ಸಾರಾಂಶ
ನಂದಿಗುಡಿ ರಸ್ತೆಯಲ್ಲಿ ಬಸವ ಜಯಂತಿ ನಿಮಿತ್ತ ಆಂಜನೇಯಸ್ವಾಮಿ ರಥೋತ್ಸವ, ಸಾಮೂಹಿಕ ವಿವಾಹ, ಧಾರ್ಮಿಕ ಸಮಾರಂಭದ ಉದ್ಘಾಟನೆ ನಡೆಯಿತು.
ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಜನತೆಗೆ ಉದಾರವಾಗಿ ಅಗ್ಗದ ಕೊಡುಗೆ ನೀಡಿದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಡೋಲಾಯಮಾನವಾಗುತ್ತೆ ಎಂದು ರಟ್ಟಿಹಳ್ಳಿ ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಖೇದ ವ್ಯಕ್ತಪಡಿಸಿದರು.ಪಟ್ಟಣದ ನಂದಿಗುಡಿ ರಸ್ತೆಯಲ್ಲಿ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡ ಆಂಜನೇಯಸ್ವಾಮಿ ರಥೋತ್ಸವ, ಸಾಮೂಹಿಕ ವಿವಾಹ, ಧಾರ್ಮಿಕ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಅಂಥಹ ಸೌಲಭ್ಯಗಳಿಂದ ಧಾರ್ಮಿಕ ಸಮಾರಂಭಗಳಿಗೆ ಜನರು ಬಾರದಂತಾಗಿದ್ದಾರೆ ಎಂದು ನುಡಿದರು.
ಅಡಕೆ ತೋಟ ಇತರೆ ಕಾರಣ ನೀಡಿ ಕೃಷಿಕ ಯುವಕರಿಗೆ ಕನ್ಯೆಗಳು ದೊರಕದಂತಾಗಿ, ವಧು ದಕ್ಷಿಣೆ ನೀಡಿದರೂ, ತಂದೆ ತಾಯಿಯರು ಅವರ ಹಿರಿಯರ ಸ್ಥಾನದಲ್ಲಿದ್ದು ಯೋಚನೆ ಮಾಡಿ ಯಾವುದೇ ವಿವಾಹಕ್ಕೆ ನಿಬಂಧನೆ ಹಾಕದೇ ಯುವಕರಿಗೆ ಹೆಣ್ಣು ಕೊಡುವ ವಿಶಾಲ ಸಂಕಲ್ಪ ಮಾಡಲು ಕರೆ ನೀಡಿದರು.ರಾಹುಕಾಲದಲ್ಲಿಯೂ ಶುಭ ಕಾರ್ಯ ಮಾಡಿ, ಉತ್ತಮ ಸಂತತಿ ಮತ್ತು ಕೌಟಂಬಿಕ ವ್ಯವಸ್ಥೆ ಇವೆರಡು ವಿವಾಹದ ಎರಡು ಉದ್ದೇಶಗಳಾಗಿವೆ, ಇಲ್ಲಿ ಒಂದಾಗಿರುವ 9 ನವ ಜೋಡಿಗಳು ಅನ್ಯೂನ್ಯ ಜೀವನ ನಡೆಸಿ, ಧರ್ಮವಂತರಾಗಿ ಸಮಾಜಕ್ಕೆ ಕೊಡುಗೆ ನೀಡಲು ಕರೆ ನೀಡಿದರು.
ಮುಖಂಡರಾದ ವಾಗೀಶ್‌ಸ್ವಾಮಿ, ಚಂದ್ರಶೇಖರ್ ಪೂಜಾರ್,ಹನಗವಾಡಿ ವೀರೇಶ್, ಪರಶುರಾಮಪ್ಪ ,ಸಾಬಿರ್‌ಅಲಿ ಮಾತನಾಡಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ಧರ್ಮಪ್ಪ, ಗೌಡ್ರ ಮಂಜುನಾಥ್, ಪಿ.ಹಾಲೇಶಪ್ಪ, ಮಂಜು, ಬಿ.ವೀರಯ್ಯ, ಭೋವಿ ಕುಮಾರ್, ಶಿಕ್ಷಕರಾದ ದಂಡಿ ತಿಪ್ಪೇಸ್ವಾಮಿ, ಡಿ.ಕೆ ಕರಿಬಸಪ್ಪ ಹಾಗೂ ಸಾವಿರಾರು ಭಕ್ತರು ಇದ್ದರು.ಒಂಭತ್ತು ನವ ಜೋಡಿಗಳು ದಾಂಪತ್ಯಕ್ಕೆ ಕಾಲಿಟ್ಟರು. ವಿವಾಹಕ್ಕೆ ಆಗಮಿಸಿದ ಬಂಧುಗಳಿಗೆ ಸರ್ಕಾರಿ ಪಿಯು ಕಾಲೇಜ್ ಕೊಠಡಿಯಲ್ಲಿ ವಸತಿ ವ್ಯವಸ್ಥೆ ಮಾಡಲಾಗಿತ್ತು.