ಸಾರಾಂಶ
ರಾಜ್ಯದಲ್ಲಿ ಜಾರಿಯಲ್ಲಿರುವ ಪಂಚ ಗ್ಯಾರಂಟಿ ಯೋಜನೆಗಳಲ್ಲಿ 100ಕ್ಕೆ100ರಷ್ಟು ಶಕ್ತಿ ಯೋಜನೆ ಯಶಸ್ವಿಯಾಗಿದ್ದು, ರಾಜ್ಯದ 1.30 ಕೋಟಿ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಗದಗ ಜಿಲ್ಲಾಧ್ಯಕ್ಷ ಬಿ.ಬಿ. ಅಸೂಟಿ ಹೇಳಿದರು.
ಮುಂಡರಗಿ: ರಾಜ್ಯದಲ್ಲಿ ಜಾರಿಯಲ್ಲಿರುವ ಪಂಚ ಗ್ಯಾರಂಟಿ ಯೋಜನೆಗಳಲ್ಲಿ 100ಕ್ಕೆ100ರಷ್ಟು ಶಕ್ತಿ ಯೋಜನೆ ಯಶಸ್ವಿಯಾಗಿದ್ದು, ರಾಜ್ಯದ 1.30 ಕೋಟಿ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಗದಗ ಜಿಲ್ಲಾಧ್ಯಕ್ಷ ಬಿ.ಬಿ. ಅಸೂಟಿ ಹೇಳಿದರು.
ಅವರು ಮಂಗಳವಾರ ಪಟ್ಟಣದ ತಾಲೂಕು ಪಂಚಾಯತಿ ಸಮರ್ಥ ಸೌಧದಲ್ಲಿ ಜರುಗಿದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಈಗಾಗಲೇ ರಾಜ್ಯದ 1.30 ಕೋಟಿ ಫಲಾನುಭವಿಗಳಿಗೆ ತಲುಪಿಸಲಾಗಿದೆ. ಸರ್ಕಾರ ಈ ಪಂಚ ಗ್ಯಾರಂಟಿಗಳಿಗೆ ಪ್ರತಿ ವರ್ಷ 58 ಸಾವಿರ ಕೋಟಿ ಹಣವನ್ನು ಕಾಯ್ದಿರಿಸಿ ಖರ್ಚು ಮಾಡಲಾಗುತ್ತಿದೆ. ಇದರಿಂದಾಗಿ ಬಡವರ ಸಂಖ್ಯೆ ಕಡಿಮೆಯಾಗಿ ಆರ್ಥಿಕ ಮಟ್ಟ ಹೆಚ್ಚಾಗಿದೆ. ಅದರಿಂದಾಗಿ ರಾಜ್ಯದ ಜಿಡಿಪಿ ದರ ಹೆಚ್ಚಾಗಿದೆ. ಇದರ ಕೀರ್ತಿ ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರಿಗೆ ಹಾಗೂ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರಿಗೆ ಸಲ್ಲುತ್ತದೆ ಎಂದರು.ಈ ಗೃಹಲಕ್ಷ್ಮಿ ಹಣದಿಂದ ಅನೇಕ ಮಹಿಳೆಯರು ರೊಟ್ಟಿ ಮಸಿನ್, ಬಟ್ಟೆ ಅಂಗಡಿ, ಬಂಗಾರ ಖರೀದಿ, ಶಾಲಾ ವಿದ್ಯಾಭ್ಯಾಸ ಸೇರಿ ಜನೋಪಯೋಗಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ನಮ್ಮ ಜಿಲ್ಲೆಯಲ್ಲಿ 100ಕ್ಕೆ 100 ಪ್ರಗತಿ ಸಾಧಿಸುವ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಜಿಎಸ್ಟಿ ಸಮಸ್ಯೆಯಿಂದಾಗಿ ಸುಮಾರು 3 ಸಾವಿರ ಫಲಾನುಭವಿಗಳು ಯೋಜನೆಯಿಂದ ಹೊರಗುಳಿದಿದ್ದು, ಅವರನ್ನು ಯೋಜನೆಗೆ ಒಳಪಡಿಸಿದರೆ ನಾವು ಶೇ.99.5ರಷ್ಟು ಸಾಧನೆ ಮಾಡಬಹುದು ಎಂದರು.ಮುಂಡರಗಿ ತಾಲೂಕಿನಲ್ಲಿ ಈಗಾಗಲೇ ಶೇ.97-98 ರಷ್ಟಾಗಿದ್ದು, ಇನ್ನು ಮುಂದೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಫಲಾನುಭವಿಗಳ ಸಭೆ ನಡೆಸಿ ಯೋಜನೆಯಿಂದ ಹೊರಗುಳಿದವರನ್ನು ಸೇರಿಸಿ ಇನ್ನಷ್ಟು ಸಾಧನೆ ಮಾಡಬಹುದು ಎಂದರು.ಈ ಸಂದರ್ಭದಲ್ಲಿ ಪಂಚ ಗ್ಯಾರಂಟಿಗಳ ಎಲ್ಲ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದು, ತಮ್ಮ ಇಲಾಖೆಗಳ ಪ್ರಗತಿ ಮಾಹಿತಿ ನೀಡಿದರು. ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಡಿ.ಡಿ. ಮೋರನಾಳ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿ ಸದಸ್ಯರಾದ ಈಶ್ವರ ಹುಣಸಿಕಟ್ಟಿ, ಪುಲಕೇಶಿಗೌಡ ಪಾಟೀಲ, ತಾಲೂಕಾ ಸದಸ್ಯರಾದ ರಾಮಣ್ಣ ಮೇಗಲಮನಿ, ಕಾಶಪ್ಪ ಹೊನ್ನೂರ, ಭುವನೇಶ್ವರಿ ಕಲ್ಲಕುಟುಗರ್, ಉಮೇಶ ಕಲಾಲ, ಗೀತಾ ನಾಡಗೌಡರ, ನಿಂಗಪ್ಪ ಮಜ್ಜಗಿ, ನಾಗರಾಜ ಸಜ್ಜನರ, ಮಹೇಶ ದ್ರಾಕ್ಷಿ, ಸುರೇಶ ಮಾಳಗಿಮನಿ, ಶರಣಪ್ಪ ಮಲ್ಲಾಪುರ, ವಿಶ್ವನಾಥ ಪಾಟೀಲ ಉಪಸ್ಥಿತರಿದ್ದರು. ತಾಪಂ ಇಒ ಸ್ವಾಗತಿಸಿ, ಎಚ್.ಎಂ. ಕಾತರಕಿ ವಂದಿಸಿದರು.