ಸಾರಾಂಶ
ಧಾರವಾಡ:
ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಬಗ್ಗೆ ಕಲಬುರ್ಗಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ಪ್ರಸ್ತಾಪ ಮಾಡದಿರುವುದಕ್ಕೆ ಧಾರವಾಡ ಜನತೆ ಕಳವಳ ವ್ಯಕ್ತಪಡಿಸಿದೆ.ಸಂಪುಟ ಸಭೆಯ ತೀರ್ಮಾನ ಕೇವಲ ಬೀದರ ಮತ್ತು ರಾಯಚೂರು ನಗರಗಳಿಗೆ ಮಾತ್ರ ಪ್ರತ್ಯೇಕ ಮಹಾನಗರ ಪಾಲಿಕೆ ಪ್ರಸ್ತಾವನೆಗೆ ಅಸ್ತು ಎಂದಿರುವುದು ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆ ಪದಾಧಿಕಾರಿಗಳಿಗೆ ಬೇಸರ ಮೂಡಿಸಿದೆ.
ಕಳೆದ ವರ್ಷವೇ ಬೆಳಗಾವಿಯಲ್ಲಿ ನಡೆದ ವಿಧಾನಸಭೆಯ ಅಧಿವೇಶನದಲ್ಲಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಪ್ರಸ್ತಾವನೆಯನ್ನು ಸರ್ಕಾರ ಒಪ್ಪಿಕೊಂಡಿದೆ ಎಂದು ಸಚಿವ ಭೈರತಿ ಸುರೇಶ ಹೇಳಿದ್ದರು. ಇದಾದ ನಂತರ ಈ ವಿಷಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಕಾನೂನು ಖಾತೆ ಸಚಿವ ಎಚ್.ಕೆ. ಪಾಟೀಲ ಅವರನ್ನು ಭೇಟಿಯಾಗಿ, ಮುಂದಿನ ಕ್ರಮಗಳ ಬಗ್ಗೆ ಶೀಘ್ರ ಆದೇಶ ನೀಡಬೇಕೆಂದು ಸಹ ಮನವಿ ಮಾಡಲಾಗಿತ್ತು. ಇದಲ್ಲದೇ ಶಾಸಕ ಅರವಿಂದ ಬೆಲ್ಲದ ಅವರನ್ನು ಭೇಟಿ ಮಾಡಿ, ಮುಂದಿನ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಒತ್ತಡ ಹೇರುವುದು ಹಾಗೂ ಶಾಸಕ ವಿನಯ ಕುಲಕರ್ಣಿಗೆ ಸಹ ಮನವಿ ಮಾಡಲಾಗಿತ್ತು. ಇಷ್ಟೆಲ್ಲ ವಿನಂತಿಗಳಿದ್ದರೂ ರಾಜ್ಯ ಸರ್ಕಾರ ಹಾಗೂ ಈ ಭಾಗದ ಜನಪ್ರತಿನಿಧಿಗಳ ಗಮನಕ್ಕೆ ತಂದಾಗಲೂ ಉದಾಸೀನ ಮನೋವೃತ್ತಿ ತೋರಿದ್ದು ಸರಿಯಾದ ಕ್ರಮವಲ್ಲ ಎಂದು ಧಾರವಾಡದಲ್ಲಿ ನಡೆದ ಸಭೆಯಲ್ಲಿ ಹೋರಾಟಗಾರರು ಬೇಸರ ವ್ಯಕ್ತಪಡಿಸಿದರು.ವೇದಿಕೆ ಅಧ್ಯಕ್ಷ ಮನೋಜ ಪಾಟೀಲ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷ ಬಿ.ಎನ್. ಪೂಜಾರಿ, ಎಂ.ಬಿ. ಕಟ್ಟಿ, ಕಾರ್ಯದರ್ಶಿ ಜಿ.ಎಸ್. ಬ್ಯಾಡಗಿ, ಖಜಾಂಚಿ ಚೆನ್ನಬಸವಪ್ಪ ಕರಡೆಣ್ಣನವರ, ಸಂಘಟನಾ ಕಾರ್ಯದರ್ಶಿ ಎ.ಎಂ. ಖಾನ್ ಇದ್ದರು.ಬೆಲ್ಲದ ಹೋರಾಟದ ಎಚ್ಚರಿಕೆ:ಕಲ್ಯಾಣ ಕರ್ನಾಟಕ ಭಾಗದ ಬೀದರ ಹಾಗೂ ರಾಯಚೂರಿಗೆ ಪ್ರತ್ಯೇಕ ಮಹಾನಗರ ಪಾಲಿಕೆ ನೀಡಿದ್ದು, ಧಾರವಾಡಕ್ಕೆ ನೀಡದೇ ಇರುವುದು ಗಮನಿಸಿದರೆ, ಮೇಲಿಂದ ಮೇಲೆ ಉತ್ತರ ಕರ್ನಾಟಕ ಭಾಗದ ಧಾರವಾಡಕ್ಕೆ ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚುತ್ತಿರುವುದು ಎದ್ದು ಕಾಣುತ್ತಿದೆ. ಮೇಲಾಗಿ ಸ್ಥಳೀಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಕಾಂಗ್ರೆಸ್ ಶಾಸಕರು ಇದರ ಬಗ್ಗೆ ಗಮನ ಹರಿಸದೇ, ನಿರ್ಲಕ್ಷ್ಯ ಮಾಡುತ್ತಾ ಬಂದಿದ್ದಾರೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದ್ದಾರೆ. ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಗೆ ಬೇಕಾದ ಎಲ್ಲ ರೂಪುರೇಷ ಸಿದ್ಧಪಡಿಸಿ ಹಲವು ಬಾರಿ ಪತ್ರ ಮುಖಾಂತರ ಆಗ್ರಹಿಸಿದರೂ ಸದನದಲ್ಲಿ ಧ್ವನಿ ಎತ್ತಿದರೂ ಇದುವರೆಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸಿಲ್ಲ. ಇದೇ ರೀತಿ ಮುಂದುವರಿದಲ್ಲಿ ಮುಂಬರುವ ದಿನಗಳಲ್ಲಿ ಬೃಹತ್ ಮಟ್ಟದಲ್ಲಿ ಧಾರವಾಡದಲ್ಲಿ ಹೋರಾಟ ಮಾಡುವುದು ನಿಶ್ಚಿತ ಎಂದು ಬೆಲ್ಲದ ಪತ್ರಿಕಾ ಪ್ರಕಟಣೆ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.