ಬಿಸಿಲಿನ ತಾಪಕ್ಕೆ ಗುಮ್ಮಟ ನಗರಿ ಶಾಕ್‌!

| Published : Feb 21 2025, 11:46 PM IST

ಸಾರಾಂಶ

ಒಂದೆಡೆ ಗುಂಡಿನ ಸದ್ದು, ಮತ್ತೊಂದೆಡೆ ಕಳ್ಳರ ಕಾಟ. ಇನ್ನೊಂದೆಡೆ ಈ ಬಿಸಿಗಾಳಿಯ ಧಗೆಯಿಂದ ಗುಮ್ಮಟ ನಗರಿ ಜನತೆ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಒಂದೆಡೆ ಗುಂಡಿನ ಸದ್ದು, ಮತ್ತೊಂದೆಡೆ ಕಳ್ಳರ ಕಾಟ. ಇನ್ನೊಂದೆಡೆ ಈ ಬಿಸಿಗಾಳಿಯ ಧಗೆಯಿಂದ ಗುಮ್ಮಟ ನಗರಿ ಜನತೆ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ವರ್ಷದಿಂದ ವರ್ಷಕ್ಕೆ ತಾಪಮಾನ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಈ ಬಾರಿ ಕಳೆದ ನಾಲ್ಕು ದಿನಗಳಿಂದ ಆರಂಭವಾಗಿರುವ ಮಿತಿಮೀರಿದ ಬಿಸಿಲಿನಿಂದಾಗಿ ಜಿಲ್ಲೆಯ ಜನರು ಶಾಕ್‌ಗೆ ಒಳಗಾಗಿದ್ದಾರೆ. ಅವಧಿಗೂ ಮುನ್ನವೇ ಇಷ್ಟೊಂದು ಬಿಸಿಲು ತಲೆ ಸುಡುತ್ತಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ತಾಪಮಾನ ಏರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬಿಸಿಲಿನ ರಕ್ಷಣೆಗೆ ನಾನಾ ಕಸರತ್ತು:

ವಿಜಯಪುರ, ರಾಯಚೂರು, ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಬೇಸಿಗೆಗೂ ಮುನ್ನವೇ ಹೆಚ್ಚಿನ ಪ್ರಮಾಣದಲ್ಲಿ ಬಿಸಿಲಿನ ತಾಪಮಾನ (ಉಷ್ಣಾಂಶ) ಆಗಮಿಸಿದೆ. ಬೆಳಗ್ಗೆ 8ಕ್ಕೆ ಶುರುವಾಗುವ ಬಿಸಿಲು ಸಂಜೆ 6 ಗಂಟೆಯಾದರೂ ಮೈ ಸುಡುತ್ತಿದೆ. ಹೀಗಾಗಿ ಬಿಸಿಲಿನಿಂದ ಪಾರಾಗಲು ಮಧ್ಯಾಹ್ನದ ವೇಳೆ ಶ್ರೀಮಂತರು ಎಸಿ, ಕೂಲರ್‌ಗಳ ಮೊರೆ ಹೋದರೆ ಬಡವರು, ಮಧ್ಯಮ ವರ್ಗದವರು ಉದ್ಯಾನವನ ಮೊರೆ ಹೋಗಿದ್ದಾರೆ. ಇನ್ನೊಂದೆಡೆ ತಂಪು ಪಾನೀಯಗಳು, ಕಲ್ಲಂಗಡಿ ಹಣ್ಣಿನ ಸೇವನೆಗೆ ಮುಂದಾಗಿದ್ದಾರೆ.

ಎರಡು ದಿನದಲ್ಲಿ ಹೆಚ್ಚಾದ ಉಷ್ಣಾಂಶ:

ರಾಜ್ಯ ಹವಾಮಾನ ಇಲಾಖೆಯಿಂದ ಬಿಡುಗಡೆಯಾದ ಗರಿಷ್ಟ ಉಷ್ಣಾಂಶ ಮಾಹಿತಿ ಎಲ್ಲರಿಗೂ ಶಾಕ್ ನೀಡಿದೆ. ಫೆ.19ರಂದು ಜಿಲ್ಲೆಯ ಚಡಚಣ ಹೋಬಳಿಯಲ್ಲಿ 39.1 ಡಿ. ಉಷ್ಣಾಂಶ ದಾಖಲಾಗಿದೆ. ರಾಯಚೂರು ಜಿಲ್ಲೆಯ ಕಲ್ಲೂರ ಹೋಬಳಿಯಲ್ಲಿ 39.8 ಡಿಗ್ರಿ, ಹಡಗನಹಾಳ ಹಾಗೂ ಹುಡಾ ಹೋಬಳಿಗಳಲ್ಲಿ 39 ಡಿಗ್ರಿ ಹಾಗೂ ಗುರಗುಂಟಾ ಹೋಬಳಿಯಲ್ಲಿ 39.4 ಡಿಗ್ರಿ ತಾಪಮಾನ ದಾಖಲಾಗಿದೆ.

ಫೆ.20ರಂದು ಕಲಬುರಗಿ ಜಿಲ್ಲೆಯ ಇಜೇರಿ ಹೋಬಳಿಯಲ್ಲಿ 39.7 ಡಿಗ್ರಿ, ಕೊಡ್ಲಿ ಹೋಬಳಿಯಲ್ಲಿ 39 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ರಾಯಚೂರು ಜಿಲ್ಲೆಯ ಕಲ್ಲೂರ ಹೋಬಳಿಯಲ್ಲಿ 39.4 ಡಿಗ್ರಿ ತಾಪಮಾನ ದಾಖಲಾಗಿದೆ.

ಫೆಬ್ರುವರಿ ಕೊನೆಯಲ್ಲಿ ಏರಲಿದೆ ತಾಪಮಾನ:

ಹವಾಮಾನ ಇಲಾಖೆಯ ರಾಜ್ಯ ದೈನಂದಿನ ಹವಾಮಾನ ವರದಿ ಪ್ರಕಾರ ಮುಂದಿನ ಐದು ದಿನಗಳು ಗರಿಷ್ಠ ಉಷ್ಣಾಂಶ ಒಂದೇ ತರನಾಗಿದ್ದು, ಹೆಚ್ಚಿನ ವ್ಯತ್ಯಾಸವಾಗುವುದಿಲ್ಲ. ಆದರೆ ಪ್ರತಿವರ್ಷ ಮಾರ್ಚ್‌ನಲ್ಲಿ ಆವರಿಸುವಷ್ಟು ಬಿಸಿಲು ಈ ಬಾರಿ ಫೆಬ್ರುವರಿ ಕೊನೆಯಲ್ಲಿಯೇ ವಕ್ಕರಿಸಲಿದೆ. ಹೀಗಾಗಿ ಉತ್ತರ ಕರ್ನಾಟಕದ ಜಿಲ್ಲೆಗಳ ಜನರು ಆದಷ್ಟು ಎಚ್ಚರಿಕೆ ವಹಿಸಬೇಕಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಸರಾಸರಿ ತಾಪಮಾನ?:

ಗದಗ, ಕಲಬುರ್ಗಿ, ಕೊಪ್ಪಳ ಮತ್ತು ರಾಯಚೂರಿನಲ್ಲಿ 36-38 ಡಿಗ್ರಿ, ಬೆಂಗಳೂರು ಮತ್ತು ಚಿಕ್ಕಮಗಳೂರು ಮತ್ತು ಚಿಕ್ಕಮಗಳೂರು, 34-36 ಡಿಗ್ರಿ ಗರಿಷ್ಟ ತಾಪಮಾನವಿದೆ.ಕರಾವಳಿ ಕರ್ನಾಟಕ 33-35 ಡಿಗ್ರಿ, ಬೆಳಗಾವಿ, ಬೀದರ್‌, ವಿಜಯಪುರ, ಬಾಗಲಕೋಟೆ, ಧಾರವಾಡ ಮತ್ತು ಹಾವೇರಿಯಲ್ಲಿ 33-35 ಡಿಗ್ರಿ ತಾಪಮಾನವಿದೆ.

ಬಿಸಿಲಿನ ರಕ್ಷಣೆಗೆ ಸಲಹೆಗಳು

ಕಳೆದ ಮೂರ್ನಾಲ್ಕು ದಿನಗಳಲ್ಲಿ ಬಿಸಿಗಾಳಿ ಬೀಸುತ್ತಿದ್ದು, ಅಧಿಕ ಉಷ್ಣಾಂಶ ದಾಖಲಾಗಿದೆ. ಈ ಹಿನ್ನೆಲೆ ಸನ್‌ಸ್ಟ್ರೋಕ್‌ನಿಂದ ಪಾರಾಗಲು ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ಮೇಲ್ವಿಚಾರಣೆ ಕೇಂದ್ರದಿಂದ ಕೆಲವು ಸಲಹೆ ನೀಡಲಾಗಿದೆ. ಮುಖ್ಯವಾಗಿ ನೇರವಾಗಿ ಸೂರ್ಯನ ಶಾಖ ಮನೆಯೊಳಗೆ ಬೀಳದಂತೆ ಕಿಟಕಿಗಳನ್ನು ಕವರ್ ಮಾಡಬೇಕು. ಬಿಸಿಗಾಳಿಯ ಸಮಯದಲ್ಲಿ ಮನೆಯೊಳಗೆ ಇರುವುದು. ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದು. ಅನಿವಾರ್ಯವಾಗಿ ಹೊರಗೆ ಹೊಗಬೇಕಾದಾಗ ಛತ್ರಿ (ಕೊಡೆ) ಬಳಸಬೇಕು. ಮಕ್ಕಳು, ವಯಸ್ಸಾದವರನ್ನು ಬಿಸಿಲಿಗೆ ಹೋಗದಂತೆ ನೋಡಿಕೊಳ್ಳಬೇಕು. ತುರ್ತು ಚಿಕಿತ್ಸೆಗಾಗಿ ಪ್ರಾಥಮಿಕ ಚಿಕಿತ್ಸೆಯ ಕಿಟ್‌ಗಳನ್ನು ಮನೆಯಲ್ಲಿ ಇಡಬೇಕು.

ದಿನೇದಿನೇ ಬಿಸಿಲು ಹೆಚ್ಚಾಗುತ್ತಿರುವುದರಿಂದ ವೃದ್ಧರು, ಮಕ್ಕಳು ಹೆಚ್ಚಿನ ಜಾಗೃತಿ ವಹಿಸಬೇಕಿದೆ. ಈಗಾಗಲೇ ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ಮೇಲ್ವಿಚಾರಣೆ ಕೇಂದ್ರ ಹಾಗೂ ಹವಾಮಾನ ಇಲಾಖೆಗಳಿಂದ ಎಚ್ಚರಿಕೆಗಳು ಬರುತ್ತಲಿವೆ. ಜಿಲ್ಲೆಯ ಜನರು ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ಹೊರಗೆ ಬಾರದೆ ಬೆಳಗ್ಗೆ ಹಾಗೂ ಸಾಯಂಕಾಲ ಮಾತ್ರ ತಮ್ಮ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡಬೇಕಿದೆ. ತೀರ ಅನಿವಾರ್ಯವಿದ್ದಾಗ ಮಾತ್ರ ಮುಂಜಾಗ್ರತಾ ಕ್ರಮಗಳೊಂದಿಗೆ ಮಧ್ಯಾಹ್ನ ಹೊರಗೆ ಬರಬೇಕು.

ಟಿ.ಭೂಬಾಲನ್, ವಿಜಯಪುರ ಜಿಲ್ಲಾಧಿಕಾರಿ