ಇಡೀ ಶೈಕ್ಷಣಿಕ ವ್ಯವಸ್ಥೆ ಹಣದ ಸುತ್ತಲೂ ಸುತ್ತುತ್ತಿದೆ: ಕನಕಗುರುಪೀಠದ ನಿರಂಜನಾನಂದ ಶ್ರೀಗಳು

| Published : Feb 12 2024, 01:33 AM IST

ಇಡೀ ಶೈಕ್ಷಣಿಕ ವ್ಯವಸ್ಥೆ ಹಣದ ಸುತ್ತಲೂ ಸುತ್ತುತ್ತಿದೆ: ಕನಕಗುರುಪೀಠದ ನಿರಂಜನಾನಂದ ಶ್ರೀಗಳು
Share this Article
  • FB
  • TW
  • Linkdin
  • Email

ಸಾರಾಂಶ

ಇಡೀ ಶೈಕ್ಷಣಿಕ ವ್ಯವಸ್ಥೆ ಹಣದ ಸುತ್ತಲೂ ಸುತ್ತುತ್ತಿದೆ. ಇಂತಹ ಶೈಕ್ಷಣಿಕ ವ್ಯವಸ್ಥೆಗಳಿಂದ ಸಮಾಜ ಮತ್ತು ದೇಶ ಏನನ್ನೂ ನಿರೀಕ್ಷಿಸಲು ಸಾಧ್ಯ.

ವಾರ್ಷಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಬ್ಯಾಡಗಿ

ಇಡೀ ಶೈಕ್ಷಣಿಕ ವ್ಯವಸ್ಥೆ ಹಣದ ಸುತ್ತಲೂ ಸುತ್ತುತ್ತಿದೆ. ಇಂತಹ ಶೈಕ್ಷಣಿಕ ವ್ಯವಸ್ಥೆಗಳಿಂದ ಸಮಾಜ ಮತ್ತು ದೇಶ ಏನನ್ನೂ ನಿರೀಕ್ಷಿಸಲು ಸಾಧ್ಯ? ಬದುಕುವುದಕ್ಕೂ ಒಂದು ರೀತಿ ನೀತಿಯಿದೆ, ಅದು ಹುಟ್ಟಿದ ಮನೆಯಲ್ಲಿ ಸಿಗದಿದ್ದರೇ ಕನಿಷ್ಠ ಶಾಲೆಗಳಲ್ಲಾದರೂ ಸಿಗಲೇಬೇಕು, ಇಲ್ಲದಿದ್ದರೇ ಮುಂದೊಂದು ದಿವಸ ಕಲಿತವರು ಅಬ್ಬೇಪಾರಿಗಳು, ಕಲಿಸಿದವರು ಆನಾಥಶ್ರಮದ ಸದಸ್ಯರಾಗಬೇಕಾಗುತ್ತದೆ ಎಂದು ಕನಕಗುರುಪೀಠದ ನಿರಂಜನಾನಂದಶ್ರೀಗಳು ಖೇದ ವ್ಯಕ್ತಪಡಿಸಿದರು.

ತಾಲೂಕಿನ ಕಾಗಿನೆಲೆಯಲ್ಲಿ ಕನಕಗುರುಪೀಠದ ಆವರಣದಲ್ಲಿ ಎಸ್ಸೆಸ್ಸಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣ ಸಂಸ್ಥೆಗಳು ಉದ್ದಿಮೆಗಳಾಗುತ್ತಿವೆ. ವೇತನಕ್ಕೆ ತಕ್ಕಂತೆ ಪಾಠ ಹೇಳದಿರುವ ಶಿಕ್ಷಕ, ಹಣಗಳಿಸುವುದಕ್ಕಾಗಿ ಶಿಕ್ಷಣ ಕೊಡಿಸುತ್ತಿರುವ ಪಾಲಕರ ಮನಸ್ಥಿತಿಯಿಂದ ಶೈಕ್ಷಣಿಕ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಬಂಡವಾಳ ಹೂಡಿ ಸರ್ಟಿಫಿಕೇಟ್ ಪಡೆಯುವ ಪದವೀಧರ ಇನ್ಯಾವ ಅನ್ವೇಷಣೆ ಕುರಿತು ಚಿಂತಿಸಲು ಸಾಧ್ಯ ಎಂದು ಪ್ರಶ್ನಿಸಿದರು.

ಭೂತಕಾಲದಲ್ಲಿನ ಸಂಗತಿಗಳು, ವರ್ತಮಾನದಲ್ಲಿ ಚಿಂತನೆಗೊಳಪಡಬೇಕು. ಅಂದಾಗ ಮಾತ್ರ ಭವಿಷ್ಯದ ಬದುಕಿಗೆ ಪರಿಹಾರ ಕಂಡುಹಿಡಿಯಲು ಸಾಧ್ಯ, ಇದನ್ನೇ ನಾವೂ ಸಹ ಶಿಕ್ಷಣವೆಂದು ಪ್ರತಿಪಾದಿಸುತ್ತಿದ್ದೇವೆ, ಆದರೆ ವಾಸ್ತವ ಬದುಕಿಗೆ ಮತ್ತು ವೈಜ್ಞಾನಿಕ ಚಿಂತನೆಗಳಿಗೆ ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅವಕಾಶ ನೀಡುತ್ತಿಲ್ಲ, ಶಿಕ್ಷಣದ ಉದ್ದೇಶ ಇಂದಿನಿಂದಲೇ ಬದಲಾವಣೆ ಆಗಬೇಕಾಗಿದೆ ಇಲ್ಲದಿದ್ದರೇ ಮುಂದೆ ಸಾಧ್ಯವಿಲ್ಲ ಎಂದರು.

ಮಕ್ಕಳು ಶಿಕ್ಷಣದ ಮೌಲ್ಯವನ್ನು ತಿಳಿದು ಅರ್ಥಮಾಡಿಕೊಳ್ಳಬೇಕು, ಆದರೆ ಕೇವಲ ಪಠ್ಯಗಳಿಗೆ ಸೀಮಿತವಾಗುತ್ತಿದ್ದಾರೆ. ಬದುಕಿನ ಸವಾಲು ಮತ್ತು ಪರೀಕ್ಷೆಗಳಿಗೆ ಪುಸ್ತಕಗಳಲ್ಲಿ ಉತ್ತರವಿಲ್ಲ. ಅಷ್ಟೇ ಏಕೆ ಶಿಕ್ಷಕರಿಂದಲೂ ಮಾರ್ಗದರ್ಶನವಿಲ್ಲ, ಹೀಗಾಗಿ ಯಾವ ಉದ್ದೇಶಕ್ಕೆ ಶೈಕ್ಷಣಿಕ ವ್ಯವಸ್ಥೆ ಹುಟ್ಟುಹಾಕಲಾಗಿದೆ ಎಂಬುದೇ ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ ಎಂದರು.

ಕನಕ ಗುರುಪೀಠದ ಕಿರಿಯ ಶ್ರೀ ಅಮೋಘ ಸಿದ್ದೇಶ್ವರ ಶ್ರೀಗಳು ಮಾತನಾಡಿ, ಸಮಾಜದ ಪ್ರತಿಯೊಂದು ವರ್ಗದ ಮಕ್ಕಳಿಗೆ ಶಿಕ್ಷಣದಲ್ಲಿ ಸಮಾನ ಅವಕಾಶ ಸಿಗುವಂತೆ ನೋಡಿಕೊಳ್ಳಬೇಕು, ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡದಿದ್ದರೂ ಪರವಾಗಿಲ್ಲ, ಆದರೆ ಭಾರತದಂತಹ ಸಾಂಸ್ಕೃತಿಕ ದೇಶದಲ್ಲಿ ಧರ್ಮ ಮತ್ತು ಶಿಕ್ಷಣ ಎರಡನ್ನೂ ಸಮನಾಗಿ ತೆಗೆದುಕೊಂಡು ಹೋಗುವ ಶೈಕ್ಷಣಿಕ ವ್ಯವಸ್ಥೆ ಅವಶ್ಯವಿದೆ. ಇದರಲ್ಲಿ ನಾವು ಎಡವುತ್ತಿರುವುದರಿಂದ ಪಾಶ್ಚಾತ್ಯ ಸಂಸ್ಕೃತಿ ಸದ್ದಿಲ್ಲದೇ ನುಸುಳುತ್ತಿದ್ದು ಕ್ರಮೇಣವಾಗಿ ಅಧಿಪತ್ಯ ಸಾಧಿಸುತ್ತಿದೆ ಎಂದರು.

ಡಾ. ಓಂಕಾರ್‌ ನಾಯ್ಕ ಉಪನ್ಯಾಸ ನೀಡಿದರು. ಎಸ್‌ಎಫ್‌ಎನ್ ಗಾಜಿಗೌಡ್ರ, ರಾಜೇಂದ್ರ ಹಾವೇರಣ್ಣವರ, ಮಾಲತೇಶ ಬಣಕಾರ, ಎಸ್.ಎನ್. ಮಾತನವರ, ಮಾರುತಿ ಹರಿಹರ, ಸದಾನಂದಗೌಡ ಪಾಟೀಲ, ಹಳದಪ್ಪ ಕಂಬಳಿ, ಪಿಎಸ್‌ಐ ಭಾರತಿ ಹಾಗೂ ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು. ಪ್ರಾಚಾರ್ಯ ಬೀರಪ್ಪ ಸ್ವಾಗತಿಸಿ, ಮುಖ್ಯಶಿಕ್ಷಕ ರವಿ ಆನ್ವೇರಿ ವಂದಿಸಿದರು.