡುತ್ತಿವೆ. ಶಿವಮೊಗ್ಗದಿಂದಲೂ ಒಂದು ರೈಲು ಶೀಘ್ರದಲ್ಲೇ ಓಡಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. 3 ವರ್ಷದಲ್ಲಿ 400ಕ್ಕೂ ಹೆಚ್ಚು ವಂದೇ ಭಾರತ್ ರೈಲುಗಳು ದೇಶದಲ್ಲಿ ಓಡಲಿದ್ದು, ಮೇಕಿನ್ ಇಂಡಿಯಾ ಮೂಲಕವೇ ಇದರ ನಿರ್ಮಾಣ ಆಗುತ್ತಿದೆ ಎಂದರು.
298 ಕಿ.ಮೀ. ಮೆಟ್ರೋ ಮಾರ್ಗವನ್ನು ವಿಸ್ತಾರಿಸಲಾಗಿದೆ. 9 ವರ್ಷದಲ್ಲಿ 5 ನಗರಗಳ ಜೊತೆಗೆ 15 ನಗರಗಳನ್ನು ಹೆಚ್ಚಿಸಿ ಒಟ್ಟು 20 ನಗರಗಳಲ್ಲಿ 878 ಕಿ.ಮೀ. ಮೆಟ್ರೋ ಜಾಲ ವಿಸ್ತರಣೆಯಾಗಲಿದೆ ಎಂದರು.ಕರ್ನಾಟಕಕ್ಕೆ ಒಟ್ಟು ₹47.336 ಕೋಟಿ ಮೊತ್ತದ ರೈಲ್ವೆ ಯೋಜನೆಗಳು ಅನುಷ್ಠಾನವಾಗಿದ್ದು, ₹7527 ಕೋಟಿ ಮೊನ್ನೆಯ ಬಜೆಟ್‌ನಲ್ಲಿ ನೀಡಲಾಗಿದೆ. ಶಿವಮೊಗ್ಗ, ಶಿಕಾರಿಪುರ, ರಾಣೇಬೆನ್ನೂರು ಮಾರ್ಗವು ಅದರಲ್ಲಿ ಸೇರಿದೆ. ವಿಶ್ವದಲ್ಲೇ ಆಧುನಿಕ ರೈಲು ನಿಲ್ದಾಣಗಳು, ದೇಶದಲ್ಲಿ ಆಗುತ್ತಿದ್ದು, ಕ್ರಾಂತಿಯಾಗಿದೆ ಎಂದು ತಿಳಿಸಿದರು.
2ನೇ ಹಂತದಲ್ಲಿ ಭದ್ರಾವತಿ ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿ ಪಟ್ಟಿಯಲ್ಲಿ ತೆಗೆದುಕೊಳ್ಳಲಾಗುವುದು. ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಹಿರಿಯರಿಗಾಗಿ ಎಕ್ಸಿಲೇಟರ್ ವ್ಯವಸ್ಥೆ ಕೂಡ ಸೇರಿದೆ. ವಿಕಸಿತ ಭಾರತದ ಸಂಕಲ್ಪ ಮೋದಿಯವರ ಗ್ಯಾರಂಟಿಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ರೈಲ್ವೆ ಅಧಿಕಾರಿಗಳಾದ ರಾಜ್‌ಕುಮಾರ್, ವಿನಾಯಕ್ ಆರ್. ನಾಯ್ಕ್, ವಸಂತಕುಮಾರ್, ರೈಲ್ವೆ ಸಮಿತಿಯ ನಾಗರಾಜ್ ಗೋರೆ, ಆರ್.ಮಹೇಶ್, ಮೋಹನ್‌ರಾಜ್ ಜಾಧವ್, ಸಿ.ಮೂರ್ತಿ, ಯಶೋಧ ವೈಷ್ಣವ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಶಂಕರಪ್ಪ, ಆರತಿ ಅ.ಮಾ.ಪ್ರಕಾಶ್, ಮೋಹನ್ ರೆಡ್ಡಿ ಮತ್ತಿತರರು ಇದ್ದರು.
- - - -26ಎಸ್‌ಎಂಜಿಕೆಪಿ05:ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಸೋಮವಾರ ಆಯೋಜಿಸಿದ್ದ ಶಿವಮೊಗ್ಗದ ಸಾಗರ, ತಾಳಗೊಪ್ಪ, ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ, ಶಂಕುಸ್ಥಾಪನೆ ಮತ್ತು ಅರಸಾಳು ರಸ್ತೆ ಮೇಲ್ಸೆತುವೆ ರಾಷ್ಟ್ರ ಸಮರ್ಪಣ ಸಮಾರಂಭವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು.