ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯದ ಅತಿ ದೊಡ್ಡ ಕೊಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ತಾಲೂಕಿನ ಆಲಕೆರೆ ಗ್ರಾಮದ ಶ್ರೀವೀರಭದ್ರೇಶ್ವರ ಕೊಂಡೋತ್ಸವ ಬುಧವಾರ ಮುಂಜಾನೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು.ಶ್ರೀ ವೀರಭದ್ರೇಶ್ವರಸ್ವಾಮಿಗೆ ಜೈ... ಕಪನಿ ನಂಜೇಶ್ವರಕೀ ಜೈ... ಎಂಬ ಘೋಷಣೆಯೊಂದಿಗೆ ಕೊಂಡ ಹಾಯುವ ವೀರಗಾಸೆ ರೇಣುಕಾಸ್ವಾಮಿ ಮತ್ತು ವೀರಭದ್ರೇಶ್ವರಸ್ವಾಮಿ ಪೂಜೆ ಹೊತ್ತ ಗುಡ್ಡಪ್ಪ ಕಾಂತೇಶ್‌ಕುಮಾರ್ ಅವರನ್ನು ನೆರೆದಿದ್ದ ಭಕ್ತರು ಉರಿದುಂಬಿಸಿದರು.
ಕೀಲಾರ ಮತ್ತು ಆಲಕೆರೆ ಗ್ರಾಮದ ಆರಾಧ್ಯದೈವ ವೀರಭದ್ರೇಶ್ವರ ಹಬ್ಬವು ಸತತ ಮೂರನೇ ದಿನವೂ ಸಂಭ್ರಮ ಸಡಗರದಿಂದ ನಡೆಯುತ್ತಿದ್ದರೆ, ಕೊಂಡ ಹಾಯುವುದನ್ನು ಕಣ್ತುಂಬಿಕೊಳ್ಳಲು ಭಕ್ತರು ಸಾಗರದಂತೆ ದೇವಾಲಯದ ಆವರಣಕ್ಕೆ ಬಂದು ಜಮಾವಣೆಗೊಳ್ಳುತ್ತಿದ್ದರು.ಅತ್ತ ೭೨ ಉದ್ದದ ಅಗ್ನಿಕೊಂಡದ ಬಳಿ ಸಾವಿರಾರು ಭಕ್ತರು ಕೊಂಡ ಹಾಯುವುದನ್ನು ನೋಡಲು ರಾತ್ರಿಯಿಡೀ ಕಾದು ಕುಳಿತಿದ್ದರೆ, ಮಂಗಳವಾರ ಸಂಜೆಗೆ ಅಗ್ನಿಸ್ಪರ್ಶವಾದ ನಂತರ ಕೊತಕೊತನೇ ಕುದಿಯುತ್ತಾ ಕೆಂಡದ ಉಂಡೆಗಳು ಮಿಣಮಿಣನೇ ಬೆಳಗುತ್ತಿದ್ದವು. ಜೊತೆಗೆ ಕೆಂಡಗಳು ಉರಿದು ಉರಿದು ಬೂದಿ ಮುಚ್ಚಿದ್ದನ್ನು ಅಲ್ಲೇ ಸಮೀಪವಿದ್ದ ಯಜಮಾನರು ಟವೆಲ್, ಮೊರ, ಹೊಂಗೆಸೊಪ್ಪುಗಳನ್ನಿಡಿದು ಗಾಳಿ ಬೀಸುತ್ತಿದ್ದರು. ಗಾಳಿಗೆ ಬೂದಿ ಚದುರಿ ಕೆಂಪು ಕೆಂಡದ ಉಂಡೆಗಳು ಕಂಗೊಳಿಸುತ್ತಿದ್ದವು.
ಬುಧವಾರ ಬೆಳಗಿನ ಜಾವ ೫.೩೦ ಗಂಟೆಗೆ ಕೊಂಡ ಹಾಯಲು ಪೂಜಾ ಕೈಂಕರ್ಯಗಳೊಂದಿಗೆ ಮೊದಲಿಗೆ ವೀರಗಾಸೆ ವೇಷತೊಟ್ಟ ರೇಣುಕಾಸ್ವಾಮಿ ಅವರು ಸತತ ಎರಡನೇ ಬಾರಿ ಕೊಂಡ ಹಾಯಲು ರೆಡಿಯಾಗಿದ್ದು, ಕೊಂಡದ ಬಳಿ ಬಂದು ನಿಲ್ಲುತ್ತಾರೆ. ನಂತರ ಹೂವಿನ ಮಾಲೆಯನ್ನು ಕೊಂಡದ ಬಳಿ ಹಾಯುವ ಮಾರ್ಗದಲ್ಲಿ ಕಟ್ಟಿರುತ್ತಾರೆ, ಅದನ್ನು ಕತ್ತಿಯಿಂದ ಒಡೆದು ಜೈ ವೀರಭದ್ರೇಶ್ವರ ಎಂಬ ಘೊಷದೊಂದಿಗೆ ಕೆಂಡಗಳನ್ನು ತುಳಿದು ಸಾಗಿದಾಗ ನೆರೆದಿದ್ದ ಭಕ್ತಗಣವು ಜಯಘೋಷ ಮೊಳಗಿತು.ವೀರಗಾಸೆ ಸರದಿ ಮುಗಿದ ಮೇಲೆ ಒಮ್ಮೆಲೆ ಕೊಂಡದ ಬಳಿ ಬಂದು ನಿಂತ ಮೊದಲನೇ ಬಾರಿ ಹಿಂಗೊಂಡ ವೀರಭದ್ರೇಶ್ವರಸ್ವಾಮಿ ಹೊತ್ತ ಗುಡ್ಡಪ್ಪ ಕಾಂತೇಶ್‌ಕುಮಾರ್ ಅವರು, ಕೊಂಡ ಹಾಯ್ದ ಪರಿಯನ್ನು ಭಕ್ತರು ಮರೆಯುವಂತಿಲ್ಲ, ಕೆಲವು ಭಕ್ತರ ಕಣ್ಣಾಲಿಗಳು ತುಂಬಿಬಂದರೆ, ಇನ್ನು ಕೆಲವು ಭಕ್ತರು ತಮ್ಮ ಎರಡು ಕೈಮೇಲಕ್ಕೆತ್ತಿ ನಮಿಸುತ್ತಾ ವೀಭದ್ರೇಶ್ವರಸ್ವಾಮಿಗೆ ಜೈ... ಕಾಪಾಡಪ್ಪ ಎಂದು ಕೂಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಕೊಂಡ ಹಾಯ್ದ ಮೇಲೆ ರೇಣುಕಾಸ್ವಾಮಿ, ಕಾಂತೇಶ್ ಕುಮಾರ್ ಅವರನ್ನ ಸಂಭಾಳಿಸುತ್ತಾ, ಭಕ್ತರು ಅವರ ಪಾದಕ್ಕೆ ಎರಗಿ ಆಶೀರ್ವಾದ ಪಡೆದರು. ಸುಸೂತ್ರವಾಗಿ ಮೂರನೇ ದಿನವು ನಡೆದ ಆಲಕೆರೆ ಮತ್ತು ಕೀಲಾರ ಆರಾಧ್ಯದೈವ ವೀರಭದ್ರೇಶ್ವರಸ್ವಾಮಿಯ ಹಬ್ಬಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.)
;Resize=(128,128))
;Resize=(128,128))
;Resize=(128,128))