ಸಾರಾಂಶ
ಖಾಜು ಸಿಂಗೆಗೋಳ
ಕನ್ನಡಪ್ರಭ ವಾತೆ೯ ಇಂಡಿಲಿಂಬೆಗೆ ಹೆಸರುವಾಸಿಯಾಗಿ ಲಿಂಬೆ ನಾಡು ಎಂದು ಕರೆಸಿಕೊಂಡಿರುವ ಇಂಡಿ, ಚಡಚಣ ತಾಲೂಕು ಭೀಕರ ಬರಕ್ಕೂ ಗೂಳೆ ಹೋಗುವುದಕ್ಕೂ ಹೆಸರುವಾಸಿ. ಪ್ರತಿ ವರ್ಷ ಮಳೆಯಾದರೂ ಬರದಂತೆ ಕಾಣಿಸಿಕೊಳ್ಳುವ ಈ ಪ್ರದೇಶ ಸಂಪೂರ್ಣ ನೀರಾವರಿಯಾಗಬೇಕು ಎಂಬುದು ಈ ಭಾಗದ ಜನರ ಬಹುದಿನಗಳ ಒತ್ತಾಯ.
ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ನರೇಗಾ) ಇಡೀ ದೇಶದಲ್ಲಿಯೇ ಹೆಚ್ಚು ಮಾನವ ದಿನಗಳನ್ನು ಸೃಷ್ಟಿಸಿದ್ದರೂ ಜನರು ಗೂಳೆ ಹೋಗುವುದು ತಪ್ಪಿಲ್ಲ. ಅದರಲ್ಲೂ ವಿಜಯಪುರ ಜಿಲ್ಲೆಯಲ್ಲಿಯೇ ನರೇಗಾದಲ್ಲಿ ಅತೀ ಹೆಚ್ಚು ಮಾನವ ದಿನಗಳನ್ನು ಸೃಜಿಸಿದ್ದು ಇಂಡಿ ತಾಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರು ಸಹ ಇಂಡಿ ತಾಲೂಕಿನ ಹಲವು ಗ್ರಾಮಗಳಲ್ಲಿ ಅದರಲ್ಲೂ ಹೆಚ್ಚಾಗಿ ತಾಂಡಾಗಳಲ್ಲಿ ದುಡಿಯಲು ಜನರು ಗೂಳೆ ಹೋಗುತ್ತಿರುವುದು ತಪ್ಪುತ್ತಿಲ್ಲ. ಕೂಲಿ ಹುಡಿಕಿಕೊಂಡು ಗೂಳೆ ಹೋಗುವುದನ್ನು ತಪ್ಪಿಸಲು ಗ್ರಾಮೀಣ ಪ್ರದೇಶದಲ್ಲಿ ನರೇಗಾ ಯೋಜನೆ ಅನುಷ್ಠಾನಕ್ಕೆ ತಂದರೂ ಯೋಜನೆ ಗೂಳೆ ಹೋಗುವುದನ್ನು ತಪ್ಪಿಸಲು ವಿಫಲವಾಗಿದೆ. ನರೇಗಾ ಯೋಜನೆ ಅಡಿಯಲ್ಲಿ ಕೇವಲ ವಾರ್ಷಿಕ 100 ದಿನಗಳು ಮಾತ್ರ ಉದ್ಯೋಗ ನೀಡಲು ಅವಕಾಶ ಇದೆ. ಆದರೆ, ಬರದ ಹಿನ್ನೆಲೆಯಲ್ಲಿ ಅದನ್ನು 150 ದಿನಗಳ ವರೆಗೆ ಹೆಚ್ಚಿಸಿದ್ದರೂ, ಇನ್ನುಳಿದ ದಿನಗಳಿಗಾಗಿ ಕೆಲವೆಡೆ ಜನರು ಗೂಳೆ ಹೋಗುವುದು ಸಾಮಾನ್ಯವಾಗಿದೆ. ಇಂಡಿ ಹಾಗೂ ಚಡಚಣ ತಾಲೂಕಿನ ಬಹುತೇಕ ತಾಂಡಾಗಳ ಜನರು ಗೂಳೆ ಹೋಗುತ್ತಿದ್ದು, ಪ್ರತಿ ವರ್ಷ ಜೂನ್‌ನಿಂದ ಆರಂಭಗೊಂಡು ಸೆಪ್ಟೆಂಬರ್ ವರೆಗೂ ಮಕ್ಕಳ ಸಮೇತ ಗೂಳೆ ಹೋಗುವುದು ಸಾಮಾನ್ಯವಾಗಿದೆ. ಮತ್ತೆ ಅವರು ವಾಪಸ್ಸಾಗುವುದು ಫೆಬ್ರವರಿ- ಏಪ್ರೀಲ್‌ಗೆ .ಅಲ್ಲಿಯವರೆಗೆ ತಾಂಡಾದಲ್ಲಿ ಜನರಿಲ್ಲದೇ ನೀರವ ಮೌನ ಆವರಿಸಿರುತ್ತದೆ. ಅಲ್ಲಲ್ಲಿ ವಯೋವೃದ್ದರನ್ನು ಬಿಟ್ಟರೆ ಬೇರೆ ಯಾರು ನೋಡಲು ಸಿಗುವುದಿಲ್ಲ.ಮನೆಗಳಿಗೆ ಬೀಗ:ತಾಲೂಕಿನ ಹಂಜಗಿ ತಾಂಡಾ, ನಿಂಬಾಳ, ಹಡಲಸಂಗ, ಕ್ಯಾತನಕೇರಿ, ಸೂರಮುತ್ತಿನ ತಾಂಡಾ ಸೇರಿದಂತೆ ಹಲವು ತಾಂಡಾಗಳಲ್ಲಿ ಪ್ರತಿ ವರ್ಷ ಗೂಳೆ ಹೋಗುವದು ಸಾಮಾನ್ಯ. ಆದರೆ, ಈ ವರ್ಷ ಭೀಕರ ಬರ ಹಿನ್ನಲೆಯಲ್ಲಿ ತಾಂಡಾ ಸೇರಿದಂತೆ ಗ್ರಾಮೀಣ ಭಾಗದ ಬಡ ಕುಟುಂಬಗಳು ಗೂಳೆ ಹೋಗುತ್ತಿದ್ದಾರೆ. ತಾಂಡಾದ ಪ್ರತಿ ಮನೆಗೂ ಬೀಗ ಹಾಕಿರುವುದು ಕಾಣುತ್ತೇವೆ. ಮನೆಯ ಕಾವಲಿಗಾಗಿ ಮನೆಯ ಸುತ್ತಮುತ್ತ ಮುಳ್ಳುಗಂಟಿಗಳನ್ನು ಹಾಕಿರುವುದು ಕಂಡುಬರುತ್ತದೆ. ವಾಪಸ್ ಬರುವವರೆಗೆ ಮುಳ್ಳಿನ ಬೇಲಿಯೇ ಇವರ ಮನೆಯ ಕಾವಲು.
ಮಕ್ಕಳು ಶಿಕ್ಷಣದಿಂದ ವಂಚಿತನರೇಗಾ ಯೋಜನೆ ಅಡಿಯಲ್ಲಿ ಕೂಲಿಕೆಲಸಕ್ಕಾಗಿ ದುಡಿಯಲು ಬಂದ ಕುಟುಂಬಗಳ ಮಕ್ಕಳ ಪಾಲನೆ, ಪೋಷಣೆಗೆ ಕೂಸಿನ ಮನೆಯನ್ನು ಆರಂಭಿಸಿದರೂ, ತಾಂಡಾದ ಜನರು ಮಾತ್ರ ತಮ್ಮ ಮಕ್ಕಳನ್ನೊಳಗೊಂಡು ಗೂಳೆ ಹೋಗುತ್ತಿದ್ದಾರೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂಬ ಪರಿಜ್ಞಾನ ಇದ್ದರೂ ತುತ್ತಿನ ಚೀಲ ತುಂಬಿಸಿಕೊಳ್ಳಲು ಮಕ್ಕಳನ್ನ ಕಟ್ಟಿಕೊಂಡು ದುಡಿಯಲು ಹೋಗುತ್ತಾರೆ. ಹೀಗಾಗಿ, ತಾಂಡಾದ ಬಡ ಮಕ್ಕಳು ಬರದಿಂದಾಗಿ ಶಿಕ್ಷಣದಿಂದ ಕೂಡ ವಂಚಿತರಾಗುತ್ತಿದ್ದಾರೆ.ನರೇಗಾ ಜೊತೆ ಬರ ಕಾಮಗಾರಿ ಆರಂಭಿಸಿ:
ನರೇಗಾ ಹೆಸರಿನಲ್ಲಿ ಕೂಲಿಕೊಡುತ್ತಿದ್ದೇವೆ ಎಂದು ಸರ್ಕಾರಗಳು ಹೇಳುತ್ತಿರುವುದನ್ನು ಬಿಟ್ಟು ಸಧ್ಯದ ಪರಿಸ್ಥಿತಿಗೆ ತಕ್ಕಂತೆ ಪ್ರತಿ ದಿನ ಒಬ್ಬ ವ್ಯಕ್ತಿಗೆ ಎಷ್ಟು ಸಾಕಾಗುವುದೊ ಅಷ್ಟು ಪ್ರಮಾಣದಲ್ಲಿ ಕೂಲಿ ಹಣ ನೀಡಿ. ಜೊತೆಗೆ ಬರ ಕಾಮಗಾರಿಗಳನ್ನು ಆರಂಭಿಸಬೇಕು. ನರೇಗಾ ಯೋಜನೆಯಡಿಯಲ್ಲಿ ನೀಡುವ ಕೂಲಿ ಹಣ ನಿತ್ಯದ ಬದುಕಿಗೆ ಸಾಕಾಗುವುದಿಲ್ಲ ಎಂದು ಜನರು ಗೂಳೆ ಹೋಗುತ್ತಿದ್ದಾರೆ. ಹೀಗಾಗಿ ನರೇಗಾ ಕೂಲಿ ಹಣ ಹೆಚ್ಚಿಸಬೇಕು. ಇದರ ಜೊತೆಗೆ ಬರ ಕಾಮಗಾರಿಗಳನ್ನು ಆರಂಭಿಸಿ ದುಡಿಯುವ ಕೈಗಳಿಗೆ ಕೆಲಸ ಕೊಟ್ಟು ಗೂಳೆ ಹೋಗುವದನ್ನು ತಪ್ಪಿಸಲು ವಿಶೇಷ ಬರ ಪರಿಹಾರ ಪ್ಯಾಕೇಜ್ ಘೋಷಿಸಬೇಕು ಎಂಬುದು ಸ್ಥಳೀಯರ ಆಗ್ರಹ.ತಾಲೂಕಿನ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಯೋಜನೆಯ ಕಾಮಗಾರಿಗಳನ್ನು ಸದಸ್ಯರೇ ಮಾಡುತ್ತಿದ್ದಾರೆ ಎಂಬ ಆರೋಪ ಇದೆ. ನರೇಗಾ ಯೋಜನೆ ಕಾಮಗಾರಿಯನ್ನು ಮಾನವ ದಿನಗೂಲಿ ಎಂದು ಕೆಲಸ ಮಾಡಬೇಕು ಎಂಬ ನಿಯಮ ಇದೆ. ಗ್ರಾಮದ ವಯಸ್ಕರರಿಂದ ಹಿಡಿದು, ವೃದ್ದರವೆಗೆ ಜಾಬ್ ಕಾರ್ಡ ಸೃಷ್ಟಿ ಮಾಡಿ, ಕೂಲಿಕಾರರ ಹೆಸರಿಗೆ ಜಮಾ ಆಗುವ ನರೇಗಾ ಕೂಲಿ ಹಣವನ್ನು ಮನೆಗೆ ಹೋಗಿ ಇಸಿದುಕೊಂಡು ಬರುವ ಪರಿಪಾಠ ತಾಲೂಕಿನಲ್ಲಿ ನಡೆಯುತ್ತಿದೆ. ಹೀಗಾಗಿ ದುಡಿಯುವ ಕೈಗಳಿಗೆ ಕೆಲಸ ಸಿಗದೆ ಗೂಳೆ ಹೋಗುವುದ ಅನಿವಾರ್ಯವಾಗಿದೆ.ಕೊಟ್ 1: .ತಾಲೂಕಿನಲ್ಲಿ ಬರ ಕಾಮಗಾರಿ ಕೈಗೊಳ್ಳಲು ತಾಪಂ ವತಿಯಿಂದ ನರೇಗಾ ಯೋಜನೆ ಅಡಿಯಲ್ಲಿ ಅನುದಾನ ಲಭ್ಯ ಇದೆ. ಕುಡಿಯುವ ನೀರಿನ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಕುಡಿಯುವ ನೀರಿಗಾಗಿ ಅನುದಾನವೂ ಇದೆ.
-ಮಂಜುಳಾ ನಾಯಕ, ತಹಸೀಲ್ದಾರ್, ಇಂಡಿ.ಕೊಟ್ 2:
ಬರಗಾಲದ ಪರಿಸ್ಥಿತಿಯಲ್ಲಿ ಯಾವುದೇ ಗ್ರಾಮದಲ್ಲಿ ಕೆಲಸವಿಲ್ಲದೆ ಗೂಳೆ ಹೋಗುವುದನ್ನು ತಪ್ಪಿಸಲು ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಉದ್ಯೋಗ ನೀಡಬೇಕು. ಯಾವುದೇ ಗ್ರಾಮದಲ್ಲಿ ಉದ್ಯೋಗವಿಲ್ಲದೆ ಜನ ಗೂಳೆ ಹೋಗುವುದು ಕಂಡು ಬಂದರೆ ಅಂತಹ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸೂಚಿಸಿದ್ದೇನೆ. ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿ ಯಂತ್ರದ ಮೂಲಕ ಕೈಗೊಂಡರೆ ಅಂತಹ ಕಾಮಗಾರಿ ಮಾಹಿತಿ ನೀಡಿದರೆ ಸಂಬಂಧಿಸಿದ ಪಿಡಿಒ ಮೇಲೆ ಕ್ರಮಕೈಗೊಳ್ಳಲಾಗುತ್ತದೆ.-ಸಂಜಯ ಖಡಗೇಕರ,ಇಒ(ಪ್ರಭಾರ) ತಾಪಂ ಇಂಡಿ.ಕೊಟ್ 3:ಭೀಕರ ಬರದಿಂದ ಕೆಲಸವಿಲ್ಲದ್ದಕ್ಕಾಗಿ ತಾಂಡಾದ ಬಹುತೇಕ ಜನರು ಗೂಳೆ ಹೋಗಿದ್ದಾರೆ. ನರೇಗಾ ಯೋಜನೆಯಡಿಯಲ್ಲಿ ನೀಡು ಕೂಲಿ ಹಣ ಕುಟುಂಬ ನಿರ್ವಹಣೆಗೆ ಸಾಕಾಗುವುದಿಲ್ಲ. ಕನಿಷ್ಠ ದಿನಕ್ಕೆ ₹ 600 ಒಬ್ಬರಿಗೆ ಕೂಲಿ ನೀಡಿದರೆ ಅನುಕೂಲವಾಗುತ್ತದೆ. ಮನೆ ಉಪಯೋಗಿ ವಸ್ತುಗಳು, ತರಕಾರಿ, ಆಹಾರ ಧಾನ್ಯದ ಬೆಲೆಗಳು ಗಗನಕ್ಕೆ ಏರಿವೆ. ನರೇಗಾ ಕೂಲಿಹಣ ಇದಕ್ಕೆ ಸಾಕಾಗುವುದಿಲ್ಲ. ಇಂದಿನ ಪರಿಸ್ಥಿತಿಗೆ ತಕ್ಕಂತೆ ಕೂಲಿ ಹಣ ನೀಡಿದರೆ ಮಾತ್ರ ಕೆಲಸಕ್ಕೆ ಬರುತ್ತಾರೆ. ಇಲ್ಲವಾದರೆ ಗೂಳೆ ಹೋಗುವುದು ಅನಿವಾರ್ಯ. ಹೀಗಾಗಿ ನರೇಗಾ ಕೂಲಿ ಹಣ ಹೆಚ್ಚಳವಾಗಬೇಕು ಅಂದಾಗ ಯೋಜನೆ ಯಶಸ್ವಿಯಾಗುತ್ತದೆ.-ಗಣಪತಿ ರಾಠೋಡ, ವಿಜಯನಗರ (ಹಡಲಸಂಗ) ತಾಂಡಾ.