ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಜಿಲ್ಲೆಯಲ್ಲಿ 2023-24ನೇ ಸಾಲಿನಲ್ಲಿ 635 ಕೋಟಿ ರು. ವೆಚ್ಚದಲ್ಲಿ 63 ಲಕ್ಷ ಮಾನವ ದಿನಗಳನ್ನು ಸೃಜಿಸಿ ಶೇ.150 ರಷ್ಟು ಗುರಿ ಮೀರಿ ಸಾಧನೆ ಮಾಡುವ ಮೂಲಕ ನರೇಗಾ ಯೋಜನೆಯ ಅನುಷ್ಟಾನದಲ್ಲಿ ತುಮಕೂರು ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.ಅವರು ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯದಿನಾಚರಣೆಯಂದು ಗೌರವ ರಕ್ಷಣೆ ಸ್ವೀಕರಿಸಿ ಮಾತನಾಡಿದರು.ಜಿಲ್ಲೆಯಲ್ಲಿ ನಿವೇಶನ ರಹಿತರಿಗೆ ಆಶ್ರಯ ಯೋಜನೆಯಡಿ ನಿವೇಶನ ಒದಗಿಸುವ ಸಲುವಾಗಿ ಕಳೆದ 6 ತಿಂಗಳಲ್ಲಿ 530 ಗ್ರಾಮಗಳಿಗೆ ಒಟ್ಟು 1095.05 ಎಕರೆ ಸರ್ಕಾರಿ ಜಮೀನನ್ನು ಮಂಜೂರು ಮಾಡಲಾಗಿದೆ ಎಂದರು. ಗುಬ್ಬಿ ಮತ್ತು ತಿಪಟೂರು ತಾಲೂಕಿನ 131 ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಅಭಿವೃದ್ಧಿಗೆ 35.45 ಕೋಟಿ ರು. ಗಳಿಗೆ ಅನುಮೋದನೆ ನೀಡಲಾಗಿದೆ. ಜಿಲ್ಲಾ ಆಸ್ಪತ್ರೆ ಆವರಣದಲ್ಲಿ 100 ಹಾಸಿಗೆಗಳುಳ್ಳ ಟ್ರಾಮಾ ಕೇಂದ್ರವನ್ನು ಪ್ರಾರಂಭಿಸಲಾಗಿದೆ ಎಂದರು. ಜಿಲ್ಲಾಸ್ಪತ್ರೆ ಆವರಣದಲ್ಲಿ 99 ಕೋಟಿ ರು. ಅಂದಾಜು ವೆಚ್ಚದಲ್ಲಿ 100 ಹಾಸಿಗೆಗಳುಳ್ಳ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಕೈಗೊಂಡಿದ್ದು, ಶೇ. 80ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದರು. ಗೃಹ ಭಾಗ್ಯ ಯೋಜನೆಯಡಿ ಪೌರ ಕಾರ್ಮಿಕರಿಗೋಸ್ಕರ ದಿಬ್ಬೂರು ಗ್ರಾಮದಲ್ಲಿ 389.00 ಲಕ್ಷ ರು. ವೆಚ್ಚದಲ್ಲಿ 52 ಮನೆಗಳನ್ನು ನಿರ್ಮಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ವಿಶ್ವ ದರ್ಜೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ತುಮಕೂರು ತಾಲೂಕು ಬೆಳ್ಳಾವಿ ಹೋಬಳಿ ಪಿ.ಗೊಲ್ಲಹಳ್ಳಿ ಗ್ರಾಮದಲ್ಲಿ 25 ಎಕರೆ ಹಾಗೂ ಸೋರೆಕುಂಟೆ ಗ್ರಾಮದಲ್ಲಿ 16.33 ಎಕರೆ ಒಟ್ಟು 41.33 ಎಕರೆ ಜಮೀನನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಇವರಿಗೆ ಮೀಸಲಿರಿಸಲಾಗಿದ್ದು, ಕ್ರೀಡಾ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಜಿಲ್ಲೆಯಲ್ಲಿ ಮೂಡಿ ಬರಲಿದೆ ಎಂದರು.ಎತ್ತಿನ ಹೊಳೆ ಯೋಜನೆಯ ಮಧುಗಿರಿ ಗುರುತ್ವಾ ಕಾಲುವೆಯಿಂದ ಜಿಲ್ಲೆಯ ಕೊರಟಗೆರೆ ತಾಲೂಕಿನ 68 ಕೆರೆಗಳಿಗೆ ನೀರು ತುಂಬಿಸಲು 285 ಕೋಟಿ ರು. ಹಾಗೂ ಮಧುಗಿರಿ ತಾಲೂಕಿನ 45 ಕೆರೆಗಳಿಗೆ ನೀರು ತುಂಬಿಸಲು 268 ಕೋಟಿ ರು.ಗಳ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಜುಲೈನಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು. ಜಿಲ್ಲೆಯಲ್ಲಿ ತುಮಕೂರು-ರಾಯದುರ್ಗ, ತುಮಕೂರು-ದಾವಣಗೆರೆ ರೈಲ್ವೆ ಯೋಜನೆಗಳ ಅನುಷ್ಟಾನಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.
ತುಮಕೂರು-ರಾಯದುರ್ಗ ರೈಲ್ವೆ ಯೋಜನೆಗಾಗಿ ಜಿಲ್ಲೆಯಲ್ಲಿ 1270 ಎಕರೆ ಜಮೀನು ಭೂಸ್ವಾಧೀನವಾಗಿದ್ದು, 108 ಎಕರೆ ಜಮೀನಿನ ಭೂ ಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ತುಮಕೂರು-ಊರುಕೆರೆ ಹಾಗೂ ದೊಡ್ಡಹಳ್ಳಿ-ಮಡಕಶಿರ ಮಾರ್ಗದಲ್ಲಿ ಈಗಾಗಲೇ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದರು.ತುಮಕೂರು-ದಾವಣಗೆರೆ ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆಯಲ್ಲಿ ಈವರೆಗೆ 770 ಎಕರೆ ಜಮೀನು ಭೂಸ್ವಾಧೀನವಾಗಿದ್ದು, ಕೆಳಸೇತುವೆ ಹಾಗೂ ಮೇಲು ಸೇತುವೆಯ ನಿರ್ಮಾಣಕ್ಕಾಗಿ ೬೧ ಎಕರೆ ಜಮೀನಿನ ಭೂ ಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.