ಸಾರಾಂಶ
ಗುರುವಾರ ಸಂಜೆ ಧಾರವಾಡ ಭಾಗದಲ್ಲಿ ಮಳೆಯಾಗುತ್ತಿವಾಗ ನಿರ್ವಾಹಕಿ ಅನಿತಾ, ಚಾಲಕ ಹನುಮಂತಪ್ಪ ಕಿಲ್ಲೇದಾರ ಎಂಬುವರು ಬಸ್ ಸೋರುತ್ತಿದೆ ಎಂಬಂತೆ ಛತ್ರಿ ಹಿಡಿದು ವಿಡಿಯೋ ಮಾಡಿದ್ದಾರೆ.
ಧಾರವಾಡ:
ಬಸ್ ಸೋರುತ್ತಿದೆ ಎಂದು ಸಾರಿಗೆ ಸಂಸ್ಥೆಯ ಚಾಲಕ ಛತ್ರಿ ಹಿಡಿದು ಬಸ್ ಚಲಾಯಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ಚಾಲಕ ಹಾಗೂ ನಿರ್ವಾಹಕಿ ತಮ್ಮ ನೌಕರಿಗೂ ಸಂಚಕಾರ ತಂದುಕೊಂಡಿದ್ದಾರೆ.ಗುರುವಾರ ಸಂಜೆ ಧಾರವಾಡ ಭಾಗದಲ್ಲಿ ಮಳೆಯಾಗುತ್ತಿವಾಗ ನಿರ್ವಾಹಕಿ ಅನಿತಾ, ಚಾಲಕ ಹನುಮಂತಪ್ಪ ಕಿಲ್ಲೇದಾರ ಎಂಬುವರು ಬಸ್ ಸೋರುತ್ತಿದೆ ಎಂಬಂತೆ ಛತ್ರಿ ಹಿಡಿದು ವಿಡಿಯೋ ಮಾಡಿದ್ದಾರೆ. ಆದರೆ, ಈ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ನೈಜವಾಗಿ ಬಸ್ ಸೋರುತ್ತಿಲ್ಲ. ಬಸ್ ಚಾಲಕ ಹಾಗೂ ನಿರ್ವಾಹಕಿ ತಾಲೂಕಿನ ಉಪ್ಪಿನಬೆಟಗೇರಿಯಿಂದ ಧಾರವಾಡ ಕಡೆ ಬರುವಾಗ ರಿಲ್ಸ್ ಮಾಡಲು ಹೋಗಿ ಇದೀಗ ಎಡವಟ್ಟು ಮಾಡಿಕೊಂಡಿದ್ದಾರೆ.
ಈ ವಿಡಿಯೋ ವಾಯವ್ಯ ಸಾರಿಗೆ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರು ಶುಕ್ರವಾರ ಸಂಜೆ ಚಾಲಕ ಹಾಗೂ ನಿರ್ವಾಹಕಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.ವಿಡಿಯೋದಲ್ಲಿ ಏನಿದೆ:
ಸುರಿಯುತ್ತಿರುವ ಮಳೆಯಲ್ಲಿ ನಿರ್ವಾಹಕಿ ವಿಡಿಯೋ ಮಾಡುತ್ತಾ ಮುಂದೆ ಗಾಡಿ ಬರಾಕತ್ತಾವ್ ನೋಡಿ ಹೊಡಿ ಅಂತಾರೆ, ಆಗ ಚಾಲಕ ನೀ ಮೊಬೈಲ್ ಕರೆಕ್ಟ್ ಹಿಡಕೋ ಎನ್ನುವ ಸಂಭಾಷಣೆ ಇದೆ.ಇದೀಗ ಬಸ್ ತಪಾಸಣೆ ಮಾಡಿದ್ದು, ಅದರ ಮೇಲ್ಚಾವಣಿ ಸೋರಿಕೆ ಕಂಡುಬಂದಿಲ್ಲ. ಅಲ್ಲದೇ ಈ ಕುರಿತು ಯಾವುದೇ ದೂರುಗಳೂ ಬಂದಿಲ್ಲ. ಆದರೆ, ಚಾಲಕ ಮತ್ತು ನಿರ್ವಾಹಕರು ಮನೋರಂಜನೆಗಾಗಿ ವಿಡಿಯೋ ಚಿತ್ರೀಕರಣ ಮಾಡಿದ್ದು, ಇದಕ್ಕೆ ಶಿಸ್ತು ಕ್ರಮಕೈಗೊಳ್ಳಲಾಗಿದೆ ಎಂದು ವಾಯವ್ಯ ಸಾರಿಗೆ ವ್ಯವಸ್ಥಾಪಕ ನಿರ್ದೇಶಕರು ಸ್ಪಷ್ಟೀಕರಣ ನೀಡಿದ್ದಾರೆ.