ಕನ್ನಡಪ್ರಭ ವಾರ್ತೆ ಬೇಲೂರು
ಶ್ರೀ ಚನ್ನಕೇಶವಸ್ವಾಮಿ ರಥೋತ್ಸವಕ್ಕೆ ವಾಡಿಕೆಯಂತೆ ಜಿಲ್ಲಾ ಮಂತ್ರಿ ಸೇರಿದಂತೆ ಸಂಬಂಧಪಟ್ಟವರನ್ನು ಆಹ್ವಾನಿಸಲಾಗಿದ್ದು ತಮ್ಮ ಕಚೇರಿಯಿಂದ ಯಾವುದೇ ರೀತಿ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ ಎಂದು ಹಾಸನ ಜಿಲ್ಲಾಧಿಕಾರಿ ಕೆ. ಎಸ್. ಲತಾಕುಮಾರಿ ಸ್ಪಷ್ಟನೆ ನೀಡಿದರು.ಚನ್ನಕೇಶವಸ್ವಾಮಿ ನಾಡ ರಥೋತ್ಸವಕ್ಕೆ ಆಗಮಿಸಿದ ಬಳಿಕ ಮಾತನಾಡಿದ ಅವರು ಹಾಸನಾಂಬೆ ಜಾತ್ರೆ ರೀತಿಯಲ್ಲಿ ನಾವುಗಳು ಶಿಷ್ಟಾಚಾರದಂತೆ ಜಿಲ್ಲಾ ಮಂತ್ರಿಗಳು ಮತ್ತು ಸರ್ಕಾರದ ಸಂಬಂಧಿಸಿದ ಸಚಿವರನ್ನು ಆಹ್ವಾನಿಸಲಾಗಿದೆ. ಮುಂದಿನ ದಿನದಂದು ಸ್ಥಳೀಯ ಶಾಸಕರ ನೇತೃತ್ವದಲ್ಲಿ ಇನ್ನೂ ಅದ್ಧೂರಿಯಾಗಿ ರಥೋತ್ಸವ ನಡೆಸಲಾಗುತ್ತದೆ. ಈ ಭಾರಿ ತಾಲೂಕು ಆಡಳಿತ ಸ್ಥಳೀಯ ಶಾಸಕರ ಮಾರ್ಗದರ್ಶನ ಪಡೆದು ಬ್ರಹ್ಮರಥೋತ್ಸವ ಮತ್ತು ನಾಡರಥೋತ್ಸವವನ್ನು ಅತ್ಯಂತ ಅದ್ಧೂರಿ ನಡೆಸಿದ ಬಗ್ಗೆ ಸಂತಸ ವ್ಯಕ್ತಪಡಿಸಿದರು.ಮೂಲಭೂತ ಸೌಕರ್ಯಕ್ಕೆ ಒತ್ತು :ಜಾತ್ರೆಗೆ ದೇಶ ವಿದೇಶಗಳಿಂದ ಬರುವ ಭಕ್ತರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಜಿಲ್ಲಾಡಳಿತ ಬದ್ಧವಾಗಿದೆ. ಕಾರಣ ಬ್ರಹ್ಮರಥೋತ್ಸವ ದಿನ ವಿಪರೀತ ಮಳೆಯಿಂದ ಭಕ್ತರ ಪರದಾಟದ ಬಗ್ಗೆ ತಿಳಿದಿರುವೆ ಬಹುತೇಕರು ದೇಗುಲದ ಪ್ರಕಾರದಲ್ಲಿ ವಿಶ್ರಾಂತಿ ಪಡೆದಿದ್ದು ಮುಂದಿನ ದಿನದಂದು ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.
ಬಹುಮಹಡಿ ಕಟ್ಟಡಕ್ಕೆ ಕಡಿವಾಣ : ಬೇಲೂರು ಚನ್ನಕೇಶವಸ್ವಾಮಿ ದೇಗುಲ ಈಗಾಗಲೇ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ದೇಗುಲದ ಸುತ್ತ ನೂರು ಮೀಟರ್ ಸ್ಥಳದಲ್ಲಿ ಯಾವ ಕಾರಣಕ್ಕೂ ಬಹುಮಹಡಿ ಕಟ್ಟಡದ ನಿರ್ಮಿಸಬಾರದು ಎಂಬ ಕಠಿಣ ನಿಯಮಗಳನ್ನು ರೂಪಿಸಿದ್ದು ಸ್ಥಳೀಯ ಆಡಳಿತ ಮತ್ತು ಅಧಿಕಾರಿ ಈ ಬಗ್ಗೆ ಅವಕಾಶ ನೀಡಬಾರದು. ಚನ್ನಕೇಶವಸ್ವಾಮಿ ದೇಗುಲಕ್ಕೆ ಸಂಬಂಧಿಸಿದ ಆಸ್ತಿ ಬಹುತೇಕ ದಶಕಗಳ ಹಿಂದೆ ಒತ್ತುವರಿಯಾಗಿದೆ ಈ ಬಗ್ಗೆ ನಾನು ಮಾಹಿತಿ ಪಡೆದಿದ್ದು ಶೀಘ್ರವೇ ಸರ್ವೆ ನಡೆಸಿ ಹಂತ ಹಂತವಾಗಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವ ಬಗ್ಗೆ ತಿಳಿಸಿದರು.ಹೊಯ್ಸಳ ಮಹೋತ್ಸವಕ್ಕೆ ಆದ್ಯತೆ :ಬೇಲೂರು ಮತ್ತು ಹಳೇಬೀಡಿನಲ್ಲಿ ನಡೆಸಬೇಕಾದ ಹೊಯ್ಸಳ ಮಹೋತ್ಸವ ಸ್ಥಗಿತದ ಬಗ್ಗೆ ಮಾಹಿತಿ ಇದೆ. ಉತ್ಸವ ನಡೆಸಲು ನಾವುಗಳು ಕೂಡ ಉತ್ಸುಕರಾಗಿದ್ದು ಸರ್ಕಾರದಿಂದ ಅನುದಾನಕ್ಕೆ ಪ್ರಸ್ತಾವನೆಯನ್ನು ಮುಂದಿಟ್ಟಿದ್ದು ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು ಮಹೋತ್ಸವಕ್ಕೆ ಮೊದಲು ಕೆಲ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು ಎಂದರು.ಮೂರು ಇಲಾಖೆಗಳ ಸಭೆಚನ್ನಕೇಶವಸ್ವಾಮಿ ದೇಗುಲ ಸದ್ಯ ಮುಜರಾಯಿ, ಪುರಾತತ್ತ್ವ, ಪ್ರವಾಸೋದ್ಯಮ ಇಲಾಖೆಗೆ ಒಳಪಟ್ಟಿದೆ. ಮೂರು ಇಲಾಖೆಯಲ್ಲಿ ಸಮನ್ವಯ ಕೊರತೆಯಿಂದ ಅಭಿವೃದ್ಧಿಗೆ ಅಡ್ಡಿಯಾದ ಕಾರಣದಿಂದ ಶೀಘ್ರವೇ ಬೇಲೂರಿನಲ್ಲಿ ಮೂರು ಇಲಾಖೆ ಅಧಿಕಾರಿಗಳ ಸಭೆ ನಡೆಸಲು ತಾವು ಬದ್ಧವಾಗಿರುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಶ್ರೀಧರ್ ಕಂಕಣವಾಡಿ, ಅಪರ ಪೋಲೀಸ್ ವರಿಷ್ಠಾಧಿಕಾರಿ ಶ್ರೀನಿಧಿ, ಮುಜರಾಯಿ ತಹಸೀಲ್ದಾರ್ ಲತಾ, ದೇಗುಲ ಅಗಮಿಕರಾದ ಶ್ರೀನಿವಾಸ ಭಟ್ಟರ್, ದೇಗುಲ ಇಒ ಯೋಗೀಶ್ ಹಾಜರಿದ್ದರು.