ಸಾರಾಂಶ
ಕನ್ನಡಪ್ರಭ ವಾರ್ತೆ ಅಫಜಲ್ಪುರ
ಬಿಳಿ ಜೋಳದ ಬೆಲೆ ಏಕಾಏಕಿ ಕುಸಿತ ಕಂಡಿದ್ದು, ಲಾಭದ ನಿರೀಕ್ಷೆಯಲ್ಲಿದ್ದ ತಾಲೂಕಿನ ರೈತರಿಗೆ ಭ್ರಮನಿರಸನವಾಗಿದೆ.ಎರಡು ತಿಂಗಳ ಹಿಂದಷ್ಟೇ ಕ್ವಿಂಟಲ್‌ಗೆ 6 ಸಾವಿರ ರು. ಇದ್ದ ಜೋಳದ ಬೆಲೆ 3,500 ರು.ಗೆ ದಿಢೀರ್ ಕುಸಿತ ಕಂಡಿದೆ. ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಹಿಂಗಾರು ಕೃಷಿಯತ್ತ ಒಲವು ತೋರಿದ್ದ ತಾಲೂಕಿನ ರೈತರು, ಬಿಳಿ ಜೋಳ ಬಿತ್ತಿ ಲಾಭ ಪಡೆಯುವ ನಿರೀಕ್ಷೆಯಲ್ಲಿದ್ದರು.
ಆದರೆ, ಹಿಂಗಾರು ಮಳೆ ಬಾರದೆ ಇಳುವರಿ ಕುಸಿದಿದೆ ಪ್ರಸ್ತುತ ಜೋಳದ ಬೆಲೆ ಸಹ ನಿರೀಕ್ಷೆ ಮೀರಿ ಕುಸಿದಿರುವುದು ರೈತರ ಆಸೆಗೆ ತಣ್ಣೀರು ಎರಚಿದೆ. ಹೀಗಾಗಿ ಒಕ್ಕಲು ಮಾಡಿದ ಜೋಳವನ್ನು ರಾಶಿ ಮಾಡಲೂ ಮನಸು ಬರುತ್ತಿಲ್ಲ ಎನ್ನುತ್ತಾರೆ ತಾಲೂಕಿನ ರೈತರು.ಎರಡು ತಿಂಗಳ ಹಿಂದಷ್ಟೇ ಬಿಳಿ ಜೋಳದ ದರ ಒಂದು ಕ್ವಿಂಟಲ್‌ಗೆ ₹6 ರಿಂದ ₹7 ಸಾವಿರ ತಲುಪಿತ್ತು. ಈಗ ಒಂದು ಕ್ವಿಂಟಲ್‌ಗೆ ಜೋಳದ ಬೆಲೆ ₹3500ಕ್ಕೆ ಕುಸಿದಿದ್ದರೆ, ಉತ್ತಮ ಗುಣಮಟ್ಟದ ಬಿಳಿ ಜೋಳವನ್ನು 4,000 ರು. ಗೆ ಖರೀದಿಸುವವರೂ ಇಲ್ಲ. ತಾಲೂಕಿನಾದ್ಯಂತ ಹಿಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ಅತ್ಯಂತ ಕಡಿಮೆ ಪ್ರದೇಶದಲ್ಲಿ ಜೋಳ ಬಿತ್ತನೆಯಾಗಿದೆ.
ತಲೆಕೆಳಗಾದ ದರ ಲೆಕ್ಕ: ಕಡಿಮೆ ಪ್ರದೇಶದಲ್ಲಿ ಜೋಳ ಬಿತ್ತನೆ ಆಗಿರುವುದರಿಂದ ದಾಖಲೆ ದರ ಸಿಗುವ ನಿರೀಕ್ಷೆ ರೈತರಿಗಿತ್ತು.ಆದರೆ ಏಕಾಏಕಿ ಕುಸಿದ ದರ,ರೈತರ ಲೆಕ್ಕಾಚಾರ ತಲೆಕೆಳಗಾಗಿಸಿದೆ. ಕ್ವಿಂಟಲ್‌ಗೆ ಕನಿಷ್ಠ 8 ಸಾವಿರ ರು. ನಿರೀಕ್ಷಿಸಿದ್ದ ರೈತರು ಈಗ ನಿರೀಕ್ಷಿತ ಬೆಲೆಯ ಅರ್ಧಕ್ಕಿಂತ ಕಡಿಮೆ ದರಕ್ಕೆ ಜೋಳ ಮಾರುವಂತಾಗಿದೆ ಎನ್ನುತ್ತಾರೆ.ಮೊದಲೇ ಬರಗಾಲದಿಂದ ಕಂಗೆಟ್ಟಿರುವ ರೈತರನ್ನು ಜೋಳದ ದರ ಕುಸಿತ ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರಕಾರ ಪ್ರತಿ ಕ್ವಿಂಟಲ್‌ಗೆ 5 ಸಾವಿರ ರು. ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು. ಎರಡು ತಿಂಗಳ ಹಿಂದೆ ಕ್ವಿಂಟಲ್‌ಗೆ 8 ಸಾವಿರ ರು. ಇದ್ದಾಗ ರೈತರ ಬಳಿ ಜೋಳ ಇರಲಿಲ್ಲ. ಈಗ ರೈತರ ಬಳಿ ಜೋಳವಿದೆ. ಅದರೆ ಬೆಲೆ ಇಲ್ಲ. ದರ ಕುಸಿತಕ್ಕೆ ವರ್ತಕರೇ ಕಾರಣ. ಕೇವಲ ಲಾಭ ಗಳಿಕೆ ಉದ್ದೇಶ ಹೊಂದಿರುತ್ತಾರೆ ಎಂದು ತಾಲೂಕಿನ ರೈತರು ಆರೋಪಿಸಿದ್ದಾರೆ.