ಕೇಂದ್ರ ಸರ್ಕಾರದ ವಿರುದ್ಧ ಸಂಯುಕ್ತ ಸಂಘಟನೆಗಳ ಹೋರಾಟ

| Published : Feb 17 2024, 01:20 AM IST

ಕೇಂದ್ರ ಸರ್ಕಾರದ ವಿರುದ್ಧ ಸಂಯುಕ್ತ ಸಂಘಟನೆಗಳ ಹೋರಾಟ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಬಿಜೆಪಿ ಸರ್ಕಾರ, ದುಡಿಯುವ ಜನರ ಜೀವನದ ಮೇಲೆ ಅತ್ಯಂತ ಕ್ರೂರವಾದ ದಾಳಿ ನಡೆಸುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಧಾರವಾಡ: ಕೇಂದ್ರ ಬಿಜೆಪಿ ಸರ್ಕಾರದ ಕಾರ್ಮಿಕ- ರೈತ ವಿರೋಧಿ, ಜನ ವಿರೋಧಿ ಹಾಗೂ ಬಂಡವಾಳಶಾಹಿಗಳ ಪರವಾದ ನೀತಿಗಳನ್ನು ವಿರೋಧಿಸಿ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ ಜಂಟಿಯಾಗಿ ಶುಕ್ರವಾರ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಿ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಸಿದವು.

ಕಾಂಗ್ರೆಸ್ ಸರ್ಕಾರ 1991ರಲ್ಲಿ ಜಾರಿಗೆ ತಂದ ಸಾಮ್ರಾಜ್ಯಶಾಹಿ- ಬಂಡವಾಳಶಾಹಿ ಪರವಾದ ಜಾಗತೀಕರಣ ನೀತಿಗಳನ್ನೇ ಕಳೆದ ಒಂದು ದಶಕದಿಂದ ಅತ್ಯಂತ ವೇಗವಾಗಿ, ಆಕ್ರಮಣಕಾರಿಯಾಗಿ ಜಾರಿಗೆ ತರುತ್ತಿರುವ ಪ್ರಸಕ್ತ ಕೇಂದ್ರ ಬಿಜೆಪಿ ಸರ್ಕಾರ, ದುಡಿಯುವ ಜನರ ಜೀವನದ ಮೇಲೆ ಅತ್ಯಂತ ಕ್ರೂರವಾದ ದಾಳಿ ನಡೆಸುತ್ತಿದೆ. ಪ್ರಜಾಪ್ರಭುತ್ವದ ಹೆಸರಲ್ಲಿ ದುಡಿಯುವ ಜನರು ಇಂದು ನಿರ್ದಯಿ ಶೋಷಣೆಗೆ ಒಳಗಾಗಿದ್ದಾರೆ. ಜನ ಸಂಖ್ಯೆಯ ಕೇವಲ ಶೇ. 5ರಷ್ಟು ಇರುವ ಕಾರ್ಪೋರೇಟ್ ಮಾಲೀಕರು, ದುಡಿಯುವ ಜನರು ಕಠಿಣ ಶ್ರಮದಿಂದ ಸೃಷ್ಟಿಸಿದ ಶೇ. 60ರಷ್ಟು ಆಸ್ತಿಯನ್ನು ಕಬಳಿಸಿದ್ದಾರೆ. ಮತ್ತೊಂದೆಡೆ ಸರ್ಕಾರಗಳು ಸಂಪೂರ್ಣವಾಗಿ ಕಾರ್ಪೋರೇಟ್ ಮಾಲೀಕರ ಹಿತ ಕಾಪಾಡಿವೆ.

ದುಡಿಯುವ ಜನ, ವಿದ್ಯಾರ್ಥಿ, ಮಹಿಳೆ, ನಿರುದ್ಯೋಗಿ ಯುವಕರ ಹಾಗೂ ರೈತರ ಪರಿಸ್ಥಿತಿ, ಕಲ್ಪನೆಗೂ ಮೀರಿ ಬಿಗಡಾಯಿಸುತ್ತಿದೆ. ಚುನಾವಣೆಗೂ ಮೊದಲು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ತಮ್ಮ ಪ್ರಣಾಳಿಕೆಯಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗದ ಸೃಷ್ಟಿ, ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ, ಡಾ. ಸ್ವಾಮಿನಾಥನ್ ರವರ ಶಿಫಾರಸ್ಸಿನಂತೆ ಬೆಂಬಲ ಬೆಲೆಯ ಕಾನೂನು ರಚಿಸುವುದಾಗಿ ಭರವಸೆ ನೀಡಿತ್ತು. ಆದರೆ `ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್’ ಎಂದು ಜನಸಾಮಾನ್ಯರ ಕೊಂಡುಕೊಳ್ಳುವ ಸಾಮರ್ಥ್ಯವನ್ನು ಕುಗ್ಗಿಸಿ, ಆಹಾರ, ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಅನುದಾನಗಳನ್ನು ಹೆಚ್ಚಳ ಮಾಡುವ ಬದಲಿಗೆ ಅನುದಾನ ಕಡಿತ ಮಾಡಿ ಆರೋಗ್ಯ, ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗೀಕರಣ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಬಿ.ಎನ್‌. ಪೂಜಾರಿ, ಬಿ.ಐ. ಈಳಿಗೇರ, ಎ.ಎಂ. ಖಾನ್, ಗಂಗಾಧರ ಬಡಿಗೇರ, ಲಕ್ಷ್ಮಣ ಜಡಗನ್ನವರ, ದೀಪಾ ಧಾರವಾಡ, ನಾಗಪ್ಪ ಉಂಡಿ, ರವಿರಾಜ್ ಕಂಬಳಿ, ಲಕ್ಷ್ಮಣ ಬಕ್ಕಾಯಿ, ಅಶೋಕ ಬಂಡಾರಿ, ಮಹದೇವ ಕಾಂಬಳೆ, ಷರೀಫ್ ಅಮ್ಮಿನಬಾವಿ ಮತ್ತಿತರರು ಇದ್ದರು.