ಬಿಜೆಪಿ, ಕಾಂಗ್ರೆಸ್‌ಗೆ ಮತಗಳ ಲೀಡ್ ಕೊಡಿಸಲು ಶುರುವಾಗಿದೆ ಕಸರತ್ತು

| Published : May 05 2024, 02:04 AM IST

ಬಿಜೆಪಿ, ಕಾಂಗ್ರೆಸ್‌ಗೆ ಮತಗಳ ಲೀಡ್ ಕೊಡಿಸಲು ಶುರುವಾಗಿದೆ ಕಸರತ್ತು
Share this Article
  • FB
  • TW
  • Linkdin
  • Email

ಸಾರಾಂಶ

ಬರಪೀಡಿತ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯವಾಗಿ 2024ರ ಲೋಕಸಭಾ ಚುನಾವಣೆಯಲ್ಲಿ ಬದಲಾವಣೆ ಪರ್ವ ಶುರುವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ನಾನು ಹೆಚ್ಚು ಲೀಡ್ ಕೊಡಿಸಬೇಕು, ಬಿಜೆಪಿಗೆ ನಾವು ಹೆಚ್ಚು ಲೀಡು ಕೊಡಿಸಬೇಕು ಎಂಬ ವಿಚಾರದಲ್ಲಿ ಹಾಲಿ ಹಾಗೂ ಮಾಜಿ ಶಾಸಕರ ಮಧ್ಯೆ ಪೈಪೋಟಿ ಶುರುವಾಗಿದೆ. ಇದಕ್ಕಾಗಿ ಬಿಸಿಲಿನ ಝಳವನ್ನೂ ಲೆಕ್ಕಿಸದೇ ಮತಯಾಚಿಸುತ್ತಿದ್ದಾರೆ. ಮತದಾರರು ಯಾರಿಗೆ ಮಣೆ ಹಾಕುತ್ತಾರೆ ಎಂಬುದು ಮೇ ತಿಂಗಳ 7ರಂದು ಗೊತ್ತಾಗಲಿದೆ.

- ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ, ಮಾಜಿ ಶಾಸಕರ ಮಧ್ಯೆ ತೀವ್ರಗೊಂಡ ಪೈಪೋಟಿ - - -

ಹೆಮ್ಮನಬೇತೂರು ಚಿದಾನಂದ

ಕನ್ನಡಪ್ರಭ ವಾರ್ತೆ ಜಗಳೂರು

ಬರಪೀಡಿತ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯವಾಗಿ 2024ರ ಲೋಕಸಭಾ ಚುನಾವಣೆಯಲ್ಲಿ ಬದಲಾವಣೆ ಪರ್ವ ಶುರುವಾಗಿದೆ.

ಕಾಂಗ್ರೆಸ್ ಪಕ್ಷಕ್ಕೆ ನಾನು ಹೆಚ್ಚು ಲೀಡ್ ಕೊಡಿಸಬೇಕು, ಬಿಜೆಪಿಗೆ ನಾವು ಹೆಚ್ಚು ಲೀಡು ಕೊಡಿಸಬೇಕು ಎಂಬ ವಿಚಾರದಲ್ಲಿ ಹಾಲಿ ಹಾಗೂ ಮಾಜಿ ಶಾಸಕರ ಮಧ್ಯೆ ಪೈಪೋಟಿ ಶುರುವಾಗಿದೆ. ಇದಕ್ಕಾಗಿ ಬಿಸಿಲಿನ ಝಳವನ್ನೂ ಲೆಕ್ಕಿಸದೇ ಮತಯಾಚಿಸುತ್ತಿದ್ದಾರೆ. ಮತದಾರರು ಯಾರಿಗೆ ಮಣೆ ಹಾಕುತ್ತಾರೆ ಎಂಬುದು ಮೇ ತಿಂಗಳ 7ರಂದು ಗೊತ್ತಾಗಲಿದೆ.

ಗ್ಯಾರಂಟಿಗಳ ನಂಬಿರುವ ಕಾಂಗ್ರೆಸ್‌:

ಹಾಲಿ ಶಾಸಕ ಬಿ.ದೇವೆಂದ್ರಪ್ಪ ಅವರು ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಜಗಳೂರು ಕ್ಷೇತ್ರದಲ್ಲಿ ಲೀಡ್ ಕೊಡಲು ಬಿಜೆಪಿ ತೊರೆದು ಜಿಲ್ಲಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ ಚೆಕ್‌ ಡ್ಯಾಂ ಸರದಾರ, ಟಿ.ಗುರುಸಿದ್ದನಗೌಡ ಮಕ್ಕಳಾದ ಡಾಕ್ಟರ್ ಟಿ.ಜಿ.ರವಿಕುಮಾರ್ , ಕಾಂಗ್ರೆಸ್ ಮುಖಂಡರೊಂದಿಗೆ ಜಗಳೂರು ಕ್ಷೇತ್ರದ ಮತದಾರರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಂದರ್ಭ 57 ಕೆರೆಗಳಿಗೆ ಕುಡಿಯುವ ನೀರು, ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ಜನರಿಗೆ ನೀಡಿರುವ ಐದು ಗ್ಯಾರಂಟಿ ಯೋಜನೆಗಳನ್ನು ಮತದಾರರ ಮುಂದಿಟ್ಟು ಮತಯಾಚಿಸುತ್ತಿದ್ದಾರೆ. ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ 25 ಸಾವಿರಕ್ಕೂ ಅಧಿಕ ಮತಗಳ ಲೀಡ್‌ ಕೊಡಲೇಬೇಕೆಂಬ ಹಠಕ್ಕೆ ಬಿದ್ದಿದ್ದಾರೆ.

ಮೋದಿ, ಕೆರೆಗಳಿಗೆ ನೀರು, ಭದ್ರಾ ಯೋಜನೆ ಮುಂದಿಟ್ಟು ಪ್ರಚಾರ:

ಇತ್ತ ಬಿಜೆಪಿಯ ಮಾಜಿ ಶಾಸಕ ಎಸ್.ವಿ. ರಾಮಚಂದ್ರ, ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತರಾಗಿ ಪಕ್ಷೇತರ ಅಭ್ಯರ್ಥಿಯಾಗಿ ಕೆಲವೇ ಮತಗಳ ಅಂತರದಲ್ಲಿ ಸೋತಿರುವ ಎಚ್.ಪಿ.ರಾಜೇಶ್, ಲೋಕಸಭಾ ಚುನಾವಣೆ ವೇಳೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಂಸದ ಜಿ.ಎಂ. ಸಿದ್ದೇಶ್ವರ್ ಸಮ್ಮುಖ ಬಿಜೆಪಿ ಸೇರ್ಪಡೆಗೊಂಡಿರುವ ರಾಜೇಶ್, ಬಿಜೆಪಿಯ ಮಾಜಿ ಶಾಸಕರಾಗಿದ್ದ ಎಸ್.ವಿ.ರಾಮಚಂದ್ರರೊಂದಿಗೆ ಸಂಸದ ಜಿ.ಎಂ. ಸಿದ್ದೇಶ್ವರ್ ಸಹಕಾರದೊಂದಿಗೆ ನಮ್ಮ ಅಧಿಕಾರದ ಅವಧಿಯಲ್ಲಿ ಕ್ಷೇತ್ರಕ್ಕೆ ಕುಡಿಯುವ ನೀರು, ರಸ್ತೆಗಳ ನಿರ್ಮಾಣ, 47 ಕೆರೆಗಳ ನೀರು ತುಂಬಿಸುವ ಯೋಜನೆ, ಭದ್ರಾ ಮೇಲ್ದಂಡೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳು, ಹಾಗೂ ಪ್ರಧಾನಿ ಮೋದಿ ಆಡಳಿತದಲ್ಲಿ ಅಭಿವೃದ್ಧಿ ಕೆಲಸಗಳನ್ನು ಜಗಳೂರು ಕ್ಷೇತ್ರದ ಜನರೇ ನೋಡಿದ್ದೀರಿ ಎಂದು ಮತದಾರರನ್ನು ಮನವೊಲಿಸುತ್ತಾ ಬಿಜೆಪಿಯತ್ತ ಸೆಳೆಯಲು ಸತತ ಪ್ರಚಾರ ಕೈಗೊಂಡಿದ್ದು, ಇಬ್ಬರು ಸೇರಿ ಬಿಜೆಪಿ ಲೋಕಸಭಾ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರಿಗೆ 25 ಸಾವಿರ ಮತಗಳ ಲೀಡ್ ಕೊಟ್ಟೇ ಕೊಡುವ ನಿಟ್ಟಿನಲ್ಲಿದ್ದು, ಬಿಜೆಪಿ ಪಕ್ಷಕ್ಕೆ ಜೆಡಿಎಸ್ ಕೂಡ ಮುಖಂಡ ಕೆ.ಬಿ.ಕಲ್ಲೇರುದ್ರೇಶ್ ನೇತೃತ್ವದಲ್ಲಿ ಮತಗಳ ತರುವಲ್ಲಿ ಕಾರ್ಯೋನ್ಮುಖವಾಗಿದೆ.

ಇತ್ತ ನಾನೇನು ಕಡಿಮೆ ಇಲ್ಲ, ವಿದ್ಯಾವಂತ, ಹಿಂದುಳಿದ ವರ್ಗದ ನಾಯಕ, ನನಗೆ ಕಾಂಗ್ರೆಸ್ ಟಿಕೆಟ್ ನೀಡಿಲ್ಲ ಎಂದು ವಿನಯಕುಮಾರ್ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ತಮ್ಮ ಸಿಲಿಂಡರ್‌ ಗುರುತಿಗೆ ಮತ ನೀಡುವಂತೆ ಯುವ ಮುಖಂಡರೊಂದಿಗೆ ಮತಯಾಚಿಸುತ್ತಿದ್ದಾರೆ. ಎಷ್ಟು ಮತ ಪಡೆಯುತ್ತಾರೆ, ಯಾವ ಪಕ್ಷಕ್ಕೆ ಒಳಏಟು ನೀಡುತ್ತಾರೆ? ಯಾವ ಪಕ್ಷಕ್ಕೆ ಲಾಭ ಎಂಬ ರಾಜಕೀಯ ಲೆಕ್ಕಾಚಾರಗಳು ನಡೆಯುತ್ತಿವೆ.

ಅಂತು ಜಗಳೂರು ವಿಧಾನಸಭಾಕ್ಷೇತ್ರದ ಮತದಾರರ ಒಲವು ಕಾಂಗ್ರೆಸ್‌ಗೋ, ಬಿಜೆಪಿಗೋ ಅಥವಾ ಪಕ್ಷೇತರ ಅಭ್ಯರ್ಥಿಗೆ ಎಂಬುದು ಇದೇ ತಿಂಗಳು 7ನೇ ತಾರೀಖಿನಂದು ನಡೆಯುವ ಚುನಾವಣೆಯಲ್ಲಿ ಗೊತ್ತಾಗಲಿದೆ.

ಮತದಾರರ ವಿವರ:

ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ 1,00,046 ಪುರುಷ ಮತದಾರರು, 98,759 ಮಹಿಳಾಮತದಾರರು, ಲಿಂಗತ್ವ ಅಲ್ಪಸಂಖ್ಯಾತರು 10, ಒಟ್ಟು 1,98,815 ಮತದಾರರಿದ್ದಾರೆ.

ಮತ ಗಳಿಕೆ ಹಿನ್ನೋಟ:

2019ರ ಲೋಕಸಭೆಯಲ್ಲಿ ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಜಿ.ಎಂ.ಸಿದ್ದೇಶ್ವರ್ 72,948, ಎಚ್.ಬಿ.ಮಂಜಪ್ಪ 56,968 ಮತ ಪಡೆದಿದ್ದಾರೆ. 2023ರಲ್ಲಿ ಜಗಳೂರು ವಿಧಾನಸಭೆ ಚುನಾವಣೆಯಲ್ಲಿ ಬಿ.ದೇವೇಂದ್ರಪ್ಪ (ಕಾಂಗ್ರೆಸ್) 50,765, ಎಸ್.ವಿ.ರಾಮಚಂದ್ರ (ಬಿಜೆಪಿ) 49,891, ಎಚ್.ಪಿ.ರಾಜೇಶ್ 49,442 ಮತಗಳನ್ನು ಪಡೆದಿದ್ದು, ಒಟ್ಟು ಶೇ.70ರಷ್ಟು ಮತದಾನ ನಡೆದಿತ್ತು.

- - -

-04ಜೆ.ಜಿ.ಎಲ್.1: ಡಾ.ಪ್ರಭಾ ಮಲ್ಲಿಕಾರ್ಜುನ್, ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ

-04ಜೆ.ಜಿ.ಎಲ್.2: ಗಾಯತ್ರಿ ಸಿದ್ದೇಶ್ವರ್, ಬಿಜೆಪಿ ಲೋಕಸಭಾ ಅಭ್ಯರ್ಥಿ