ಸಾರಾಂಶ
ಭಾರಿ ಮಳೆಗೆ ತಗ್ಗು ಪ್ರದೇಶದ ಹೊಲಗಳೆಲ್ಲ ಜಲಾವೃತಗೊಂಡು ಕೆರೆಯಂತಾಗಿವೆ. ಕೆಲವು ಹೊಲಗಳ ಬದುಗಳು ಒಡೆದು ಹೋಗಿದೆ
ಮುಳಗುಂದ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಂಗಳವಾರ ಬೆಳಗ್ಗೆ ೨ ತಾಸಿಗೂ ಅಧಿಕ ಧಾರಾಕಾರ ಮಳೆ ಸುರಿದು ಹಳ್ಳ-ಕೊಳ್ಳಗಳು ತುಂಬಿ ಹರಿದವು.
ಪಟ್ಟಣದ ಶೇರೆಹಳ್ಳವು ತುಂಬಿ ಹರಿದು, ಮಳೆ ನೀರು ಹೊಲಗಳಿಗೆ ನುಗ್ಗಿ, ರಸ್ತೆ ಮೇಲೆ ರಭಸವಾಗಿ ಹರಿದಿದ್ದರಿಂದ ಪಟ್ಟಣದಿಂದ ಗದಗ-ಲಕ್ಷ್ಮೇಶ್ವರ ಮುಖ್ಯರಸ್ತೆಗೆ ಸಂಪರ್ಕಿಸುವ ರಸ್ತೆ ಸಂಪರ್ಕ ಕೆಲಕಾಲ ಕಡಿತಗೊಂಡಿತ್ತು. ವಾಹನ ಸವಾರರು ಪರದಾಡಿದರು. ರಸ್ತೆ ಪಕ್ಕದ ಬಾತಾಖಾನಿ ಅವರ ಪೆಟ್ರೋಲ್ ಬಂಕ್, ಕೆಲವು ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರವನ್ನೇ ಸೃಷ್ಟಿಸಿತು. ಭಾರಿ ಮಳೆಗೆ ತಗ್ಗು ಪ್ರದೇಶದ ಹೊಲಗಳೆಲ್ಲ ಜಲಾವೃತಗೊಂಡು ಕೆರೆಯಂತಾಗಿವೆ. ಕೆಲವು ಹೊಲಗಳ ಬದುಗಳು ಒಡೆದು ಹೋಗಿದೆ. ಕೃಷಿ ಹೊಂಡಗಳು, ಕೆರೆಗಳು ತುಂಬಿವೆ. ಪಟ್ಟಣದ ರಾಜಕಾಲುವೆ ತುಂಬಿ ಹರಿಯಿತು. ಬೆಳಗ್ಗೆ ೨ ತಾಸಿಗೂ ಅಧಿಕ ವಿದ್ಯುತ್ ನಿಲುಗಡೆಯಾಗಿದೆ.ಮುಂಗಾರು ಪೂರ್ವ ಮಳೆ ಅಲ್ಪ ಪ್ರಮಾಣದಲ್ಲಿ ಸುರಿದಿದ್ದರಿಂದ ಕೆಲವು ರೈತರು ಹೆಸರು, ಗೋವಿನ ಜೋಳ, ಬಿಟಿ ಹತ್ತಿ ಬಿತ್ತನೆ ಮಾಡಿದ್ದರು. ದೊಡ್ಡ ಮಳೆ ನಿರೀಕ್ಷೆಯಲ್ಲಿದ್ದರು. ಮಂಗಳವಾರ ಸುರಿದ ಭಾರಿ ಮಳೆ ರೈತರಲ್ಲಿ ಸಂತಸ ಮೂಡಿಸಿತು.
ಬಸಾಪುರ, ಚಿಂಚಲಿ, ಕಲ್ಲೂರ, ನೀಲಗುಂದ, ಹರ್ತಿ, ಕಣವಿ, ಹೊಸೂರು, ಶಿರುಂಜ, ಯಲಿಶಿರುಂಜ, ಸೊರಟೂರ, ನಾಗಾವಿ, ಬೆಳಧಡಿ ಸೇರಿ ಗ್ರಾಮೀಣ ಭಾಗದಲ್ಲಿ ಉತ್ತಮ ಮಳೆಯಾಗಿದೆ.