ಕಳೆದೊಂದು ವರ್ಷದಿಂದ ಶಿಕ್ಷಣ ಕ್ಷೇತ್ರ ಕಲುಷಿತ

| Published : May 26 2024, 01:30 AM IST / Updated: May 26 2024, 01:31 AM IST

ಸಾರಾಂಶ

ರಾಜ್ಯದಲ್ಲಿ ಕಳೆದೊಂದು ವರ್ಷದಿಂದ ಶಿಕ್ಷಣ ಕ್ಷೇತ್ರದ ಕಲುಷಿತಗೊಂಡಿದ್ದು, ಈ ಕ್ಷೇತ್ರದ ಪಾವಿತ್ರ್ಯತೆ ಉಳಿಯಬೇಕಾದರೆ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಓರ್ವ ಸಜ್ಜನ ರಾಜಕಾರಣಿ ವಿಧಾನ ಪರಿಷತ್ತುಗೆ ಆಯ್ಕೆಯಾಗಬೇಕಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ವೈ.ಎ. ನಾರಾಯಣಸ್ವಾಮಿ ಅವರನ್ನು ಗೆಲ್ಲಿಸುವ ಮೂಲಕ ಶಿಕ್ಷಣ ಕ್ಷೇತ್ರ, ಶಿಕ್ಷಕರ ಧ್ವನಿಯಾಗುವಂತೆ ಮಾಡಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮನವಿ ದಾವಣಗೆರೆಯಲ್ಲಿ ಮಾಡಿದ್ದಾರೆ.

- ಅಭ್ಯರ್ಥಿ ನಾರಾಯಣಸ್ವಾಮಿ ಪರ ಪ್ರಚಾರ ಸಭೆಯಲ್ಲಿ ವಿಜಯೇಂದ್ರ ಆರೋಪ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ ರಾಜ್ಯದಲ್ಲಿ ಕಳೆದೊಂದು ವರ್ಷದಿಂದ ಶಿಕ್ಷಣ ಕ್ಷೇತ್ರದ ಕಲುಷಿತಗೊಂಡಿದ್ದು, ಈ ಕ್ಷೇತ್ರದ ಪಾವಿತ್ರ್ಯತೆ ಉಳಿಯಬೇಕಾದರೆ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಓರ್ವ ಸಜ್ಜನ ರಾಜಕಾರಣಿ ವಿಧಾನ ಪರಿಷತ್ತುಗೆ ಆಯ್ಕೆಯಾಗಬೇಕಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ವೈ.ಎ. ನಾರಾಯಣಸ್ವಾಮಿ ಅವರನ್ನು ಗೆಲ್ಲಿಸುವ ಮೂಲಕ ಶಿಕ್ಷಣ ಕ್ಷೇತ್ರ, ಶಿಕ್ಷಕರ ಧ್ವನಿಯಾಗುವಂತೆ ಮಾಡಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮನವಿ ಮಾಡಿದರು.

ನಗರದ ಹೊರ ವಲಯದ ಶಿರಮಗೊಂಡನಹಳ್ಳಿ ಗ್ರಾಮದ ಶ್ರೀಮತಿ ಸುಧಾ ವೀರೇಂದ್ರ ಪಾಟೀಲ್‌ ಸಭಾ ಭವನದಲ್ಲಿ ಶನಿವಾರ ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಪರ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ಕ್ಷೇತ್ರಕ್ಕೆ ಎಲ್ಲವನ್ನೂ ಮೀರಿ, ಹೆಚ್ಚಿನ ಒತ್ತು ನೀಡಬೇಕಿದೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ನಿರುದ್ಯೋಗ ನಿವಾರಣೆ ಮತ್ತು ಕೌಶಲ್ಯಪೂರ್ಣ ಶಿಕ್ಷಣ ನೀಡುವ ಉದ್ದೇಶದಿಂದ ಜಾರಿಗೊಳಿಸಿದ್ದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ)ಯನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಬದಿಗಿಟ್ಟು, ಎಸ್ಇಪಿ ತರಲು ಪ್ರಯತ್ನ ನಡೆಸಿದೆ. ಈ ಮೂಲಕ ಶಿಕ್ಷಣ ಕ್ಷೇತ್ರವನ್ನು ಹದಗೆಡಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ವಿಧಾನ ಪರಿಷತ್ತು ಚುನಾವಣೆ ಪ್ರಚಾರಕ್ಕೆಂದು ದಾವಣಗೆರೆ ಶಾಲೆಯೊಂದಕ್ಕೆ ಪ್ರಚಾರಕ್ಕೆ ಹೋಗಿದ್ದ ವೇಳೆ ಶಿಕ್ಷಕರ ಜೊತೆಗೆ ಚರ್ಚಿಸುತ್ತಿದೆ. ಆಗ ಓರ್ವ ಶಿಕ್ಷಕರಂತೂ ಲೋಕಸಭೆ, ವಿಧಾನ ಪರಿಷತ್ತು ಚುನಾವಣೆ ಫಲಿತಾಂಶ ಬಂದಾದ ನಂತರ ರಾಜ್ಯದ ಶಿಕ್ಷಣ ಸಚಿವರನ್ನು ಬದಲಾಯಿಸುವಂತೆ ರಾಜ್ಯವ್ಯಾಪಿ ಹೋರಾಟ ರೂಪಿಸುವಂತೆ ಮನವಿ ಮಾಡಿದರು. ಬಹುಶಃ ರಾಜ್ಯದಲ್ಲಿ ಇಂತಹ ಕೆಟ್ಟ ಪರಿಸ್ಥಿತಿ ಬರುತ್ತದೆಂದು ಯಾರೊಬ್ಬರೂ ಅಂದುಕೊಂಡಿರಲಿಲ್ಲ ಎಂದು ಹೇಳಿದರು.

ಬಿಜೆಪಿ ಆಡಳಿತದಲ್ಲಿ ಶಿಕ್ಷಣ ಕ್ರಾಂತಿ:

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 2.5 ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಶಿಕ್ಷಣ ಸಚಿವರಿಗೇ ಸರಿಯಾಗಿ ಕನ್ನಡ ಓದಲು, ಬರೆಯಲು ಬರಲ್ಲವೆಂದರೆ ಶಿಕ್ಷಣ ಕ್ಷೇತ್ರದ ಬಗ್ಗೆ ರಾಜ್ಯ ಸರ್ಕಾರ ಅದೆಷ್ಟು ಗಂಭೀರ ಯೋಚನೆ ಮಾಡುತ್ತಿದೆ ಎಂಬುದು ಗೊತ್ತಾಗುತ್ತದೆ. ಬಿಜೆಪಿ ಸರ್ಕಾರವಿದ್ದಾಗ ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿತ್ತು. ಯಡಿಯೂರಪ್ಪ ಕೇವಲ ರೈತ ನಾಯಕರಾಗಿರಲಿಲ್ಲ. ಶಿಕ್ಷಕರ ಸಹ ಗೌರವಿಸುವಂತೆ ಕೆಲಸ ಮಾಡುತ್ತಿದ್ದರು. 2005-06ರಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಟ್ಟಿದ್ದ ₹4800 ಕೋಟಿ, ಮೈತ್ರಿ ಸರ್ಕಾರದಲ್ಲಿ ಹೆಚ್ಚಾಯಿತು. 2012ರಲ್ಲಿ ₹18 ಸಾವಿರ ಕೋಟಿಗೂ ಹೆಚ್ಚು ಹಣ ಮೀಸಲಿಡಲಾಗಿತ್ತು ಎಂದು ತಿಳಿಸಿದರು.

ಮಾಜಿ ಸಚಿವ ಸಿ.ಟಿ.ರವಿ ಮಾತನಾಡಿ, ವಿಪ ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಕಳೆದ 3 ಅವಧಿಯಲ್ಲಿ ಶಿಕ್ಷಕರ ಸಾಕಷ್ಟು ಸಮಸ್ಯೆ ಪರಿಹರಿಸಿದ್ದಾರೆ. ನಾರಾಯಣ ಸ್ವಾಮಿ ವಿರುದ್ಧ ಬೇರೆ ಯಾರಾದರೂ ಸ್ಪರ್ಧಿಸುವುದಾದರೆ ಸುಮ್ಮನೇ ರಾಜಕಾರಣ ಮಾಡಲಿಕ್ಕಷ್ಟೇ. ಆದರೆ, ಶಿಕ್ಷಣ ಕ್ಷೇತ್ರಕ್ಕೆ ಅಂತಹವರಿಂಗ ನ್ಯಾಯ ಕೊಡಲು ಸಾಧ್ಯವಾಗದು. ಗ್ಯಾರಂಟಿ ಬಿಟ್ಟು, ಉಳಿದೆಲ್ಲವನ್ನೂ ಹಳ್ಳ ಹಿಡಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಎಲ್ಲದರ ಶುಲ್ಕ, ದರ ಹೆಚ್ಚಿಸಿ, ಆ ನಂತರ ನಾನು ಕೊಟ್ಟೆಯೆಂದು ಸರ್ಕಾರದ ಬೊಕ್ಕಸದಿಂದ ರಾಜ್ಯದ ಜನರಿಗೆ ಸೌಲಭ್ಯ ನೀಡಿ, ಉಳಿದೆಲ್ಲಾ ಕ್ಷೇತ್ರಗಳ ಅಭಿವೃದ್ಧಿ ಶೂನ್ಯಗೊಳಿಸಿದೆ ಎಂದು ಟೀಕಿಸಿದರು.

ಜೆಡಿಎಸ್ ಮುಖಂಡ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ ಮಾತನಾಡಿ, ಕಳೆದ ಮೂರು ಅವದಿಯಲ್ಲಿ ನಾರಾಯಣಸ್ವಾಮಿ ಪ್ರತಿ ಬಾರಿಯೂ ಒಂದೊಂದು ಕಾರಣದಿಂದ ಜಯ ಸಾಧಿಸಿದ್ದಾರೆ. ಈ ಸಲ ಬಿಜೆಪಿ-ಜೆಡಿಎಸ್ ಮೈತ್ರಿಯು ಗೆಲುವಿಗೆ ಶ್ರಮಿಸಲಿದೆ. ದಾವಣಗೆರೆ ಸೇರಿದಂತೆ ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿ ಗೆಲ್ಲಲಿದೆ. ಈ ಬಗ್ಗೆ ಯಾವುದೇ ಅನುಮಾನವಿಲ್ಲ. ಹಣವಂತೂ ನಡೆಯುವುದಿಲ್ಲ. ಜನರೇ ಗೆಲ್ಲುತ್ತಾರೆ ಎಂಬುದಕ್ಕೆ 28 ಕ್ಷೇತ್ರದ ಫಲಿತಾಂಶ ಸಾಕ್ಷಿಯಾಗಲಿದೆ. ಬಿಜೆಪಿ, ಜೆಡಿಎಸ್‌ನವರು ಒಂದಾಗಿ ನಾರಾಯಣ ಸ್ವಾಮಿಗೆ ಗೆಲ್ಲಿಸೋಣ ಎಂದು ಕರೆ ನೀಡಿದರು.

ಮಾಜಿ ಸಚಿವ ಎಸ್.ಎ. ರವೀಂದ್ರನಾಥ ಮಾತನಾಡಿ, 4 ದಶಕದಿಂದ ವಿಧಾನ ಪರಿಷತ್ತು ಚುನಾವಣೆ ಮಾಡಿಕೊಂಡು ಬಂದಿದ್ದೇನೆ. ಈ ಭಾಗದಲ್ಲಿ ಶಿಕ್ಷಕರು ಚಲಾಯಿಸುವ ಮತಗಳಲ್ಲಿ ಸಾಕಷ್ಟು ಕುಲಗೆಟ್ಟಿರುತ್ತವೆ. ಮಂಗಳೂರು ಭಾಗದಲ್ಲಿ ಒಂದೇ ಒಂದು ಮತವೂ ಕುಲಗೆಟ್ಟಿರುವುದಿಲ್ಲ. ಬುದ್ಧಿವಂತ ಶಿಕ್ಷಕರೇ ಮತಗಳನ್ನು ಕುಲಗೆಡಿಸಿದರೆ ಶಿಕ್ಷಣ ಕ್ಷೇತ್ರಕ್ಕೆ ಗೌರವ ಇರುವುದಿಲ್ಲ ಎಂದು ಸೂಚ್ಯವಾಗಿ ಹೇಳಿದರು.

ಸಂಸದ ಜಿ.ಎಂ.ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ.ಹರೀಶ, ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣ ಸ್ವಾಮಿ, ವಿಪ ಸದಸ್ಯರಾದ ಸಿದ್ದಲಿಂಗಪ್ಪ ವಿ.ಸಂಕನೂರ, ಕೆ.ಎಸ್.ನವೀನ, ಚಿದಾನಂದಗೌಡ, ಮಾಜಿ ಸದಸ್ಯರಾದ ಅರುಣ ಶಹಪೂರ, ಡಾ.ಎ.ಹೆಚ್.ಶಿವಯೋಗಿಸ್ವಾಮಿ, ಮಾಜಿ ಸಚಿವ ಭೈರತಿ ಬಸವರಾಜ, ಮಾಜಿ ಶಾಸಕ ರಾದ ಎಚ್.ಪಿ.ರಾಜೇಶ, ಪ್ರೊ.ಎನ್.ಲಿಂಗಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಎಸ್.ಎಂ.ವೀರೇಶ ಹನಗವಾಡಿ, ತಿಮ್ಮೇಶಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ, ನಾಗರಾಜ ಲೋಕಿಕೆರೆ, ಯಶವಂತ ರಾವ್ ಜಾಧವ್, ಕೆ.ಬಿ.ಕಲ್ಲೇರುದ್ರೇಶ, ಮಾಡಾಳ್ ಮಲ್ಲಿಕಾರ್ಜುನ, ಹೆಚ್.ಎಸ್.ಶಿವಕುಮಾರ, ಶಿವಲಿಂಗಪ್ಪ ಸೇರಿದಂತೆ ಉಭಯ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಕ್ಷೇತ್ರದ ಶಿಕ್ಷಕರು ಇದ್ದರು.

- - -

ಬಾಕ್ಸ್‌ * ಶಿಕ್ಷಣ ಇಲಾಖೆ ಅರಿಯದ ಸಚಿವರಿಂದ ದಿನಕ್ಕೊಂದು ಆದೇಶ: ವೈಎಎನ್‌ ಆಕ್ರೋಶ ದಾವಣಗೆರೆ: ಕಾಂಗ್ರೆಸ್ಸಿಗೂ ಶಿಕ್ಷಣ ಕ್ಷೇತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಅದರ ನಡವಳಿಕೆಯಿಂದಲೇ ಗೊತ್ತಾಗುತ್ತಿದೆ. ಹಾಗಾಗಿಯೇ ಈವರೆಗೂ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿಲ್ಲ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ. ವೈ.ಎ. ನಾರಾಯಣಸ್ವಾಮಿ ಹೇಳಿದರು.

ಶಿರಮಗೊಂಡನಹಳ್ಳಿ ಗ್ರಾಮದ ಸುಧಾ ವೀರೇಂದ್ರ ಪಾಟೀಲ್ ಸಮುದಾಯ ಭವನದಲ್ಲಿ ಶನಿವಾರ ವಿಪ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಳೆದೊಂದು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಸಾಕಷ್ಟು ಅವಾಂತರಗಳಾಗಿವೆ. ಶಿಕ್ಷಣ ಇಲಾಖೆ ಅರ್ಥ ಮಾಡಿಕೊಳ್ಳದ ಸಚಿವರಿಂದಾಗಿ ದಿನಕ್ಕೊಂದು ಆದೇಶ ಹೊರ ಬೀಳುತ್ತಿವೆ ಎಂದರು.

ಅಧಿಕಾರಿಗಳ ಮೇಲೆ ಸರ್ಕಾರಕ್ಕೆ ಹಿಡಿತ ಇಲ್ಲವಾಗಿದೆ. ಒಂದು ರೀತಿ ತುಘಲಕ್ ದರ್ಬಾರ್ ನಡೆಯುತ್ತಿದೆ. ಈಗ ಶಿಕ್ಷಕರು ಅನುಭವಿಸುತ್ತಿರುವ ಕಿರುಕುಳ, ಮಕ್ಕಳು ಅನುಭವಿಸುತ್ತಿರುವ ಆತಂಕಕ್ಕೆ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ. ಕಳಪೆ ಫಲಿತಾಂಶಕ್ಕೆ ಶಿಕ್ಷಕರನ್ನು ಹೊಣೆ ಮಾಡಿ ನೋಟಿಸ್ ಕೊಡಲಾಗುತ್ತಿದೆ. ಶಿಕ್ಷಕರ ವೇತನ ಕಡಿತಗೊಳಿಸಿ ಅನುದಾನಿತ ಶಾಲೆಗಳನ್ನು ಮುಚ್ಚಿಸುವ ಹುನ್ನಾರ ಇದರ ಹಿಂದೆ ಅಡಗಿದೆ ಎಂದು ಆರೋಪಿಸಿದರು.

ಸರ್ಕಾರದ ಹಣ ಉಳಿಸುವ ಯೋಚನೆಗೆ ಶಿಕ್ಷಣ ಕ್ಷೇತ್ರ ಹಾಗೂ ಶಿಕ್ಷಕರು ಬಲಿಯಾಗುತ್ತಿದ್ದಾರೆ. ಈಗ ಕಾಂಗ್ರೆಸಿಗರು ಫೀಲ್ಡ್‌ಗೆ ಇಳಿದು ಮನೆ ಮನೆ ಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ಶಿಕ್ಷಕ ಬಂಧುಗಳು ಎಚ್ಚರವಾಗಿರಬೇಕು. 4ನೇ ಬಾರಿಗೆ ಹೆಚ್ಚಿನ ಮತಗಳ ಅಂತರದಲ್ಲಿ ಮೊದಲ ಸುತ್ತಿನಲ್ಲೇ ನನ್ನನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಶಿಕ್ಷಣ ಕ್ಷೇತ್ರವು ಅಗಾಧವಾಗಿದೆ. 1.36 ಕೋಟಿ ವಿದ್ಯಾರ್ಥಿಗಳನ್ನು ರೂಪಿಸುವ ಇಲಾಖೆ ಇದು. ಕಳೆದ 20 ವರ್ಷದಿಂದ ನೀವು ನನ್ನನ್ನು ನೋಡಿದ್ದೀರಿ. ಮನೆ ಮಗನಂತೆ ಗೆಲ್ಲಿಸಿದ್ದೀರಿ. ನನ್ನ ಕೆಲಸ, ಪ್ರೀತಿಯನ್ನು ನೀವು ನೋಡಿದ್ದು, ಶಿಕ್ಷಕರ ಸಮಸ್ಯೆಗೆ ಪರಿಹಾರ ಒದಗಿಸುವ ಶಕ್ತಿ ಕೊಟ್ಟಿದ್ದೀರಿ. ನಾನು ಈವರೆಗೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಕಾರ್ಯ ನಿರ್ವಹಿಸಿದ್ದೇನೆ. ಯಾರನ್ನೂ ಅಮಾನವೀಯವಾಗಿ ನಡೆಸಿಕೊಂಡಿಲ್ಲ. 3 ಬಾರಿ ಗೆಲ್ಲಿಸಿರುವ ನಿಮ್ಮ ಋಣ ನನ್ನ ಮೇಲಿದೆ. ಆ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮುಂದೆಯೂ ಮಾಡುತ್ತೇನೆ ಎಂದು ಅವರು ಹೇಳಿದರು.

ಮತ ತಿರಸ್ಕೃತ ಆಗದಿರಲಿ:

ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಮಾತನಾಡಿ, ನಾರಾಯಣಸ್ವಾಮಿ ಶಿಕ್ಷಕರ ಕ್ಷೇತ್ರದ ಆಗುಹೋಗುಗಳಿಗೆ ಸ್ಪಂದಿಸಿದ್ದಾರೆ. ಜೆಡಿಎಸ್, ಬಿಜೆಪಿ ಪಕ್ಷದವರು ಜೂನ್ 3ರ ಮತದಾನ ದಿನದಂದು ನಾರಾಯಣಸ್ವಾಮಿಗೆ ಮತ ಹಾಕಿಸಲು ಶ್ರಮಿಸಬೇಕು. ದಾವಣಗೆರೆ ಕ್ಷೇತ್ರದಿಂದಲೇ ನಾರಾಯಣಸ್ವಾಮಿ ಗೆಲ್ಲುವಂತೆ ಮಾಡಬೇಕು. ಪ್ರಜ್ಞಾವಂತ ಮತದಾರರಾದ ಶಿಕ್ಷಕರ ಮತಗಳು ತಿರಸ್ಕೃತವಾಗದಂತೆ ಕಾಳಜಿ ವಹಿಸಬೇಕು. ಗೊಂದಲ ಮಾಡಿಕೊಳ್ಳದೇ ಮೊದಲ ಪ್ರಾಶಸ್ತ್ಯದ ಮತವನ್ನಷ್ಟೇ ಹಾಕಿರಿ. ಮೊದಲ ಸುತ್ತಿನಲ್ಲೇ ನಾರಾಯಣಸ್ವಾಮಿ ಜಯಗಳಿಸಬೇಕು ಎಂದು ಸಲಹೆ ನೀಡಿದರು.

- - - -25ಕೆಡಿವಿಜಿ15, 16:

ಪ್ರಚಾರ ಸಭೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಉದ್ಘಾಟಿಸಿದರು.