ಮೈಸೂರಿನ ಪ್ರೇಕ್ಷಣೀಯ ಶೌಚಾಲಯ!

| Published : Jul 12 2024, 01:37 AM IST

ಸಾರಾಂಶ

ಪ್ರವಾಸಿಗರ ಕಣ್ಮನ ಸೆಳೆಯುವ ಈ ಶೌಚಾಲಯವನ್ನು ವೀಕ್ಷಿಸಲು ನೂರು ಕಣ್ಣು ಸಾಲದು!

ಕನ್ನಡಪ್ರಭ ವಾರ್ತ ಮೈಸೂರು

ಮೈಸೂರು ಮಹಾನಗರ ಪಾಲಿಕೆಯು ನಿರ್ಮಿಸಿರುವ ಸುಂದರ ಮನಮೋಹಕ ಪ್ರಾಕೃತಿಕ ಪರಿಸರ ಸ್ನೇಹಿ ಇ-ಶೌಚಾಲಯವಿದು!.

ಅಶೋಕ ಪುರಂ ಪೊಲೀಸ್ ಠಾಣೆಯ ಹಿಂಭಾಗದಲ್ಲಿರುವ ಕನ್ನೇಗೌಡ ಕ್ರೀಡಾಂಗಣದ ಬಳಿ ಇರುವ ಪ್ರಕೃತಿಯ ಮಡಿಲಿನಲ್ಲಿ ಈ ಸುಂದರವಾದ ಶೌಚಾಲಯವನ್ನು ನಿರ್ಮಿಸಲಾಗಿದೆ. ಪ್ರವಾಸಿಗರ ಕಣ್ಮನ ಸೆಳೆಯುವ ಈ ಶೌಚಾಲಯವನ್ನು ವೀಕ್ಷಿಸಲು ನೂರು ಕಣ್ಣು ಸಾಲದು! ಪಾಲಿಕೆಯು ನಿರ್ಮಿಸಿದ ಈ ಮನಮೋಹಕ ಶೌಚಾಲಯಕ್ಕೆ ಮಾರು ಹೋಗಿ ಪ್ರಕೃತಿಯೇ ಲತಾ ಮಂಟಪವನ್ನು ಹೊದಿಸಿದೆ.

ಈ ವಿಷಯವನ್ನು ಮೈಸೂರು ಮಹಾನಗರ ಪಾಲಿಕೆಯ ಗಮನಕ್ಕೆ ತರುವುದು ಹೇಗೆ?

ಮೈಸೂರು ಮಹಾನಗರ ಪಾಲಿಕೆಗೆ ತನ್ನದೇ ಆದ ಫೇಸ್ ಬುಕ್ ಖಾತೆಯಿದೆ. ಇ ಮೇಲ್ ವಿಳಾಸವಿದೆ. ದೂರವಾಣಿ ಸಂಖ್ಯೆಯಿದೆ. ವಾಟ್ಸ್ ಆಪ್ ಸಂಖ್ಯೆಯೂ ಇದೆ!.ಇದು ತಮ್ಮ ತಮ್ಮ ಕಾರ್ಯಕ್ರಮಗಳ ಪ್ರಚಾರಕ್ಕೆ ಸೀಮಿತವಾಗಿದೆ.

ಈ ಎಲ್ಲ ಸಾಮಾಜಿಕ ಜಾಲತಾಣಗಳ ಮೂಲಕ ಮೈಸೂರಿನ ನಾಗರಿಕರ ಸಮಸ್ಯೆಗಳನ್ನು ಪಾಲಿಕೆಯ ಗಮನಕ್ಕೆ ತರೋಣವೆಂದರೆ ಪಾಲಿಕೆಯು ಇದಾವುದನ್ನೂ ಗಮನಿಸುವುದೇ ಇಲ್ಲ. ಪತ್ರಿಕೆಯನ್ನು ಓದಿ ಪ್ರತಿಕ್ರಿಯೆ ನೀಡುವ ಸೌಜನ್ಯವಂತೂ ಪಾಲಿಕೆಗೆ ಇಲ್ಲವೇ ಇಲ್ಪ.

ಮೈಸೂರಿನ ಪಾದಾಚಾರಿ ಮಾರ್ಗಗಳ ಸಿಂಹಪಾಲು ಅತಿಕ್ರಮಣಗೊಂಡಿವೆ. ಕೆಲವೆಡೆ ಶೇ. 100 ನಾಶವಾಗಿವೆ. ರಸ್ತೆಗಳು ಕುಲಗೆಟ್ಟು ಮಾರಣಾಂತಿಕ ಹಳ್ಳಗಳು ನಿರ್ಮಾಣವಾಗಿವೆ. ಸಾರ್ವಜನಿಕ ಶೌಚಾಲಯಗಳು ನಾರುತ್ತಿವೆ. ನಗರದ ಹೃದಯ ಭಾಗದಲ್ಲಿರುವ ಕಟ್ಟಡಗಳು ಶಿಥಿಲಗೊಂಡು ಇಂದೋ ನಾಳೆಯೋ ಧರೆಗುರುಳಲಿದೆ. ಈ ಎಲ್ಲ ಪೌರ ಸಮಸ್ಯೆಗಳು ಪತ್ರಿಕೆಯಲ್ಲಿ ಪ್ರಕಟವಾದರೂ ಪಾಲಿಕೆಯ ಗಮನಕ್ಕೆ ಬಂದಂತಿಲ್ಲ. ಕಾರಣ ಪಾಲಿಕೆಯ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಪತ್ರಿಕೆ ಓದುವ ಹವ್ಯಾಸವೇ ಇಲ್ಪ. ಓದಿದರೆ ಸ್ಪಂದಿಸುವ ಸೌಜನ್ಯವೂ ಇಲ್ಲ.

-----

ಪೊಲೀಸರು ಶೇ. 100 ಮೇಲು

ಪಾಲಿಕೆಗೆ ಹೋಲಿಸಿದರೆ ನಮ್ಮ ಮೈಸೂರು ನಗರ ಪೊಲೀಸರು ಶೇ. 100 ರಷ್ಟು ಮೇಲು. ಸಾಮಾಜಿಕ ಜಾಲತಾಣಗಳ ಮೂಲಕ ಸಮಸ್ಯೆಯನ್ನು ಅರಿತೊಡನೆ ತಕ್ಷಣ ಪ್ರತಿಕ್ರಿಯೆ ನೀಡಿ ಸ್ಪಂದಿಸುವ ನಮ್ಮ ಪೊಲೀಸರಿಂದ ಪಾಲಿಕೆಯು ಸೌಜನ್ಯದ ಪಾಠ ಕಲಿಯಬೇಕಾಗಿದೆ.

-ಪಿ.ಜೆ. ರಾಘವೇಂದ್ರ ನ್ಯಾಯವಾದಿ, ಮೈಸೂರು.