ಮೂರು ವರ್ಷ ಕಳೆದರೂ ಮುಗಿಯದ ಡಿವೈಡರ್ ರಗಳೆ

| Published : Apr 18 2025, 12:33 AM IST

ಸಾರಾಂಶ

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿದರು.

ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮತ್ತೆ ಮಾರ್ದನಿ । ತೆರವು ಪ್ರದೇಶದಲ್ಲಿನ ರಸ್ತೆ ಸರಿಪಡಿಸಲು ಡಿಸಿ ಸೂಚನೆ ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿತ್ರದುರ್ಗ ನಗರದಲ್ಲಿ ನಿರ್ಮಾಣಗೊಂಡಿರುವ ಅವೈಜ್ಞಾನಿಕ ಡಿವೈಡರ್‌ಗಳ ಕೀಟಲೆ ರಗಳೆಗಳು 3 ವರ್ಷ ಕಳೆದರೂ ಮುಗಿದಂತೆ ಕಾಣಿಸುತ್ತಿಲ್ಲ. ಪ್ರತಿ ಸಲದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಡಿವೈಡರ್‌ಗಳು ನೀಡುತ್ತಿರುವ ಕಿರುಕುಳಗಳು ಪ್ರಸ್ತಾಪಕ್ಕೆ ಬರುತ್ತವೆ. ಜಿಲ್ಲಾಧಿಕಾರಿಗಳು ಸಮಸ್ಯೆ ನಿವಾರಣೆಗೆ ಒಂದಿಷ್ಟು ಖಡಕ್ ಸೂಚನೆ ನೀಡುತ್ತಾರೆ. ಹತ್ತಿ ಹರಳೆ ಕಿವಿಗೆ ಇಟ್ಟುಕೊಂಡು ಬರುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಚಹಾ ಕುಡಿದು, ಬಿಸ್ಕತ್ ತಿಂದು ಎದ್ದು ಹೋಗುತ್ತಾರೆ. ಏನೂ ಕೇಳಿಸಿಕೊಳ್ಳುವುದಿಲ್ಲ, ಮತ್ತೆ ಎಂದಿನಂತೆ ಮುಂದಿನ ಸಭೆಗೆ ಹಾಜರಾಗುತ್ತಾರೆ.

ಗುರುವಾರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಡವಳಿಕೆಗೆ ತೀವ್ರ ಅಸಮಧಾನ ವ್ಯಕ್ತಪಡಿಸಿತು. ಡಿವೈಡರ್ ಗಳಿಂದಾಗಿ ಆಗಿರುವ ಅವಾಂತರಗಳು ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿರುವುದರ ಬಗ್ಗೆ ಬೇಸರಿಸಿತು. ಗಾಂಧಿ ವೃತ್ತದಿಂದ ಕೆಎಸ್‍ಆರ್‌ಟಿಸಿ ಮಾರ್ಗದ ರಸ್ತೆಯಲ್ಲಿ ಡಿವೈಡರ್ ತೆರವುಗೊಳಿಸಿದ ಬಳಿಕ ರಸ್ತೆಯನ್ನು ಸರಿಯಾದ ರೀತಿಯಲ್ಲಿ ದುರಸ್ತಿ ಮಾಡಿಲ್ಲ, ಕಬ್ಬಿಣದ ಸರಳುಗಳು ರಸ್ತೆಯ ಮೇಲೆಯೇ ಕಾಣುತ್ತಿದ್ದು, ಅಪಾಯಕಾರಿಯಾಗಿವೆ. ರಸ್ತೆ ಒಂದು ಕಡೆ ಎತ್ತರ, ಇನ್ನೊಂದೆಡೆ ತಗ್ಗಾಗಿದ್ದು, ವಾಹನ ಚಾಲನೆಗೆ ತೊಂದರೆಯಾಗಿ ಅಪಘಾತವಾಗುವ ಸಂಭವವಿದೆ. ಕೂಡಲೆ ನಗರದಲ್ಲಿ ಎಲ್ಲೇಲ್ಲಿ ಡಿವೈಡರ್‌ಗಳನ್ನು ತೆರವುಗೊಳಿಸಲಾಗಿದೆಯೋ ಅಲ್ಲಿ, ರಸ್ತೆ ಹಾಗೂ ಡಿವೈಡರ್ ಸರಿಪಡಿಸುವ ಕಾರ್ಯ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಹೆದ್ದಾರಿಗಳಲ್ಲಿ ಈ ಹಿಂದೆ ಕಪ್ಪುಚುಕ್ಕೆ ವಲಯಗಳನ್ನು ಗುರುತಿಸಿ, ಅಪಘಾತ ತಡೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅಪಘಾತ ಪ್ರಕರಣಗಳ ಸಂಖ್ಯೆ ಇಳಿಕೆಗೆ ಕೈಗೊಂಡಿರುವ ಕ್ರಮಗಳೇನು? ರಸ್ತೆ ಸುರಕ್ಷತೆಗಾಗಿ ಕ್ರಮ ಕೈಗೊಂಡಿದ್ದಲ್ಲಿ ಅಪಘಾತಗಳ ಸಂಖ್ಯೆ ಇಳಿಕೆಯಾಗಿದೆಯೇ, ಇಲ್ಲವೇ ಎಂಬುವುದರ ಕುರಿತು ವಿಶ್ಲೇಷಣಾ ವರದಿ ಸಲ್ಲಿಸಬೇಕು ಎಂದು ತಿಳಿಸಿದ ಅವರು, ಈಗಾಗಲೇ ಹಂಪ್ಸ್, ರಂಬಲ್ಸ್, ಸೂಚನಾ ಫಲಕಗಳನ್ನು ಹಾಕಿರುವ ಕಡೆ ಅಪಘಾತಗಳ ಸಂಖ್ಯೆ ಇಳಿಕೆ ಆಗಿದೆಯೇ ಎಂಬ ಕುರಿತು ವಿಶ್ಲೇಷಣಾತ್ಮಕ ವರದಿ ನೀಡಬೇಕು ಎಂದು ತಿಳಿಸಿದರು.

ಚಿತ್ರದುರ್ಗ ನಗರದ ಚಳ್ಳಕೆರೆ ಗೇಟ್ ಬಳಿಯ ಬಸ್ ತಂಗುದಾಣ ನಿರ್ಮಾಣಕ್ಕೆ ತಕ್ಷಣ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

ಬಸ್ ತಂಗುದಾಣ ನಿರ್ಮಾಣಕ್ಕೆ ಎನ್‍ಒಸಿ ನೀಡಿ, 6 ತಿಂಗಳಾದರೂ ಕಾಮಗಾರಿ ಪ್ರಾರಂಭ ಮಾಡದಿದ್ದರೆ ಹೇಗೆ? ಎಂದು ಪ್ರಶ್ನಿಸಿದರು. ಚಳ್ಳಕೆರೆ ಗೇಟ್ ಬಳಿ ಹೊಸ ಮಾದರಿಯಲ್ಲಿ ತಂಗುದಾಣ ನಿರ್ಮಿಸಲು ಶಾಸಕರು ಅನುದಾನ ಒದಗಿಸಿದ್ದು, ಕೆಆರ್‌ಐಡಿಎಲ್‍ನಿಂದ ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಕೂಡಲೇ ಕಾಮಗಾರಿ ಆರಂಭಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.

ಚಳ್ಳಕೆರೆ ಗೇಟ್‍ನಲ್ಲಿ ಸಂಚಾರ ದಟ್ಟಣೆ ನಿಯಂತ್ರಣ ಮಾಡಬೇಕಿದೆ. ಚಳ್ಳಕೆರೆ ಗೇಟ್ ಬಳಿಯ ಅಂಡರ್‌ ಪಾಸ್ ಕೆಳಗಡೆ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು, ನಿಲ್ಲಿಸುವವರ ವಿರುದ್ಧ ಕ್ರಮ ಜರುಗಿಸಬೇಕು ಹಾಗೂ ಸುಗಮ ಸಂಚಾರಕ್ಕೆ ಕ್ರಮ ವಹಿಸಬೇಕು. ಈ ಭಾಗದ ನಾಲ್ಕು ಕಡೆಯೂ ಫುಟ್‍ಪಾತ್ ಅತಿಕ್ರಮಣ ತೆರವುಗೊಳಿಸಿ ವಾಹನಗಳ ಪಾರ್ಕಿಂಗ್‍ಗೆ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜೆಎಂಐಟಿ ಬಳಿ ವಿದ್ಯಾರ್ಥಿಗಳು ಹೆದ್ದಾರಿ ಇಕ್ಕೆಲಗಳ ಮೆಶ್‌ನ್ನು ಡ್ಯಾಮೇಜ್ ಮಾಡಿ, ಆ ಮೂಲಕ ರಸ್ತೆ ದಾಟಿ ಓಡಾಡುತ್ತಿದ್ದಾರೆ. ಹಲವು ಬಾರಿ ಇಲ್ಲಿ ಅಪಘಾತಗಳಾಗುತ್ತಿವೆ. ಹಾಗಾಗಿ ಇಲ್ಲಿ ಸ್ಕೈವಾಕ್ ಅಗತ್ಯವಿದ್ದು, ಸ್ಕೈವಾಕ್‍ಗೆ ಅನುಮತಿ ನೀಡಬೇಕು ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚಂದ್ರಪ್ಪ ಸಭೆಗೆ ಮಾಹಿತಿ ನೀಡಿದರು.

ಜೆಎಂಐಟಿ ಬಳಿ ಸ್ಕೈವಾಕ್ ಅಗತ್ಯವಿದ್ದು, ಈ ತಿಂಗಳಲ್ಲಿಯೇ ಟೆಂಡರ್ ಪ್ರಕ್ರಿಯೆ ನಡೆಸಿ, ಕಾಮಗಾರಿ ಪ್ರಾರಂಭ ಮಾಡಬೇಕು ಎಂದು ನಿರ್ದೇಶನ ನೀಡಿದರು.

ಹಿರಿಯೂರು ನಗರದ ಒಳ ಬರುವ ಹಾಗೂ ಹೊರ ಬರುವ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಎಲ್ಲೆಂದರಲ್ಲಿ ಮಾರ್ಗ ಮಧ್ಯದಲ್ಲಿ ಬೃಹತ್ ವಾಹನಗಳು, ಲಾರಿಗಳು ಪಾರ್ಕಿಂಗ್ ಮಾಡುತ್ತಿದ್ದು, ಇದು ಅಪಾಯಕಾರಿ ವಲಯ ಆಗಿ ಮಾರ್ಪಟ್ಟಿದೆ. ಇಲ್ಲಿ ನಿಲ್ಲಿಸುವ ಲಾರಿಗಳಿಗೆ ದಂಡ ವಿಧಿಸಬೇಕು, ಇಲ್ಲಿ ಗೂಡಂಗಡಿಗಳ ಹಾವಳಿ ಹೆಚ್ಚಾಗಿದ್ದು, ಈ ಅಂಗಡಿಗಳು ಇರುವ ಭೂಮಿ ಕೃಷಿಯೇತರಕ್ಕೆ ಪರಿವರ್ತನೆ ಆಗಿಲ್ಲ. ಇಲ್ಲಿನ ಎಲ್ಲ ಅಂಗಡಿಗಳು ಅನಧಿಕೃತವಾಗಿದ್ದು, ನೋಟಿಸ್ ನೀಡಿ ಕೂಡಲೆ ತೆರವುಗೊಳಿಸಬೇಕು, ಹಾಗೂ ಇಲ್ಲಿನ ಅಂಗಡಿಗಳಿಗೆ ವಿದ್ಯುತ್ ಸಂಪರ್ಕವನ್ನು ತ್ವರಿತವಾಗಿ ಕಡಿತಗೊಳಿಸಬೇಕು ಎಂದು ಹಿರಿಯೂರು ಪೌರಾಯುಕ್ತ ವಾಸೀಂ ಅವರಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.

ಟ್ರಕ್ ಟರ್ಮಿನಲ್‍ಗೆ ಈಗಾಗಲೇ 2 ಕಡೆಗಳಲ್ಲಿ ಜಾಗ ಗುರುತಿಸಲಾಗಿದೆ. 15 ದಿನಗಳೊಳಗಾಗಿ ಹಿರಿಯೂರು ನಗರ ವ್ಯಾಪ್ತಿಯಲ್ಲಿ ಸಂಚಾರಿ ಸೂಚನಾ ಫಲಕಗಳನ್ನು ಅಳವಡಿಸಲು ಕ್ರಮವಹಿಸಲಾಗುವುದು ಎಂದು ಹಿರಿಯೂರು ನಗರಸಭೆ ಪೌರಾಯುಕ್ತ ವಾಸೀಂ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ.ಕಾಳೇಸಿಂಘೆ ಸೇರಿದಂತೆ ರಾಷ್ಟ್ರೀಯ ಪ್ರಾಧಿಕಾರದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.