ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ ಕಾಯಕ ಶರಣರು, ಸವಿತಾ ಮಹರ್ಷಿ ಹಾಗೂ ಸಂತ ಸೇವಾಲಾಲ್ ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಶುಕ್ರವಾರ ನಡೆದ ಕಾಯಕ ಶರಣರ, ಶ್ರೀ ಸಂತ ಸೇವಾಲಾಲ್ ಹಾಗೂ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತಾಡಿದರು.ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಶರಣರು ಹಾಗೂ ಪವಾಡ ಪುರುಷರು ಶ್ರಮಿಸಿದ್ದು, ಈ ಮಹನೀಯರ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು ಎಂದು ನಗರಸಭೆ ಅಧ್ಯಕ್ಷರು ನುಡಿದರು.
ಸವಿತಾ ಸಮಾಜವನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಿದ್ದಾರೆ. ರಾಷ್ಟ್ರಕೂಟ, ವಿಜಯನಗರ ಚಾಲುಕ್ಯರ ಶಾಸನದಲ್ಲಿ ಸವಿತಾ ಸಮಾಜದವರ ಬಗ್ಗೆ ಉಲ್ಲೇಖವಿದೆ. ಅನೇಕ ಶಾಸನಗಳ ಮೇಲೆ ಸವಿತಾ ಸಮಾಜದ ಸಾದನಗಳಾದ ಕತ್ತಿ, ಕನ್ನಡಿ ಮತ್ತು ಕತ್ತರಿಗಳನ್ನು ಕೆತ್ತಲಾಗಿದೆ ಎಂದು ಅನಿತಾ ಪೂವಯ್ಯ ವಿವರಿಸಿದರು.ನಿವೃತ್ತ ಪ್ರಾಧ್ಯಾಪಕ ಬಿ.ಸಿ.ಶಂಕರಯ್ಯ ಮಾತನಾಡಿ, ಸವಿತಾ ಸಮಾಜವನ್ನು ಯಾವುದೇ ಮದುವೆ ಸೇರಿದಂತೆ ಶುಭ ಕಾರ್ಯಗಳಿಗೆ ಆಹ್ವಾನಿಸುತ್ತಾರೆ. ಸವಿತಾ ಸಮಾಜದವರು ಸಂಘಟಿತರಾಗಿ ಮುಖ್ಯವಾಹಿನಿಗೆ ಬರಬೇಕು ಎಂದರು. ಸಂತ ಸೇವಾ ಅವರು ಈಗಿನ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೆಳಗುತ್ತಿ ಹೋಬಳಿಯ ಸೂರಗೊಂಡನ ಕೊಪ್ಪ ಎಂಬಲ್ಲಿ ಜನಿಸಿದ್ದಾರೆ ಎಂದರು. ಸೂರಗೊಂಡನ ಕೊಪ್ಪವನ್ನು ಭಾಯಗಢ ಎಂದು ಕರೆಯಲಾಗುತ್ತದೆ. ಸಂತ ಸೇವಾಲಾಲರು ತಮ್ಮ ಲೀಲೆಗಳ ಹಾಗೂ ಪವಾಡಗಳ ಮೂಲಕ ಜನರ ಮನಸ್ಸಿನಲ್ಲಿ ಗುರುವಿನ ಸ್ಥಾನವನ್ನು ಪಡೆದಿದ್ದಾರೆ ಎಂದರು.
ಜಿಲ್ಲಾಧಿಕಾರಿ ವೆಂಕಟರಾಜ್ ಮಾತನಾಡಿ ಸಮಾಜ ಸುಧಾರಣೆಗಾಗಿ ಶ್ರಮಿಸಿದ ಕಾಯಕ ಶರಣರು, ಸಂತ ಸೇವಾಲಾಲ್ ಹಾಗೂ ಸವಿತಾ ಮಹರ್ಷಿಗಳು ಹೀಗೆ ಹಲವು ಮಹನೀಯರ ವಿಚಾರಧಾರೆಗಳನ್ನು ತಿಳಿದುಕೊಂಡು ಅಭಿವೃದ್ಧಿಯತ್ತ ಸಾಗಬೇಕೆಂದು ಸಲಹೆ ಮಾಡಿದರು. ಕಾಯಕ ಶರಣರು, ಸವಿತಾ ಮಹರ್ಷಿಗಳು ಹಾಗೂ ಸಂತ ಸೇವಾಲಾಲ್ ಅವರು ಕಾಯಕವೇ ಕೈಲಾಸ ಎಂಬುದನ್ನು ಸಾರಿದ್ದಾರೆ. ಬದುಕಿನ ಅವಧಿಯಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ ಎಂದರು.ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಕೆ.ಎಸ್.ದೊರೇಶ್, ತಾಲೂಕು ಅಧ್ಯಕ್ಷ ಮಧು, ಜಿಲ್ಲಾ ಆಯುಷ್ ಅಧಿಕಾರಿ ಡಾ.ರೇಣುಕಾದೇವಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಟರಾಜ್, ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಮುತ್ತುರಾಜ್, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಕಾರ್ಯಕ್ರಮ ಅಧಿಕಾರಿ ಕೃಷ್ಣಪ್ಪ, ವಿಕಲಚೇತನ ಅಧಿಕಾರಿ ನಿರ್ಮಲ, ಸವಿತಾ ಸಮಾಜದ ಪ್ರತಿನಿಧಿಗಳು ಇತರರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಾರಾದ ಚಿನ್ನಸ್ವಾಮಿ ಸ್ವಾಗತಿಸಿದರು. ಕಲಾವಿದರಾದ ಈ.ರಾಜು ಮತ್ತು ತಂಡದವರು ಪ್ರಾರ್ಥಿಸಿದರು, ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.