ಕುಕನೂರು ತಾಲೂಕಿನ ತಳಕಲ್ ಗ್ರಾಮದಲ್ಲಿ ಜರುಗುತ್ತಿರುವ ಪುರಾಣ ಕಾರ್ಯಕ್ರಮದಲ್ಲಿ ಅಂಗನವಾಡಿ ಶಿಕ್ಷಕಿಯರಿಗೆ ಸನ್ಮಾನಿಸಲಾಯಿತು.

ಕುಕನೂರು: ಕಲಿಕೆಯ ಭದ್ರ ಬುನಾದಿ ಆಗಿರುವ ಅಂಗನವಾಡಿಯಲ್ಲಿ ಶಿಕ್ಷಕಿಯರ ಶ್ರಮ ಅನನ್ಯ ಆಗಿದೆ ಎಂದು ತಳಕಲ್ಲ ಗ್ರಾಪಂ ಸಿಬ್ಬಂದಿ ಖಾಜಾಸಾಬ್ ಹೊರಪೇಟೆ ಹೇಳಿದರು.

ತಾಲೂಕಿನ ತಳಕಲ್ ಗ್ರಾಮದಲ್ಲಿ ಜರುಗುತ್ತಿರುವ ಪುರಾಣ ಕಾರ್ಯಕ್ರಮದಲ್ಲಿ ಅಂಗನವಾಡಿ ಶಿಕ್ಷಕಿಯರಿಗೆ ಸನ್ಮಾನಿಸಿ ಮಾತನಾಡಿದ ಅವರು, ಅಂಗನವಾಡಿ ಶಿಕ್ಷಕಿಯರು ಸಮಾಜದ ಭವಿಷ್ಯ ರೂಪಿಸುವ ಮಹತ್ತರ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಮಕ್ಕಳ ಜೀವನದ ಆರಂಭಿಕ ಹಂತದಲ್ಲಿಯೇ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ, ಶಿಸ್ತು, ಸ್ವಚ್ಛತೆ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಬೆಳೆಸುವಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಗ್ರಾಮೀಣ ಭಾಗದ ಮಕ್ಕಳ ಬೆಳವಣಿಗೆ ಹಾಗೂ ಅವರ ಉಜ್ವಲ ಭವಿಷ್ಯಕ್ಕಾಗಿ ಅಂಗನವಾಡಿ ಶಿಕ್ಷಕಿಯರು ಸಲ್ಲಿಸುತ್ತಿರುವ ಸೇವೆ ಅನನ್ಯವಾದುದು ಎಂದರು.

ಮುಖಂಡ ಅಬ್ಬಸಾಲಿ ಮುಂಡರಗಿ ಮಾತನಾಡಿ, ಅಂಗನವಾಡಿ ಶಿಕ್ಷಕಿಯರು ಗ್ರಾಮೀಣ ಭಾಗದಲ್ಲಿ ಮಕ್ಕಳ ಶಿಕ್ಷಣ ಮತ್ತು ಬೆಳವಣಿಗೆಗೆ ಭದ್ರ ಬುನಾದಿ ಹಾಕುತ್ತಿದ್ದಾರೆ. ಮಕ್ಕಳಿಗೆ ಕಲಿಕೆಯ ಆಸಕ್ತಿ ಮೂಡಿಸುವ ಜತೆಗೆ ಉತ್ತಮ ಅಭ್ಯಾಸ ಮತ್ತು ಸಂಸ್ಕಾರಗಳನ್ನು ಕಲಿಸುವ ಮೂಲಕ ಭವಿಷ್ಯದ ಉತ್ತಮ ನಾಗರಿಕರನ್ನು ರೂಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.

ಹಿರಿಯರಾದ ಶೀನಪ್ಪ ತಂಗೋಡಿ ಮಾತನಾಡಿ, ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಬಾಲ್ಯದ ಶಿಕ್ಷಣ ಬಹಳ ಮುಖ್ಯವಾಗಿದೆ. ಈ ಹಂತದಲ್ಲಿ ಅಂಗನವಾಡಿ ಶಿಕ್ಷಕಿಯರು ವಹಿಸುವ ಜವಾಬ್ದಾರಿ ಅಪಾರ. ಮಕ್ಕಳೊಂದಿಗೆ ಆತ್ಮೀಯವಾಗಿ ಬೆರೆತು, ಅವರ ಕಲಿಕೆ ಮತ್ತು ಬೆಳವಣಿಗೆಗೆ ಶ್ರಮಿಸುವ ಶಿಕ್ಷಕಿಯರ ಸೇವೆ ಗೌರವಕ್ಕೆ ಅರ್ಹವಾಗಿದೆ ಎಂದರು.

ಶ್ರೀ ಮಹಾದೇವ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿ, ಮಾತನಾಡಿದರು. ಪ್ರಮುಖರಾದ ಪಕ್ಕಪ್ಪ ಅಳವಂಡಿ, ಮಹೇಶ ವಾಲ್ಮೀಕಿ, ಪ್ರವೀಣಕುಮಾರ ಕರ್ಜಗಿ, ಮಂಜುನಾಥ ಬ್ಯಾಳಿ, ಮುತ್ತು ಕರ್ಜಗಿ, ಸತೀಶ ಬಂಗಾರಿ, ಹನುಮಂತ ನಿಟ್ಟಾಲಿ, ಮಂಜುನಾಥ ಚಿಲವಾಡಿಗಿ, ಸಂತೋಷ ತಂಗೋಡಿ, ಕಲ್ಲಯ್ಯ ಲಕಮಾಪುರಮಠ, ಬಸವರಾಜ ಗೋರಿ, ಬಸವರಾಜ ಬ್ಯಾಳಿ, ಪವನ, ಮಂಜುನಾಥ, ಶರಣಪ್ಪ, ಗೊವಿಂದ, ಶಿವುಕುಮಾರ ಹಾಗೂ ಭಕ್ತರಿದ್ದರು.