ಯುವ ಸಾಹಿತಿಗಳಿಗೆ ಬೆಳಕು ತೋರಿದ ಕಣ್ಣ ಮುಂದಿನ ಬೆಳಕು

| Published : Jun 29 2024, 12:40 AM IST

ಸಾರಾಂಶ

ಕನ್ನಡ ಸಾಹಿತ್ಯ ಲೋಕದ ಬೆಳಕನ್ನು ಯುವ ಸಾಹಿತಿಗಳಿಗೆ ಕಣ್ಣ ಮುಂದಿನ ಬೆಳಕು ತೋರಿಸಿಕೊಟ್ಟಿದೆ. ಕರ್ನಾಟಕ, ಕನ್ನಡದ ಇತಿಹಾಸದ ನೆಲೆಯಲ್ಲಿ ಸೃಜನಶೀಲ ಸಾಹಿತ್ಯದ ಯುವ ಸಮುದಾಯವು ನಾಳೆಯ ದಿನದ ಕರ್ನಾಟಕದ ಬೆಳೆಕು ಆಗಬೇಕಿದೆ.

ಧಾರವಾಡ:

ಲೋಕದ ದೃಷ್ಟಿ ಮಲೀನವಾಗುತ್ತಿರುವ ಸಂದರ್ಭದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವು ಕಣ್ಣ ಮುಂದಿನ ಬೆಳಕು ವಿಷಯವಾಗಿ ಯುವ ಸಾಹಿತಿಗಳಿಗೆ ಆಯೋಜಿಸಿದ್ದ ಕಾರ್ಯಾಗಾರ ಸ್ತುತ್ಯರ್ಹ ಎಂದು ಹಿರಿಯ ಸಾಹಿತಿ ರಹಮತ್‌ ತರೀಕರೆ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಎರಡು ದಿನಗಳ ಕಣ್ಣ ಮುಂದಿನ ಬೆಳಕು ರಾಜ್ಯಮಟ್ಟದ ಯುವ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಶುಕ್ರವಾರ ಮಾತನಾಡಿದರು.

ಕನ್ನಡ ಸಾಹಿತ್ಯ ಲೋಕದ ಬೆಳಕನ್ನು ಯುವ ಸಾಹಿತಿಗಳಿಗೆ ಕಣ್ಣ ಮುಂದಿನ ಬೆಳಕು ತೋರಿಸಿಕೊಟ್ಟಿದೆ. ಕರ್ನಾಟಕ, ಕನ್ನಡದ ಇತಿಹಾಸದ ನೆಲೆಯಲ್ಲಿ ಸೃಜನಶೀಲ ಸಾಹಿತ್ಯದ ಯುವ ಸಮುದಾಯವು ನಾಳೆಯ ದಿನದ ಕರ್ನಾಟಕದ ಬೆಳೆಕು ಆಗಬೇಕಿದೆ. ಎರಡು ದಿನಗಳಲ್ಲಿನ ಚರ್ಚೆ, ಸಂವಾದಗಳು ಭಾಷೆ, ಸಂಸ್ಕೃತಿ ಬಗ್ಗೆ ಚರ್ಚೆಯಾದರೂ ಆಂತರ್ಗತವಾಗಿ ಅದು ಕನ್ನಡ ನಾಡು ಕಟ್ಟುವುದೇ ಆಗಿದೆ. ದೊಡ್ಡ ಸಂಖ್ಯೆಯಲ್ಲಿ ಯುವ ಸಾಹಿತಿಗಳು ಆತ್ಮವಿಮರ್ಶೆಯ ಮಾತುಗಳನ್ನಾಡಿದ್ದು ತಮ್ಮ ಸಮುದಾಯದಿಂದ ಬಿಡುಗಡೆಯಾಗಿ, ಸಮುದಾಯವನ್ನು ಸಹ ಬಿಡುಗಡೆ ಮಾಡುವಲ್ಲಿ ಪ್ರಯತ್ನಗಳು ನಡೆಯುತ್ತಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಕರ್ನಾಟಕವನ್ನು ಆರೋಗ್ಯಕರವಾಗಿ ಕಟ್ಟುವಲ್ಲಿ ಇಂತಹ ಕಾರ್ಯಾಗಾರದ ಮೂಲಕ ವಿದ್ಯಾವರ್ಧಕ ಸಂಘವು ಪ್ರಯತ್ನ ಮಾಡಿದೆ ಎಂದರು.

ಇದಕ್ಕೂ ಮುಂಚೆ ನಡೆದ ಹೊಸ ತಲೆಮಾರಿನ ಸಾಧನೆ ಮತ್ತು ಸವಾಲು ಗೋಷ್ಠಿಯಲ್ಲಿ ಅನುವಾದ ಕುರಿತು ಮಾತನಾಡಿದ ಪ್ರಾಧ್ಯಾಪಕ ಡಾ. ಮಲ್ಲಪ್ಪ ಬಂಡಿ, ಅನುವಾದದ ವಿಷಯದಲ್ಲಿ ಕನ್ನಡವು ಸ್ವೀಕಾರ ಭಾಷೆಯಾಗಿ ಬೆಳೆಯುತ್ತಿದ್ದು, ತನ್ನ ಸಾಹಿತ್ಯ, ಸಂಸ್ಕೃತಿಯನ್ನು ಕೊಡುವ ಭಾಷೆಯಾಗಿ ಬೆಳೆಯುತ್ತಿಲ್ಲ ಎಂಬ ಕೊರಗಿದೆ. ಕನ್ನಡಿಗ ಸಾಹಿತಿಗಳು ಬೇರೆ ಬೇರೆ ಭಾಷೆಗಳ ವಸ್ತುಗಳನ್ನು ಅನುವಾದದ ಮೂಲಕ ತರುವ ಕೆಲಸ ಹೆಚ್ಚು ಮಾಡಿದ್ದೇವೆ. ಆದರೆ, ನಮ್ಮಲ್ಲಿನ ಅಭಿಜಾತ ಕೃತಿಗಳು, ಶಾಸ್ತ್ರ, ವರ್ತಮಾನದ ಸಾಂಸ್ಕೃತಿಕ ಕೃತಿಗಳನ್ನು ಅನ್ಯಭಾಷೆಗಳಿಗೆ ಪರಿಚಯಿಸಿ ಕನ್ನಡ ಭಾಷೆಯನ್ನು ವಿಶ್ವಾತ್ಮಕ ನೆಲೆಯಲ್ಲಿ ಒಯ್ಯಬೇಕಾದ ಕೆಲಸ ಮಾಡಿಲ್ಲ ಎಂಬ ಬೇಸರ ನಮ್ಮನ್ನು ಕಾಡುತ್ತಿದೆ. ಈ ಕಾರ್ಯವನ್ನು ಯುವ ಸಾಹಿತಿಗಳಾದರೂ ಮಾಡಲಿ ಎಂಬುದೇ ಆಶಯ ಎಂದು ಹೇಳಿದರು.

ಇದರೊಂದಿಗೆ ಪ್ರಶಸ್ತಿ ಪುರಸ್ಕೃತಿ ಕೃತಿಗಳೇ ಹೆಚ್ಚಾಗಿ ಕನ್ನಡಕ್ಕೆ ಅನುವಾದ ಆಗುತ್ತಿರುವುದು ಬೇಸರದ ಸಂಗತಿ. ಪುಸ್ತಕಗಳ ಮಾರಾಟ, ಜನಪ್ರತಿಯತೆಯು ಅನುವಾದಕ್ಕೆ ಮಾನದಂಡ ಎನ್ನುವಂತಾಗಿದ್ದು, ಇಲ್ಲೂ ಸಾಂಸ್ಕೃತಿಕ ರಾಜಕಾರಣದ ಒಳಸುಳಿ ಎದ್ದು ಕಾಣುತ್ತಿದೆ. ಸಾಂಸ್ಕೃತಿಕವಾಗಿ ಹೊಸ ದೃಷ್ಟಿಕೋನಗಳನ್ನು ಮಂಡಿಸುವ ಸಂಗತಿಗಳನ್ನು ಅನುವಾದಕ್ಕೆ ಎತ್ತಿಕೊಳ್ಳುವುದರಲ್ಲಿ ಭಾಷೆ ಶ್ರೀಮಂತಿಕೆ ಬೆಳೆಸಲು ಸಾಧ್ಯವಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ಅನುವಾದವು ವಸಾಹತುಶಾಹಿಯ ಒಂದು ಅಸ್ತ್ರ. ಪ್ರಯೋಗ ಮಾಡಿ ಸಿದ್ಧಾಂತಗಳನ್ನು ನಮ್ಮ ತಲೆಗೆ ಕಟ್ಟಿಲಾಗಿದೆ. ಆದ್ದರಿಂದ ಮೂಲ ಲೇಖಕಕನ ಅನುಯಾಯಿಗಳಾಗವುದು ಸರಿಯಲ್ಲ ಎಂದು ಡಾ. ಬಂಡಿ ಪ್ರತಿಪಾದಿಸಿದರು.

ಸಣ್ಣ ಕಥೆ ಮತ್ತು ಕಾದಂಬರಿ ಕುರಿತು ಯುವ ಕಥೆಗಾರ ಟಿ.ಎಸ್‌. ಗೊರವರ, ಕಾವ್ಯ ಕುರಿತು ಡಾ. ರಾಮಲಿಂಗಪ್ಪ ಬೇಗೂರ, ನಾಟಕ ಕುರಿತು ಬೇಲೂರು ರಘುನಂದನ, ವಿಮರ್ಶೆ, ಸಂಶೋಧನೆ ಕುರಿತು ಡಾ. ಸುಭಾಸರಾಜ ಮಾನೆ, ಮಕ್ಕಳ ಸಾಹಿತ್ಯ ಕುರಿತು ಡಾ. ನಿಂಗೂ ಸೊಲಗಿ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಪದಾಧಿಕಾರಿ ಡಾ. ಧನವಂತ ಹಾಜವಗೋಳ, ಡಾ. ಜಿನದತ್ತ ಹಡಗಲಿ ಮತ್ತಿತರರು ಇದ್ದರು.