ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯ ಸುರಪುರ ತಾಲೂಕಿನ ದೇವಿಕೇರಾ ಜಾತ್ರೆಯಲ್ಲಿ ಪ್ರಾಣಿಬಲಿ ಸಾಧ್ಯತೆ ಹಾಗೂ ಗುಂಪು ಘರ್ಷಣೆ ಆತಂಕ ಕೊನೆಗೂ ಸುಖಾಂತ್ಯ ಕಂಡಿದೆ. ಬಿಗಿ ಪೊಲೀಸ್ ಕಾವಲಿನಲ್ಲಿ ಜಾತ್ರೆ ಸಂಪನ್ನಗೊಂಡಿದೆ. ಪ್ರಾಣಿಬಲಿ ಹಾಗೂ ಮೌಢ್ಯ ಆಚರಣೆಗಳನ್ನು ತೊರೆಯುವಂತೆ ಜಿಲ್ಲಾಡಳಿತ, ಪೊಲೀಸ್ ಹಾಗೂ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ, ಬೆಂಗಳೂರಿನ ದಯಾನಂದ ಸ್ವಾಮೀಜಿ ಮನವೊಲೈಕೆ ಇಲ್ಲಿ ಫಲಿಸಿದೆ.ಪ್ರಾಣಿಬಲಿ ಬದಲು, ಕುಂಬಳಕಾಯಿ ಒಡೆದು ಮಂಗಳವಾರ ಜಾತ್ರೆಗೆ ಚಾಲನೆ ನೀಡಲಾಗಿದೆ. ಸಾವಿರಾರು ಜನರು ಭಕ್ತಿ-ಭಾವ ಮೆರೆದು, ದೇವಿಗೆ ಹೂ-ಹಣ್ಣು, ಕರ್ಪೂರದಾರತಿ ಮಾಡಿದರು. ಸಾವಿರಾರು ಪ್ರಾಣಿಬಲಿ ಸಾಧ್ಯತೆ ಕಾರಣದಿಂದಾಗಿ ಸೋಮವಾರದಿಂದಲೇ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು. ಕಾನೂನುಬಾಹಿರ ಕೃತ್ಯ ಜರುಗದಂತೆ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದ ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ, ಗ್ರಾಮಸ್ಥರ ಮನವೊಲೈಸಿ, ಮೌಢ್ಯ ಆಚರಣೆಗಳ ಕೈಬಿಡುವಂತೆ ಮಾಡುವಲ್ಲಿ ಪ್ರಯತ್ನಿಸಿದ್ದರು.
ಮೂರು ವರ್ಷಕ್ಕೊಮ್ಮೆ ಸಂಪ್ರದಾಯದಂತೆ ಮರೆಮ್ಮ ದೇವಿ ಜಾತ್ರೆ ಸರಳವಾಗಿ ಮಂಗಳವಾರ ಜರುಗಿತು. ಗ್ರಾಮ ದೇವತೆಗಳಿಗೆ ಸಿಹಿ ಅಡುಗೆ ಮಾಡಿ ನೈವೇದ್ಯ ತಂದು ಗ್ರಾಮಸ್ಥರು ಸಮರ್ಪಿಸಿದರು.ಇದಕ್ಕೂ ಮುನ್ನ ದೇವತೆಗಳಿಗೆ ಅಲಂಕಾರ ಮಾಡಿ ಡೊಳ್ಳು ವಾದ್ಯದೊಂದಿಗೆ ಸಂಭ್ರಮಾಚರಣೆ ಮೂಲಕ ಗರ್ಭಗುಡಿ ತಲುಪಿಸಿದರು. ತದನಂತರ ಗ್ರಾಮದ ಮುಖಂಡರಿಂದ ವಿಶೇಷ ಪೂಜೆ ಮತ್ತು ಮಂಗಳಾರತಿ ನೆರವೇರಿತು. ಗ್ರಾಮದ ಮಹಿಳೆಯರು, ಮಕ್ಕಳು, ಹಿರಿಯರು ತೆಂಗಿನಕಾಯಿ ಮತ್ತು ಸಕ್ಕರೆ ಸಮರ್ಪಿಸಿ ಇಷ್ಟಾರ್ಥ ನೆರವೇರಿಸಲು ಪ್ರಾರ್ಥಿಸಿದರು.
ದೇವಿ ಇಷ್ಟಾರ್ಥ ನೆರವೇರಿಸಿದ ಹಿನ್ನೆಲೆಯಲ್ಲಿ ಭಕ್ತರು ದೀಢ್ ನಮಸ್ಕಾರ ಹಾಕಿ ಹರಕೆ ತೀರಿಸಿದರು. ದೇವಿಕೇರಾ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿ ದೇವಿ ದರ್ಶನ ಪಡೆದರು. ದೇವಿಕೇರಾ ಗ್ರಾಮದಲ್ಲಿ ಎಲ್ಲಂದರಲ್ಲಿ ಪೊಲೀಸರು, ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ಸಿಬ್ಬಂದಿಗಳು ಗಸ್ತು ತಿರುಗುತ್ತಿದ್ದರು. ಗ್ರಾಮದ ಮರೆಮ್ಮ ದೇವಿ ದೇಗುಲದ ಸುತ್ತಮುತ್ತ ಪೊಲೀಸರೇ ಕಾಣುತ್ತಿದ್ದರು. 170ಕ್ಕೂ ಹೆಚ್ಚು ಜನರನ್ನು ಪೊಲೀಸ್ ಇಲಾಖೆ ನೇಮಿಸಿತ್ತು. ಸೋಮವಾರ ರಾತ್ರಿ 9 ಗಂಟೆ ಮತ್ತು ಮಂಗಳವಾರ ಮುಂಜಾನೆ 3 ಗಂಟೆಗೆ ಎಸ್ಪಿ ಜಿ. ಸಂಗೀತಾ ಭೇಟಿ ನೀಡಿ ಪರಿಶೀಲಿಸಿದ್ದರು.ಪ್ರಾಣಿಬಲಿ ಕೈಬಿಟ್ಟು ಸಾತ್ವಿಕತೆ ಪ್ರದರ್ಶಿಸಿ ಗ್ರಾಮಸ್ಥರುವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ದಯಾನಂದ ಸ್ವಾಮೀಜಿ ಹರ್ಷ
ಯಾದಗಿರಿ:ದೇವಿಕೇರಾ ಗ್ರಾಮದೇವಿ ಜಾತ್ರಾ ಸಂದರ್ಭದಲ್ಲಿ ಯಾವುದೇ ಕೋಣ, ಆಡು, ಕುರಿ, ಕುರಿ, ಕೋಳಿ ಮುಂತಾದ ಯಾವುದೇ ಪ್ರಾಣಿಗಳ ಬಲಿಯನ್ನು ಕೊಡದೆ, ಅಹಿಂಸಾತ್ಮಾಕವಾಗಿ ಸಾತ್ವಿಕ ರೂಪದಲ್ಲಿ ಕುಂಬಳ ಕಾಯಿಯನ್ನು ಒಡೆದು ದೇವಿ ಜಾತ್ರೆ ಆಚರಿಸಿದ್ದು ಸಂತೋಷ ತಂದಿದೆ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಪಶು ಪ್ರಾಣಿ ಬಲಿ ನಿರ್ಮೂಲನಾ ಜಾಗೃತಿ ಮಹಾಸಂಘದ ಪರವಾಗಿ ಬಸವಧರ್ಮ ಜ್ಞಾನ ಪೀಠದ ಬೆಂಗಳೂರಿನ ದಯಾನಂದ ಸ್ವಾಮೀಜಿ ಎಂದು ತಿಳಿಸಿದರು.
ಪ್ರಾಣಿ ಬಲಿ ತಡೆಯುವಲ್ಲಿ ಮಾಧ್ಯಮಗಳು, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಗ್ರಾಮಸ್ಥರು ಈ ಯಶಸ್ಸಿಗೆ ಕಾರಣೀಭೂತರಾಗಿದ್ದಾರೆ. ಸೋಮವಾರ ರಾತ್ರಿಯೀಡಿ ಪೊಲೀಸ್ ಮತ್ತು ಜಿಲ್ಲಾ ಮತ್ತು ಜಿಲ್ಲಾಡಳಿತ, ಪಶು ಸಂಗೋಪನೆ, ಪಂಚಾಯತ್ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದರು. ಗ್ರಾಮಸ್ಥರು ಸ್ಪಂದಿಸಿ ಸಹಕರಿಸಿ ಪ್ರಾಣಿ ಬಲಿ ತಡೆಗೆ ಶ್ರಮಿಸಿದ್ದಾರೆ. ಇದೊಂದು ಭಾರತೀಯ ಧಾರ್ಮಿಕತೆಗೆ ಮೈಲುಗಲ್ಲಾಗಿದೆ ಎಂದು ತಿಳಿಸಿದರು.ಹಲವಾರು ದಶಕಗಳಿಂದ ಆಚರಿಸಿ ಕೊಂಡು ಬಂದಿದ್ದ ಕೋಣಬಲಿಯನ್ನು ತ್ಯಜಿಸಿ ಧಾರ್ಮಿಕ ಆರಾಧನೆ ಮಾಡುವ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ಸೋಮವಾರ ರಾತ್ರಿ ಮತ್ತು ಮಂಗಳವಾರ ದೇವಿಕೇರಾ ಗ್ರಾಮದಲ್ಲಿ ಬೀಡುಬಿಟ್ಟು ಧರ್ಮ ಸಂದೇಶ, ಅಹಿಂಸಾ ಪ್ರಾಣ ದಯೆ ಆಧ್ಯಾತ್ಮ ಸಂದೇಶಗಳನ್ನು ದೇಗುಲದ ಮುಂಭಾಗ ನೀಡಲಾಗಿದೆ ಎಂದರು.
ದೇವಿಕೇರಾ ಸುತ್ತಮುತ್ತ ಇರುವ ಗ್ರಾಮಗಳಲ್ಲಿ ಧ್ವನಿವರ್ಧಕಗಳ ಮೂಲಕ ಪ್ರಾಣಿ ಬಲಿ ತಡೆಯವುದನ್ನು ಜಾಗೃತಿ ಮೂಡಿಸಲಾಯಿತು ಎಂದ ಯಾವುದೇ ಅಹಿತಕರ ಘಟನೆಗಳು ನಡೆಯದಿಲ್ಲ. ದೀವಳ ಗುಡ್ಡದ ಮರೆಮ್ಮ ದೇವಿ ಜಾತ್ರೆಯಲ್ಲಿ ಪ್ರಾಣಿ ಬಲಿ ಕೊಡುವುದನ್ನು ತಡೆಯಲು ಜಾಗೃತಿ ಮೂಡಿಸಲಾಯಿತು. ಸುರಪುರ ನಗರದಲ್ಲಿಯೂ ಪ್ರಚಾರ ಮಾಡಲಾಗುತ್ತಿದೆ ಎಂದು ತಿಳಿಸಿದರು.