ಸಾರಾಂಶ
ಖ್ಯಾತ ಇತಿಹಾಸಕಾರ ದಿ.ಎ.ಕೆ.ಶಾಸ್ತ್ರಿ ಹಾಗೂ ಲಕ್ಷೀಶ ಹೆಗಡೆ ಸೋಂದಾ ಅಭಿಪ್ರಾಯದಲ್ಲಿ ಶ್ರೀಕದಂಬೇಶ್ವರ ದೇವಸ್ಥಾನವು ಸುಮಾರು ೧೪೦೦ ವರ್ಷಗಳ ಇತಿಹಾಸ ಹೊಂದಿದೆ.
ಶಿರಸಿ: ಒಂದಲ್ಲ, ಎರಡಲ್ಲ.., ಬರೋಬ್ಬರಿ ಕಳೆದೆರಡು ತಿಂಗಳುಗಳಿಂದ ಈ ಗ್ರಾಮದೆಲ್ಲೆಡೆ ಹಬ್ಬದ ವಾತಾವರಣ ಸೃಷ್ಟಿಯಾಗಿದೆ..! ಗ್ರಾಮಸ್ಥರ ಮೂರು ತಲೆಮಾರಿನ ಕನಸು ಇದೀಗ ಸಾಕಾರಗೊಳ್ಳುತ್ತಿದೆ. ಹೌದು.., ಶಿರಸಿ ತಾಲೂಕಿನ ಕಡಬಾಳ ಗ್ರಾಮದ ಪ್ರಸ್ತುತ ಚಿತ್ರಣವಿದು.
ಕಡಬಾಳದ ಶ್ರೀ ಕದಂಬೇಶ್ವರ ದೇವರ ನೂತನ ದೇವಾಲಯ ಸಮರ್ಪಣೆ ಹಾಗೂ ಅಷ್ಟಬಂಧ ಮಹೋತ್ಸವ ಕಾರ್ಯಕ್ರಮ ಇಂದಿನಿಂದ (ಮೇ.೭ರಿಂದ) ನಾಲ್ಕು ದಿನಗಳ ಕಾಲ ನಡೆಯಲಿದೆ. ಬನವಾಸಿ ಮಧುಕೇಶ್ವರ ದೇವರ ಪ್ರತಿಬಿಂಬದಂತೆ ಇರುವ ಜಿಲ್ಲೆಯ ಎರಡನೇ ಅತಿದೊಡ್ಡ ಶಿವಲಿಂಗ ಹೆಗ್ಗಳಿಕೆಯ ಕಡಬಾಳದ ಕದಂಬೇಶ್ವರನ ಸನ್ನಿಧಾನದಲ್ಲಿ ಜರುಗುವ ಕಾರ್ಯಕ್ರಮಕ್ಕೆ ಗ್ರಾಮಸ್ಥರ ಪೂರ್ವ ತಯಾರಿ ಕಾರ್ಯವೇ ವಿಶೇಷವಾಗಿದೆ.ಇತಿಹಾಸದಲ್ಲಿ ಹೇಳಿದ್ದು:
ಖ್ಯಾತ ಇತಿಹಾಸಕಾರ ದಿ.ಎ.ಕೆ.ಶಾಸ್ತ್ರಿ ಹಾಗೂ ಲಕ್ಷೀಶ ಹೆಗಡೆ ಸೋಂದಾ ಅಭಿಪ್ರಾಯದಲ್ಲಿ ಶ್ರೀಕದಂಬೇಶ್ವರ ದೇವಸ್ಥಾನವು ಸುಮಾರು ೧೪೦೦ ವರ್ಷಗಳ ಇತಿಹಾಸ ಹೊಂದಿದೆ. ಕಡಬಾಳ ಕದಂಬರ ಯುದ್ಧ ತರಬೇತಿಯ ಮುಖ್ಯ ಕೇಂದ್ರವಾಗಿತ್ತು. ಹಾನಗಲ್ ಕದಂಬರ ಆಳ್ವಿಕೆಯ ಕಾಲದಲ್ಲಿ ವಿಜಯದ ಸಂಕೇತವಾಗಿ ಶ್ರೀ ಕದಂಬೇಶ್ವರ ದೇವರ ಆರಾಧನೆಯ ಮಹೋತ್ಸವಗಳನ್ನು ನಡೆಸಲಾಗುತ್ತಿತ್ತು. ಕದಂಬರ ಆಳ್ವಿಕೆಯ ವೈಭವ ಮತ್ತು ವಿಜಯದ ಸಂಕೇತ ಸಾರುವ ಕೋಟೆಯ ಕುರುಹುಗಳು, ಇಪ್ಪತ್ತಕ್ಕೂ ಅಧಿಕ ಶಿಲಾಶಾಸನಗಳು, ವೀರಗಲ್ಲುಗಳು, ಮಾಸ್ತಿಗಲ್ಲು, ಗಾಮದಮನೆ ಇಂದಿಗೂ ಜೀವಂತವಾಗಿರುವುದು ವಿಶೇಷವಾಗಿದೆ. ದೇವರ ವಿಗ್ರಹವು ಪುರುಷ ಪ್ರಮಾಣ ರೂಪವಾಗಿ ಬರೋಬ್ಬರಿ ೫.೫ ಅಡಿ ಎತ್ತರ ಹೊಂದಿದ್ದು, ಏಕಶಿಲೆಯಲ್ಲಿ ಕೆತ್ತನೆಗೊಂಡಿದೆ. ಅಲ್ಲದೇ ಸೋಮಸೂತ್ರ, ಪಾಣಿಪೀಠ ಸೇರಿದಂತೆ ಸುಮಾರು ೮ ಕ್ವಿಂಟಲ್‌ಗೂ ಹೆಚ್ಚಿನ ತೂಕ ಹೊಂದಿದೆ. ನೂತನ ದೇಗುಲದ ಎದುರು ಜೋಡಿಸಲಾದ ಹತ್ತು ಅಡಿಗೂ ಎತ್ತರದ ಶಿಲಾಶಾಸನಗಳು, ವರ್ಷವಿಡಿ ಹರಿಯುವ ಐರಿಯಿಂದ ನಿರ್ಮಾಣಗೊಂಡ ಕಲ್ಯಾಣಿ ಭಕ್ತರನ್ನು ಸೆಳೆಯುತ್ತಲಿವೆ.ಮೂರು ತಲೆಮಾರಿನ ಕನಸಿದು..!:
ಕಡಬಾಳದ ಶ್ರೀಕದಂಬೇಶ್ವರನಿಗೆ ಹೊಸದೊಂದು ದೇವಾಲಯ ಕಟ್ಟಬೇಕೆಂಬುದು ಇಲ್ಲಿಯ ಗ್ರಾಮಸ್ಥರ ನೂರಾರು ವರ್ಷಗಳ ಕನಸು. ಹತ್ತಾರು ಬಾರಿ ದೇವಸ್ಥಾನ ಕಟ್ಟಡ ಕಾರ್ಯಕ್ಕೆ ಪ್ರಯತ್ನಿಸಿದರೂ ದೈವಿಬಲ ಪ್ರಾಪ್ತಿಯಾಗಿರಲಿಲ್ಲ. ಕದಂಬರ ಆಳ್ವಿಕೆಯ ಅವಧಿಯಲ್ಲಿ ಬೆಂಕಿ ಅವಘಡದಿಂದ ದೇವಸ್ಥಾನ ರಕ್ಷಿಸಿ ಬಾಲಮಂದಿರದ ರೂಪದಲ್ಲಿ ಈಶ್ವರನ ಪ್ರತಿಷ್ಠಾಪನೆ ಮಾಡಲಾಗಿತ್ತು ಎಂಬ ಪ್ರತೀತಿಯಿದೆ. ಆ ನಂತರ ೧೯೯೪ರಲ್ಲಿ ದೇವರಿಗೆ ಅಷ್ಟಬಂಧ ಕಾರ್ಯಕ್ರಮ ನೆರವೇರಿತ್ತು. ಅಜ್ಜ, ಮುತ್ತಜ್ಜಂದಿರು ಕಂಡ ಕನಸೀಗ ನೆರವೇರುತ್ತಿರುವುದು ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.ಹರಕೆಯ ಪ್ರತಿಬಂಬ ನಾಗಬನ:
ಕದಂಬರ ಆಳ್ವಿಕೆಯ ಕಾಲದಿಂದಲೂ ಶ್ರೀಕದಂಬೇಶ್ವರನ ಸನ್ನಿಧಾನದಲ್ಲಿ ಹರಕೆಯ ಸೇವೆಗಳು ನಡೆದ ಬಗ್ಗೆ ಸಾಕಷ್ಟು ಉಲ್ಲೇಖಗಳು ಕಂಡುಬರುತ್ತವೆ. ಮಕ್ಕಳಾಗಲೆಂದು, ಕೌಟುಂಬಿಕ ಸಮಸ್ಯೆಗಳ ಪರಿಹಾರಕ್ಕೆ ದೇವರಲ್ಲಿ ಹರಕೆ ರೂಪದಲ್ಲಿ ನೂರಾರು ನಾಗರಕಲ್ಲುಗಳನ್ನು ಸಮರ್ಪಿಸಿರುವುದನ್ನು ಕ್ಷೇತ್ರದಲ್ಲಿ ಕಾಣಬಹುದಾಗಿದೆ. ಈ ಎಲ್ಲ ಶಿಲಾಶಾಸನಗಳು, ನಾಗರಕಲ್ಲುಗಳನ್ನು ಒಂದೆಡೆಯಲ್ಲಿ ಭಕ್ತರಿಗೆ ದರ್ಶನ ನೀಡಲೆಂದು ವ್ಯವಸ್ಥಿತವಾಗಿ ಜೋಡಿಸಿಡಲಾಗಿದೆ.ಈಶ್ವರನಿಗೆ ಶ್ರಮದಾನದ ಸೇವೆ:
ಕದಂಬೇಶ್ವರನಿಗೆ ನೂತನ ದೇವಾಲಯ ನಿರ್ಮಿಸಲು ಸಂಕಲ್ಪಿಸಿದಾಗ ಗ್ರಾಮಸ್ಥರಿಂದ ಆರಂಭಗೊಂಡ ಶ್ರಮದಾನದ ಸೇವೆ ವಿಶೇಷವಾಗಿದೆ. ಸಂಪೂರ್ಣ ದೇಗುಲ ಕೆಲಸವನ್ನು ಗ್ರಾಮಸ್ಥರೆ ನಿರ್ಮಿಸಬೇಕೆಂಬ ಉದ್ಧೇಶದಿಂದ ಆರಂಭಗೊಂಡ ಸೇವಾ ಕಾರ್ಯದಲ್ಲಿ ದೇಗುಲದ ಅಡಿಪಾಯ ತೋಡುವುದರಿಂದ ಆರಂಭಗೊಂಡು, ದೇಗುಲ ಸಮರ್ಪಣೆಯವರೆಗೆ ಯಾವುದೇ ಪ್ರತಿಫಲ ಬಯಸದೇ ದೇವರ ಸೇವಾ ಕಾರ್ಯದಲ್ಲಿ ನೂರಾರು ಮಂದಿ ಗ್ರಾಮಸ್ಥರು ಪಾಲ್ಗೊಂಡು ಲಕ್ಷಾಂತರ ಉಳಿತಾಯವಾಗುವಂತೆ ಮಾಡಿದ್ದು ವಿಶೇಷ. ಪುರುಷರು ಮಾತ್ರವಲ್ಲದೇ ಮಹಿಳೆಯರು ಸಹ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿದ್ದು ವಿಶೇಷ. ವಾಸ್ತು ಶಿಲ್ಪಿ ಹುಬ್ಬಳ್ಳಿಯ ಶ್ರೀವತ್ಸ ಹೆಗಡೆ ಪರಿಕಲ್ಪನೆಯಲ್ಲಿ ಎಲ್.ವಿ. ಕನ್‌ಸ್ಟ್ರಕ್ಷನ್ ಹುಡ್ಲಮನೆ ಮಂಜುನಾಥ ಹೆಗಡೆ ನೇತೃತ್ವದಲ್ಲಿ ದೇಗುಲ ನಿರ್ಮಾಣ ಕಾರ್ಯ ನಡೆದಿದೆ.ಗಣ್ಯರ ಭೇಟಿ, ಪರಿಶೀಲನೆ:
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಭಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ದೇಗುಲ ನಿರ್ಮಾಣ ಕಾರ್ಯಕ್ಕೆ ₹೫೦ ಲಕ್ಷ ಸರ್ಕಾರದಿಂದ ಮಂಜೂರಿ ಮಾಡಿಸಿಕೊಟ್ಟಿದ್ದರು. ಆ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಪೂರ್ವಭಾವಿ ತಯಾರಿ ವೀಕ್ಷಣೆಗೆಂದು ಮಂಗಳವಾರ ದೇವಸ್ಥಾನಕ್ಕೆ ಭೇಟಿ ನೀಡಿ, ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಕದಂಬರ ಆಳ್ವಿಕೆಯ ಶಿಲಾಶಾಸನಗಳನ್ನು ಅಚ್ಚುಕಟ್ಟಾಗಿ ಜೋಡಿಸಿದ್ದನ್ನು ನೋಡಿ ಖುಷಿಪಟ್ಟ ಸಂಸದರು, ಕದಂಬರ ಇತಿಹಾಸದ ಮೈಲುಗಲ್ಲುಗಳನ್ನು ಸಾರುವ ಸಾಕ್ಷ್ಯಗಳನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರದು ಎಂದು ಕರೆ ನೀಡಿದರು. ಜೊತೆಯಲ್ಲಿ ಹೋರಾಟಗಾರ ಅನಂತಮೂರ್ತಿ ಹೆಗಡೆ ಬ್ಯಾಗದ್ದೆ ಕೂಡ ಗ್ರಾಮಸ್ಥರ ಸೇವಾ ಕಾರ್ಯ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.