ಸಾರಾಂಶ
ಭೂ ವರಹನಾಥ ಕ್ಷೇತ್ರವು ರಾಜ್ಯದ ಪ್ರಮುಖ ತೀರ್ಥ ಕ್ಷೇತ್ರವಾಗಿ ಅಭಿವೃದ್ಧಿ ಹೊಂದುತ್ತಿದೆ. ಭೂ ವೈಕುಂಠ ವೆಂದೇ ಪ್ರಖ್ಯಾತಿ ಗಳಿಸಿರುವ ಕ್ಷೇತ್ರದ ಮಣ್ಣಿಗೆ ವಿಶೇಷ ಶಕ್ತಿಯಿದೆ. ಸ್ವಾಮಿಯ ಕೃಪೆ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಶೀರ್ವಾದ ಬಲದಿಂದ ಇಂದು ರಾಜ್ಯಪಾಲ ಹುದ್ದೆಗೇರಿದ್ದೇನೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಪುರಾಣ ಪ್ರಸಿದ್ಧ ಭೂವರಾಹನಾಥ ಕಲ್ಲಹಳ್ಳಿಗೆ ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಕುಟುಂಬ ಸಮೇತ ಭೇಟಿ ನೀಡಿ ಭೂ ವರಾಹನಾಥನಿಗೆ ವಿಶೇಷ ಪೂಜೆ ಸಲ್ಲಿಸಿದರು.ಪತ್ನಿ, ಪುತ್ರ ಹಾಗೂ ಪುತ್ರಿಯೊಂದಿಗೆ ಆಗಮಿಸಿದ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಅವರನ್ನು ದೇವಾಲಯ ವ್ಯವಸ್ಥಾಪನ ಸಮಿತಿಯ ಮ್ಯಾನೇಜಿಂಗ್ ಟ್ರಸ್ಟಿ ಶ್ರೀನಿವಾಸ ರಾಘವನ್ ನೇತೃತ್ವದಲ್ಲಿ ವೇದಮಂತ್ರಗಳನ್ನು ಪಠಿಸಿ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.
ದೇವಾಲಯ ಪ್ರದಕ್ಷಿಣೆ ಮಾಡಿದ ರಾಜ್ಯಪಾಲರು ವಿಶೇಷ ಪೂಜೆ ಸಲ್ಲಿಸಿ ಭೂ ವರಹನಾಥ ಸ್ವಾಮಿಗೆ ಧೀರ್ಘ ದಂಡ ನಮಸ್ಕಾರ ಹಾಕಿ ತಮ್ಮ ಭಕ್ತಿ ಪ್ರದರ್ಶನ ಮಾಡಿದರು.ಭೂ ವರಹನಾಥ ಕ್ಷೇತ್ರವು ರಾಜ್ಯದ ಪ್ರಮುಖ ತೀರ್ಥ ಕ್ಷೇತ್ರವಾಗಿ ಅಭಿವೃದ್ಧಿ ಹೊಂದುತ್ತಿದೆ. ಭೂ ವೈಕುಂಠ ವೆಂದೇ ಪ್ರಖ್ಯಾತಿ ಗಳಿಸಿರುವ ಕ್ಷೇತ್ರದ ಮಣ್ಣಿಗೆ ವಿಶೇಷ ಶಕ್ತಿಯಿದೆ. ಸ್ವಾಮಿಯ ಕೃಪೆ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಶೀರ್ವಾದ ಬಲದಿಂದ ಇಂದು ರಾಜ್ಯಪಾಲ ಹುದ್ದೆಗೇರಿದ್ದೇನೆ ಎಂದರು.
ಶ್ರೀ ಕ್ಷೇತ್ರಕ್ಕೆ ಆಗಮಿಸಿದ ರಾಜ್ಯಪಾಲರನ್ನು ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ತಮ್ಮ ಬೆಂಬಲಿಗರೊಂದಿಗೆ ಸ್ವಾಗತಿಸಿದರು. ದೇಗುಲದ ಟ್ರಸ್ಟಿ ಶ್ರೀನಿವಾಸ ರಾಘವನ್, ತಹಸೀಲ್ದಾರ್ ಆದರ್ಶ, ತಾಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ, ಉಪಾಧ್ಯಕ್ಷ ಭಾರತೀಪುರ ಪುಟ್ಟಣ್ಣ, ಮೂಡಾ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್, ಪುರಸಭೆ ಸದಸ್ಯ ಬಸ್ ಸಂತೋಷ್ ಕುಮಾರ್, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಶೀಳನೆರೆ ಭರತ್, ಪ್ರಮೀಳಾ ವರದರಾಜೇಗೌಡ, ನಗರ ಮಹಿಳಾ ಘಟಕದ ಅಧ್ಯಕ್ಷೆ ಡಾ. ಚಂದ್ರಕಲಾ ರಮೇಶ್, ಚೋಕನಹಳ್ಳಿ ಪ್ರಕಾಶ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಹಾಜರಿದ್ದರು.ನಾಗಮಂಗಲ ಡಿವೈಎಸ್ಪಿ ಡಾ. ಸುಮೀತ್, ಇನ್ಸ್‌ಪೆಕ್ಟರ್ ಆನಂದೇಗೌಡ ಸೂಕ್ತ ರಕ್ಷಣಾ ವ್ಯವಸ್ಥೆ ಮಾಡಿದ್ದರು.