ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ- 50 ಕ್ಕೂ ಹೆಚ್ಚು ಮಕ್ಕಳಿಗೆ ಗಾಯ

| Published : Dec 27 2023, 01:30 AM IST

ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ- 50 ಕ್ಕೂ ಹೆಚ್ಚು ಮಕ್ಕಳಿಗೆ ಗಾಯ
Share this Article
  • FB
  • TW
  • Linkdin
  • Email

ಸಾರಾಂಶ

ಶಾಲಾ ಮಕ್ಕಳಿದ್ದ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿಯಾದ ಪರಿಣಾಮ ಡ್ರೈವರ್ ಸೇರಿ ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡ ಘಟನೆ ಸವಣೂರು ತಾಲೂಕಿನ ಬೇವಿನಹಳ್ಳಿ ಕ್ರಾಸ್ ಬಳಿ ನಡೆದಿದೆ.

ಕನ್ನಡಪ್ರಭ ವಾರ್ತೆ ಸವಣೂರು

ಶಾಲಾ ಮಕ್ಕಳಿದ್ದ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿಯಾದ ಪರಿಣಾಮ ಡ್ರೈವರ್ ಸೇರಿ ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಬೇವಿನಹಳ್ಳಿ ಕ್ರಾಸ್ ಬಳಿ ನಡೆದಿದೆ.

ಲಿಂಗಸೂರು ತಾಲೂಕಿನ ಸಜ್ಜಲ್ ಗುಡ್ಡದಿಂದ ಶಿಗ್ಗಾಂವಿಯ ಗೊಟಗೋಡಿ ಪ್ರವಾಸಕ್ಕೆ ತೆರಳುತ್ತಿದ್ದರು. ಘಟನೆಯಲ್ಲಿ 50ಕ್ಕೂ ಅಧಿಕ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸವಣೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸುಮಾರು 25 ಮಕ್ಕಳನ್ನು ಗ್ರಾಮಸ್ಥರು ಬೇವಿನಹಳ್ಳಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿ ಉಪಚರಿಸಿ ಮಾನವೀಯತೆ ಮೆರೆದಿದ್ದಾರೆ.

ತೀವ್ರವಾಗಿ ಗಾಯಗೊಂಡ ಡ್ರೈವರ್ ಮಲ್ಲಪ್ಪ ಪುಂಡಿ ಹಾಗೂ 7ನೇ ತರಗತಿಯ ಸವಿತಾ ಅಮರೇಗೌಡ, ವಿದ್ಯಾಶ್ರೀ ಶರಣಗೌಡ, ಗುರುರಾಜ ಬಸವರಾಜು ಈ ಮೂವರಿಗೆ ಸವಣೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ:

ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಸಜ್ಜಲ್ ಗುಡ್ಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 53 ಮಕ್ಕಳು ಹಾಗೂ 6 ಜನ ಶಿಕ್ಷಕರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ಗೊಟಗೋಡಿಗೆ ಪ್ರವಾಸಕ್ಕೆ ತೆರಳುತ್ತಿದ್ದರು. ಬೆಳಗಿನ ಜಾವ ಸುಮಾರು 4 ಗಂಟೆ ಸುಮಾರಿಗೆ ಎದುರಿಂದ ಬಂದ ಕಾರಿನ ಡಿಕ್ಕಿ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ರಸ್ತೆ ಬದಿಯ ಕೃಷಿ ಜಮೀನಿನಲ್ಲಿ ಬಿದ್ದಿದೆ. ಇದನ್ನು ಕಂಡ ಜಮೀನಿನ ಮಾಲೀಕ ಹಾಗೂ ಬೇವಿನಹಳ್ಳಿ ಗ್ರಾಮಸ್ಥರು ಗಾಯಗೊಂಡ ಮಕ್ಕಳು ಹಾಗೂ ಶಿಕ್ಷಕರನ್ನು ಹೊರತೆಗೆದು ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಸ್ತವ್ಯ ಕಲ್ಪಿಸಿ ಉಪಾಹಾರ, ಊಟದ ವ್ಯವಸ್ಥೆ ಮಾಡಿದ್ದಾರೆ.

ಘಟನಾ ಸ್ಥಳಕ್ಕೆ ಉಪ ವಿಭಾಗಾಧಿಕಾರಿ ಮೊಹ್ಮದ ಕೀಜರ್, ತಹಸೀಲ್ದಾರ್ ಭರತರಾಜ ಕೆ.ಎನ್., ಎಸ್ಪಿ ಅಂಶುಕುಮಾರ ಭೇಟಿ ನೀಡಿ ಗಾಯಗೊಂಡ ಮಕ್ಕಳು ಹಾಗೂ ಶಿಕ್ಷಕರ ಆರೋಗ್ಯ ವಿಚಾರಿಸಿದರು.

ಇನ್ನು ಕಾಂಗ್ರೆಸ್‌, ಬಿಜೆಪಿ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಮಕ್ಕಳಿಗೆ ಹಣ್ಣು-ಹಂಪಲು ವಿತರಿಸಿದರು.

ರಸ್ತೆ ನಿರ್ಮಾಣವಾಗಿ 6 ತಿಂಗಳಾದರೂ ಯಾವುದೇ ನಾಮಫಲಕ ಹಾಕಿಲ್ಲ. ಇದೇ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ತೀವ್ರ ಗಾಯಗೊಂಡ ಮೂವರು ವಿದ್ಯಾರ್ಥಿಗಳು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಪಾಲಕರು ಸಹ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಉಳಿದ ಎಲ್ಲಾ ವಿದ್ಯಾರ್ಥಿಗಳನ್ನು ಕೆಎಸ್ಆರ್‌ಟಿಸಿ ಬಸ್ ಮೂಲಕ ಅವರ ಊರಿಗೆ ಕಳಿಸಿಕೊಡಲಾಗಿದೆ. ಮಕ್ಕಳ ವೈದ್ಯಕೀಯ ವೆಚ್ಚವನ್ನು ಸಾರಿಗೆ ಸಂಸ್ಥೆಯಿಂದಲೇ ನೀಡಲಾಗುತ್ತಿದೆ ಎಂದು ಸಾರಿಗೆ ಸಂಸ್ಥೆಯ ವಿಭಾಗೀಯ ಸಂಚಾರ ಅಧಿಕಾರಿ ಅಶೋಕ್ ಪಾಟೀಲ ತಿಳಿಸಿದ್ದಾರೆ.