ಭಾರತದ ಚುನಾವಣಾ ಆಯೋಗವು ಎಡವೂ ಅಲ್ಲ, ಬಲವೂ ಅಲ್ಲ. ಸಂವಿಧಾನದ ಚೌಕಟ್ಟಿನಲ್ಲಿ ಪಾರದರ್ಶಕವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಭಾರತದ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್‌ ಹೇಳಿದ್ದಾರೆ.

ಮೋಹನ ಹಂಡ್ರಂಗಿ

 ನವದೆಹಲಿ: ಭಾರತದಲ್ಲಿ ಚುನಾವಣೆಗಳು ದೇಶದ ಸಂವಿಧಾನ, ಚುನಾವಣಾ ಕಾನೂನುಗಳು ಮತ್ತು ಕಾಲಕಾಲಕ್ಕೆ ಹೊರಡಿಸಲಾದ ಭಾರತ ಚುನಾವಣಾ ಆಯೋಗದ(ಇಸಿಐ) ಸೂಚನೆಗಳ ಪ್ರಕಾರ ನಡೆಯುತ್ತವೆ. ಭಾರತದ ಚುನಾವಣಾ ಆಯೋಗವು ಎಡವೂ ಅಲ್ಲ, ಬಲವೂ ಅಲ್ಲ. ಸಂವಿಧಾನದ ಚೌಕಟ್ಟಿನಲ್ಲಿ ಪಾರದರ್ಶಕವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಭಾರತದ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್‌ ಹೇಳಿದ್ದಾರೆ.

ಚುನಾವಣಾ ಆಯೋಗದಿಂದ ದೆಹಲಿಯ ‘ಭಾರತದ ಪ್ರಜಾಪ್ರಭುತ್ವ ಮತ್ತು ಚುನಾವಣಾ ನಿರ್ವಹಣೆಯ ಅಂತಾರಾಷ್ಟ್ರೀಯ ಸಂಸ್ಥೆ’ಯ (ಐಐಐಡಿಇಎಂ) ಸಭಾಂಗಣದಲ್ಲಿ ‘ಭಾಗಿದಾರರನ್ನು ಸಂಪರ್ಕಿಸುವುದು, ಪ್ರಜಾಪ್ರಭುತ್ವವನ್ನು ಬಲಪಡಿಸುವುದು: ಚುನಾವಣೆಗಳಲ್ಲಿ ಮಾಧ್ಯಮದ ಪಾತ್ರ’ ವಿಷಯ ಕುರಿತು ಆಯೋಜಿಸಿದ್ದ ಪ್ರಥಮ ‘ಅಖಿಲ ಭಾರತ ಮಾಧ್ಯಮ ಸಮ್ಮೇಳನ’ದಲ್ಲಿ ಮಾತನಾಡಿದರು.

ದೇಶದ ಮತದಾರರ ಪಟ್ಟಿ ಜೀವಂತ ದಾಖಲೆ:

ದೇಶದಲ್ಲಿ ಚುನಾವಣಾ ಪ್ರಕ್ರಿಯೆಗಳಲ್ಲಿ ಭಾಗಿಯಾಗಿರುವ ಪಾಲುದಾರರಿಂದ ಸಂಪೂರ್ಣ ಚುನಾವಣಾ ಪ್ರಕ್ರಿಯೆಯನ್ನು ಏಕಕಾಲದಲ್ಲಿ ಲೆಕ್ಕಪರಿಶೋಧಿಸಲಾಗುತ್ತದೆ. ಸುಮಾರು 95 ಕೋಟಿ ಭಾರತೀಯ ಮತದಾರರನ್ನು ಹೊಂದಿರುವ ಭಾರತದ ಮತದಾರರ ಪಟ್ಟಿ ಕಾಲಕಾಲಕ್ಕೆ ಕ್ರಿಯಾತ್ಮಕವಾಗಿ ವಿಕಸನಗೊಳ್ಳುತ್ತಿರುವ ಜೀವಂತ ದಾಖಲೆಯಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಹೇಳಿದರು.

ಮತದಾರರ ಪಟ್ಟಿ ತಯಾರಿಕೆಯ ಆಧಾರಸ್ತಂಭ:

ಮತದಾರರ ಪಟ್ಟಿ ತಯಾರಿಕೆ ಪ್ರಕ್ರಿಯೆಯಲ್ಲಿ ಬೂತ್‌ ಮಟ್ಟದ ಅಧಿಕಾರಿಗಳು(ಬಿಎಲ್‌ಒ) ಮತ್ತು ಬೂತ್‌ ಮಟ್ಟದ ಏಜೆಂಟ್‌ಗಳು(ಬಿಎಲ್‌ಎ) ಆಧಾರಸ್ತಂಭವಾಗಿದ್ದಾರೆ. ಪ್ರಸ್ತುತ ದೇಶದಲ್ಲಿ 12 ಲಕ್ಷಕ್ಕೂ ಹೆಚ್ಚಿನ ಬಿಎಲ್‌ಒಗಳು ಮತ್ತು 15 ಲಕ್ಷಕ್ಕೂ ಹೆಚ್ಚು ಬಿಎಲ್‌ಎಗಳು ಮತದಾರರ ಪಟ್ಟಿ ತಯಾರಿಕೆ ಪ್ರಕ್ರಿಯೆಯಲ್ಲಿ ಸಮಕಾಲೀನ ಲೆಕ್ಕಪರಿಶೋಧಕರಾಗಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಅತಿಹೆಚ್ಚು ಮತದಾನ:

ದೇಶದಲ್ಲಿ ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ಈವರೆಗೆ ಅತಿ ಹೆಚ್ಚು ಮಂದಿ ಮತದಾನದಲ್ಲಿ ಭಾಗವಹಿಸಿರುವುದು ಭಾರತೀಯ ಮತದಾರರು ದೇಶದ ಚುನಾವಣಾ ವ್ಯವಸ್ಥೆ ಮತ್ತು ಭಾರತೀಯ ಪ್ರಜಾಪ್ರಭುತ್ವದ ಚೈತನ್ಯದ ಮೇಲೆ ಹೊಂದಿರುವ ನಂಬಿಕೆಗೆ ಪುರಾವೆ. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್‌) ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ದೇಶದ ಎಲ್ಲಾ ಮತದಾರರಿಗೂ ಇದೇ ವೇಳೆ ಅವರು ಕೃತಜ್ಞತೆ ಸಲ್ಲಿಸಿದರು.

ಚುನಾವಣಾ ಪ್ರಕ್ರಿಯೆಗಳ ವಿವಿಧ ಹಂತಗಳ ಬಗ್ಗೆ ಮತ್ತು ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಪ್ರಮುಖ ಪಾಲುದಾರರನ್ನು ಒಳಗೊಂಡಂತೆ ಅತ್ಯಂತ ಪಾರದರ್ಶಕವಾಗಿ ಭಾರತದಲ್ಲಿ ಚುನಾವಣೆಗಳನ್ನು ಹೇಗೆ ನಡೆಸಲಾಗುತ್ತದೆ ಎಂಬುದರ ಕುರಿತು ತಿಳಿವಳಿಕೆ ಉತ್ತೇಜಿಸುವುದು ಈ ಸಮ್ಮೇಳನದ ಗುರಿ ಎಂದು ಹೇಳಿದರು.

ತಜ್ಞರಿಂದ ವಿಷಯ ಮಂಡನೆ:

ಈ ಸಮ್ಮೇಳನದಲ್ಲಿ 1950 ಮತ್ತು 1951ರ ಜನತಾ ಪ್ರಾತಿನಿಧ್ಯ ಕಾಯ್ದೆಗಳು, ಕಾಲಕಾಲಕ್ಕೆ ಭಾರತೀಯ ಚುನಾವಣಾ ಆಯೋಗ ಹೊರಡಿಸಿದ ಸೂಚನೆಗಳು, ಇಸಿಐಎನ್‌ಇಟಿ ವೇದಿಕೆ ಮತ್ತು ಚುನಾವಣೆಗಳಲ್ಲಿ ತಂತ್ರಜ್ಞಾನದ ಪಾತ್ರ, ಚುನಾವಣೆಗಳ ಸಮಯದಲ್ಲಿ ಮಾಧ್ಯಮಗಳು ಪ್ರಕಟಿಸುವ/ಪ್ರಸಾರ ಮಾಡುವ ಸುದ್ದಿಗಳಿಗೆ ಸಂಬಂಧಿಸಿದ ಸಾಂವಿಧಾನಿಕ ನಿಬಂಧನೆಗಳು ಮತ್ತು ಕಾನೂನುಗಳ ಕುರಿತು ತಜ್ಞರು ವಿಷಯ ಮಂಡಿಸಿದರು.ಪಾತ್ರ, ಜವಾಬ್ದಾರಿಗಳ ಬಗ್ಗೆ ಮಾಹಿತಿ:

ಬೂತ್ ಮಟ್ಟದ ಏಜೆಂಟ್‌ಗಳು(ಬಿಎಲ್‌ಎ) ಪೋಲಿಂಗ್ ಏಜೆಂಟ್‌ಗಳು ಮತ್ತು ಎಣಿಕೆ ಏಜೆಂಟ್‌ಗಳ ಪಾತ್ರಗಳು ಮತ್ತು ಜವಾಬ್ದಾರಿಗಳ ಕುರಿತು ಸಮ್ಮೇಳನದಲ್ಲಿ ಬೆಳಕು ಚೆಲ್ಲಲಾಯಿತು. ಭಾರತದಲ್ಲಿ ಚುನಾವಣೆಗಳ ಏಕಕಾಲಿಕ ಲೆಕ್ಕಪರಿಶೋಧಕರಾಗಿ ಚುನಾವಣೆಯ ವಿವಿಧ ಹಂತಗಳಲ್ಲಿ ಪಾರದರ್ಶಕತೆ ಖಚಿತಪಡಿಸಿಕೊಳ್ಳುವುದು, ರಾಜಕೀಯ ಪಕ್ಷದ ಭಾಗವಹಿಸುವಿಕೆ ಸುಗಮಗೊಳಿಸುವುದು ಮತ್ತು ಚುನಾವಣಾ ಪ್ರಕ್ರಿಯೆ ಬಲಪಡಿಸುವಲ್ಲಿ ಅವರ ಪಾತ್ರಗಳ ಬಗ್ಗೆ ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳು ಮಾಹಿತಿ ನೀಡಿದರು.ಪ್ರಾತ್ಯಕ್ಷಿಕೆ ಮೂಲಕ ವಿವರಣೆ:

ಮತದಾರರ ಪಟ್ಟಿ ತಯಾರಿಕೆ, ಮತದಾನ ಪ್ರಕ್ರಿಯೆ, ಮತ ಎಣಿಕೆ ಪ್ರಕ್ರಿಯೆ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಪ್ರಾತ್ಯಕ್ಷಿಗೆ ಮುಖಾಂತರ ವಿವರಿಸಲಾಯಿತು. ಈ ಅಖಿಲ ಭಾರತ ಮಾಧ್ಯಮ ಸಮ್ಮೇಳನದಲ್ಲಿ ದೇಶದ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 380ಕ್ಕೂ ಹೆಚ್ಚಿನ ಮಾಧ್ಯಮ ಪ್ರತಿನಿಧಿಗಳು ಭಾಗಿಯಾಗಿದ್ದರು.