ಸಾರಾಂಶ
ಹುಬ್ಬಳ್ಳಿ: ಇಲ್ಲಿನ ಮ್ಯಾದರ ಓಣಿಯಲ್ಲಿ ಸಪ್ತಸಾಮ್ರಾಟ್ ಬಳಗದಿಂದ ಪ್ರತಿಷ್ಠಾಪಿಸಲಾಗಿರುವ 25 ಅಡಿ ಎತ್ತರದ ಹುಬ್ಬಳ್ಳಿ ಕಾ ಸಪ್ತ ಸಾಮ್ರಾಟ್ ಗಣೇಶ ಮೂರ್ತಿ ಭಕ್ತರ ಕಣ್ಮನ ಸೆಳೆಯುತ್ತಿದ್ದು, ವೀಕ್ಷಣೆಗೆ ಆಗಮಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಕಳೆದ ಹಲವು ವರ್ಷಗಳಿಂದ ಹಿರಿಯರು ಸಣ್ಣ ಪ್ರಮಾಣದಲ್ಲಿ ಆಚರಿಸಿಕೊಂಡು ಬಂದ ಗಣೇಶೋತ್ಸವ ಕಾರ್ಯಕ್ರಮವನ್ನು ಓಣಿಯ ಯುವಕರು ಕೂಡಿಕೊಂಡು ಕಳೆದ 4 ವರ್ಷಗಳಿಂದ ಮ್ಯಾದಾರ ಓಣಿಯ ಸಪ್ತ ಸಾಮ್ರಾಟ ವೃತ್ತದಲ್ಲಿ ವಿಜೃಂಬಣೆಯಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ನಾಲ್ಕು ವರ್ಷಗಳ ಹಿಂದೆ 10 ಅಡಿ ಎತ್ತರದ ಗಣೇಶ ಪ್ರತಿಷ್ಠಾಪಿಸಲಾಗಿತ್ತು. ಬಳಿಕ ಹಿರಿಯರ ಮಾರ್ಗದರ್ಶನ, ಅಭಿಪ್ರಾಯದಂತೆ 25 ಅಡಿ ಎತ್ತರದ ಗಣೇಶ ಪ್ರತಿಷ್ಠಾಪಿಸಿಲಾಗುತ್ತಿದೆ.ಮಂಟಪ: ಈ ಬಾರಿ ಪುರಿ ಜಗನ್ನಾಥ ಮಾದರಿಯ ಮಂಟಪ ನಿರ್ಮಿಸಲಾಗಿದ್ದು, ಮಂಟಪದೊಳಗೆ 25 ಅಡಿ ಎತ್ತರದ ಗಜಕಾಯದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಈ ಮೂರ್ತಿಗೆ ಒಂದು ಕೆಜಿಯ ಬೆಳ್ಳಿಯಿಂದ ತಯಾರಿಸಿದ ಹಸ್ತ, ಬೆಳ್ಳಿ ದಂತಗಳಿವೆ. ಜತೆಗೆ ಮುಂಬೈನಲ್ಲಿ ಸಿದ್ಧಪಡಿಸಲಾದ ಬಂಗಾರದ ಕೋಟೆಡ್ ಉಳ್ಳ 10 ಅಡಿ ಉದ್ದದ ಬೃಹತ್ ಹಾರ ಹಾಕಿರುವುದು ವಿಶೇಷ.
ಅದ್ಧೂರಿ ಮೆರವಣಿಗೆ: ಮೂರ್ತಿಯನ್ನು ಹುಬ್ಬಳ್ಳಿಯ ಸುಹಾಸ್ ಪಾಲ್ ಎಂಬುವರು ತಯಾರಿಸಿದ್ದಾರೆ. ಮೂರ್ತಿ ಪ್ರತಿಷ್ಠಾಪನೆಯ ಪೂರ್ವದಲ್ಲಿ ಅದ್ಧೂರಿ ಮೆರವಣಿಗೆ ನಡೆಸಿ ಪ್ರತಿಷ್ಠಾಪಿಸಲಾಗಿದ್ದು, 11 ದಿನಗಳ ಬಳಿಕವೂ ಅದ್ಧೂರಿ ಮೆರವಣಿಗೆಯ ಮೂಲಕ ನಗರದ ಗ್ಲಾಸ್ ಹೌಸ್ ಬಳಿಯ ಬಾವಿಯಲ್ಲಿ ವಿಸರ್ಜಿಸಲಾಗುತ್ತದೆ.ಗಣಹೋಮ, ಮಹಾಪ್ರಸಾದ: ಮೂರ್ತಿ ಪ್ರತಿಷ್ಠಾಪನೆಯ 7ನೇ ದಿನವಾದ ಮಂಗಳವಾರ ಬೆಳಗ್ಗೆ ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ ನೆರವೇರಿಸಲಾಯಿತು. ಬಳಿಕ ಮಹಾ ಅನ್ನಸಂತರ್ಪಣೆ ನೆರವೇರಿತು. ಮೂರ್ತಿ ಪ್ರತಿಷ್ಠಾಪನೆಯಾದಾಗಿನಿಂದ ವಿಸರ್ಜನೆಗೊಳ್ಳುವ ದಿನದ ವರೆಗೂ ನಿತ್ಯ ರಾತ್ರಿ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದೆ.
30ಕ್ಕೂ ಅಧಿಕ ಸದಸ್ಯರು: ಈ ಗಣೇಶ ಮಂಡಳಿಯಲ್ಲಿ 30ಕ್ಕೂ ಅಧಿಕ ಸದಸ್ಯರಿದ್ದಾರೆ. ಇವರೇ ಅಧ್ಯಕ್ಷರು ಎಂದು ಯಾರನ್ನೂ ಆಯ್ಕೆ ಮಾಡಿಲ್ಲ. ಬದಲಾಗಿ ಎಲ್ಲರೂ ಅಧ್ಯಕ್ಷರಂತೆ ಮುಂದೆ ನಿಂತು ಅಚ್ಚುಕಟ್ಟಾಗಿ ಎಲ್ಲ ಕಾರ್ಯಕ್ರಮಗಳ ಯಶಸ್ಸಿಗೆ ಶ್ರಮಿಸುತ್ತಾರೆ.ವೈಶಿಷ್ಠ್ಯತೆಯ ಅಕ್ಕಿಸೇವೆ: ಈ ಗಣೇಶ ಮೂರ್ತಿ ವೀಕ್ಷಣೆಗೆ ಆಗಮಿಸುವ ಭಕ್ತರು ಅಷ್ಟಾರ್ಥಸಿದ್ಧಿಗಾಗಿ ಅಕ್ಕಿಸೇವೆ ವ್ಯವಸ್ಥೆ ಮಾಡಲಾಗಿದೆ. ಬರುವ ಭಕ್ತರು ₹10 ನೀಡಿ ಇಲ್ಲಿ ಅಕ್ಕಿಯ ಪೊಟ್ಟಣ ಖರೀದಿಸಿ ಈ ಮೂರ್ತಿಯ ಬಳಿ ಇಟ್ಟ ತಟ್ಟೆಗೆ ಹಾಕುತ್ತಾರೆ. ಹೀಗೆ ಸಂಗ್ರಹವಾದ ಅಕ್ಕಿಯಿಂದಲೇ ಕೊನೆಯ ದಿನದ ವಿಸರ್ಜನೆಯ ವೇಳೆ ಅನ್ನಪ್ರಸಾದ ಸಿದ್ಧಪಡಿಸಿ ಭಕ್ತರಿಗೆ ವಿತರಿಸುತ್ತಾರೆ. ಹೀಗೆ ಸಂಗ್ರಹಿಸಿದ ಅಕ್ಕಿಯು ಕ್ವಿಂಟಾಲ್‌ಗೂ ಅಧಿಕ ಎಂಬುದು ವಿಶೇಷ.